ಕಿಕ್ಕೇರಿ: ಕಾಂಗ್ರೆಸ್ ಸರ್ಕಾರದಿಂದ ಅನುದಾನ ಬಿಡುಗಡೆ ಆಗದಿರುವುದರಿಂದ ಸ್ಥಳೀಯ ಮುಖಂಡರ ಮುತುವರ್ಜಿಯಿಂದ ಗ್ರಾಮಾಭಿವೃದ್ಧಿ ಕಾಣಬಹುದಾಗಿದೆ ಎಂದು ಶಾಸಕ ಎಚ್.ಟಿ. ಮಂಜು ಹೇಳಿದರು.
ಹೋಬಳಿಯ ಐಕನಹಳ್ಳಿ ಗ್ರಾಮದ ರಾಜೀವಗಾಂಧಿ ಸೇವಾ ಕೇಂದ್ರ ಕಟ್ಟಡದ ಮೇಲ್ಭಾಗದಲ್ಲಿ ವರ್ಗ 1ರ ಅನುದಾನದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿತವಾದ ಸಭಾಂಗಣ ಉದ್ಘಾಟಿಸಿ ಮಾತನಾಡಿ, ಗ್ರಾಪಂಗಳಲ್ಲಿ ಇರುವಂತಹ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕಲೆ ಮೈಗೂಡಿಸಿಕೊಳ್ಳಿ. ಜತೆಗೆ ಸ್ಥಳೀಯ ಸಂಪನ್ಮೂಲವನ್ನು ಕ್ರೋಡೀಕರಿಸಿಕೊಂಡು ಗ್ರಾಮಾಭಿವೃದ್ಧಿಗೆ ಮುಂದಾಗಿ. ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಗ್ರಾಮ ಅಭಿವೃದ್ಧಿಗೆ ಸಾಕಷ್ಟು ಅನುದಾನ ಸಿಗಲಿದ್ದು ಸದ್ಭಳಕೆ ಮಾಡಿಕೊಳ್ಳಿ ಎಂದರು.
ಕೇಂದ್ರ ಸರ್ಕಾರದ ಎನ್‌ಆರ್‌ಎಂಎಲ್ ಯೋಜನೆಯಡಿ 17.5 ಲಕ್ಷ ರೂ. ವೆಚ್ಚದಲ್ಲಿ ಸಂಜೀವಿನಿ ಶೆಡ್ ಐಕನಹಳ್ಳಿ ಗ್ರಾಪಂ. ವ್ಯಾಪ್ತಿಯ ಅಂಕನಹಳ್ಳಿಯಲ್ಲಿ ನಿರ್ಮಿಸಲಾಗಿದೆ. ಜಿಲ್ಲೆಯಲ್ಲಿ ಕೇವಲ 4 ಶೆಡ್ ಮಾತ್ರ ನಿರ್ಮಿತವಾಗಿದ್ದು, ಇದರಲ್ಲಿ ಈ ಗ್ರಾಪಂ ವ್ಯಾಪ್ತಿ ಸೇರಿರುವುದು ಖುಷಿಯ ಸಂಗತಿ. ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನಕ್ಕೆ ಬರವಾಗಿದೆ. ಹೋರಾಟದ ಫಲವಾಗಿ ರಸ್ತೆ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ ನೀಡುತ್ತಿದೆ. ಅಗತ್ಯವಿರುವ ಗ್ರಾಮಗಳಿಗೆ ರಸ್ತೆ ಅಭಿವೃದ್ಧಿಗಾಗಿ 10 ಲಕ್ಷ ರೂ. ಬಳಕೆ ಮಾಡಲಾಗುವುದು ಎಂದು ನುಡಿದರು.
ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿರ್ದೇಶಕ ಚೋಳೇನಹಳ್ಳಿ ಪುಟ್ಟಸ್ವಾಮಿಗೌಡ ಮಾತನಾಡಿ, ಸರ್ಕಾರಕ್ಕೆ ಅನುದಾನದ ಬರವಿದೆ. ಆದರೆ ಗ್ಯಾರಂಟಿಗೆ ಹಣವಿದೆ. ಗ್ಯಾರಂಟಿ ಭಾಗ್ಯದಿಂದ ಅಭಿವೃದ್ಧಿ ಕಾರ್ಯವೂ ಇಲ್ಲವಾಗಿದೆ. ಮ-ನರೇಗಾ ಯೋಜನೆಯಡಿ 40ಕ್ಕೂ ಅಧಿಕ ಕಾಮಗಾರಿ ಮಾಡಬಹುದಾಗಿದೆ. ಸ್ಥಳೀಯ ಸಂಪನ್ಮೂಲ ಹೆಚ್ಚಳಕ್ಕೆ ತೆರಿಗೆ ವಸೂಲಾತಿಗೆ ವಿಶೇಷ ಗಮನಹರಿಸಬೇಕು ಎಂದು ಮನವಿ ಮಾಡಿದರು.
ಸಂಜೀವಿನಿ ಶೆಡ್ ನಿರ್ಮಾಣಕ್ಕೆ ಸ್ಥಳ ದಾನ ಮಾಡಿದ ಅಂಕನಹಳ್ಳಿ ಗ್ರಾಮದ ಕೃಷ್ಣೇಗೌಡ ಹಾಗೂ ಅಣ್ಣೇಗೌಡ ಕುಟುಂಬದವರನ್ನು ಗೌರವಿಸಲಾಯಿತು.
ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳ ಆಸ್ತಿಗಳಿಗೆ ಇ-ಸ್ವತ್ತು ನೋಂದಣಿ ದಾಖಲೆ ನೀಡಲಾಯಿತು. ಶೇ. 20ರ ಅಡಿ ಅನುದಾನದಲ್ಲಿ ಅರ್ಹ 25 ಎಸ್‌ಸಿ, ಎಸ್‌ಟಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.
ಐಕನಹಳ್ಳಿ ಗ್ರಾಪಂ. ಅಧ್ಯಕ್ಷೆ ಸುಧಾ ದೇವರಾಜೇಗೌಡ, ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಂ. ಕಿರಣ್, ಕಿಕ್ಕೇರಿ ಕೆಪಿಎಸ್ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುಷ್ಮಾ, ಸಿಡಿಪಿಒ ಅರುಣಕುಮಾರ್, ಪಿಡಿಒ ವಿಜಯ್, ಗ್ರಾಪಂ. ಉಪಾಧ್ಯಕ್ಷ ಪ್ರಸನ್ನ, ಸದಸ್ಯರಾದ ಎ.ಎಸ್. ಮಂಜೇಗೌಡ, ಕೆ.ಎನ್. ಕುಮಾರ್, ಶಂಕರ್, ಇ.ರಾಜು, ಅಶೋಕನಾಯಕ್, ಅಂಬುಜಾ ಉದಯಶಂಕರ್, ನಂಜುಂಡೇಗೌಡ, ಐ.ಆರ್. ಸುಮಿತ್ರಾ ಶಂಭುಲಿಂಗಯ್ಯ, ಕವಿತಾ ರವಿ, ನಾಗಮಣಿ ಶಿವಣ್ಣ, ಪಲ್ಲವಿ ವೆಂಕಟೇಶ್, ಭಾರತಿ ಬಲರಾಮ್, ಭಾಗ್ಯಮ್ಮ ಆಶೋಕ ನಾಯಕ್ ಇದ್ದರು.