ಹಾವೇರಿ: ತಾಲೂಕಿನ ಗುತ್ತಲದ ಚಂದ್ರಶೇಖರ ದೇವಾಲಯದ ಬಳಿ ಅಪರೂಪದ ಶಿಲ್ಪ ಹಾಗೂ ಬರ ಬಂದು ಸತ್ತ ವ್ಯಕ್ತಿಗಳ ಶವಸಂಸ್ಕಾರ ಮಾಡಿದ ಮೊದಲ ಶಾಸನ ದೊರೆತಿದೆ.
ವಿಜಯನಗರ ಜಿಲ್ಲೆ ಹಂಪಿ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ನಿರ್ದೇಶಕ ಡಾ. ಆರ್. ಶೇಜೇಶ್ವರ ಈ ಶಾಸನ ಪತ್ತೆ ಮಾಡಿದ್ದಾರೆ. ಈ ಕುರಿತು ವಿವರಣೆ ನೀಡಿರುವ ಅವರು, ಕನ್ನಡ ಶಾಸನ ಹಾಗೂ ಶಿಲ್ಪಲೋಕಕ್ಕೆ ಇದೊಂದು ಹೊಸದಾಗಿದ್ದು ಮರುಳಯ್ಯ ಎಂಬ ವ್ಯಕ್ತಿಯ ಎಡಬಲಗಳಲ್ಲಿ ಶಾಸನವಿದೆ. ಬಲಗಡೆ 20 ಸಾಲು ಹಾಗೂ ಎಡಗಡೆ 13 ಸಾಲುಗಳ ಕನ್ನಡ ಶಾಸನವಿದೆ. ಈವರೆಗೂ ಶಾಸನ ಎಲ್ಲಿಯೂ ಪ್ರಕಟವಾಗಿಲ್ಲ, ಹಾಗಾಗಿ ಇದು ಹೊಸ ಶೋಧವಾಗಿದೆ ಎಂದು ತಿಳಿಸಿದ್ದಾರೆ.
ಶಾಸನದ ಸಾರ...
ಗುತ್ತಲದ ಮೂಲಸ್ಥಾವರಕ್ಕೆ ಆಧೀನನಾದ ನನ್ನಿದೇವ ಒಡೆಯನ ಮಗ ಮರುಳ್ಯಯ ಎಂಬುವವನು ತಮ್ಮನ್ನಾಳುವ ಸೀಮೆಯ ಒಡೆಯನಾದ ಪಟ್ಟದ ತಿಮ್ಮಸ್ವಾಮಿಯರಿಗೆ ಪುಣ್ಯವಾಗಲಿ ಎಂದು 6307 ಹೆಣಗಳನ್ನು ಝಲ್ಲಿ( ಬುಟ್ಟಿ)ಯಲ್ಲಿ ಹೊತ್ತುಕೊಂಡು ಹೋಗಿ ಸಮಾಧಿ ಮಾಡಿದ್ದಾಗಿ ಬಲಬದಿಯ ಶಾಸನವು ದಾಖಲು ಮಾಡಿದೆ. ಇನ್ನು ಎಡಬದಿಯ ಶಾಸನವು ಶಾಲಿವಾಹನ ಶಕವರ್ಷ 1462 'ಬರ' ಬಂದ ವಿಕಾರಿ ಸಂವತ್ಸರ ಭಾದ್ರಪದ ಶುಕ್ಲ 5 ರಂದು ಬಸವೇಶ್ವರನ ಪಾದಹಿಡಿದು ಈ ಶಿಲ್ಪವನ್ನು ಪ್ರತಿಷ್ಠೆ ಮಾಡಿದರು ಎಂಬುವ ವಿಷಯ ತಿಳಿಸುತ್ತದೆ. ಇಲ್ಲಿ ದಾಖಲಾದ ಕಾಲವು ಕ್ರಿ.ಶ. 1539 ಆಗಸ್ಟ್ 18 ಸೋಮವಾರಕ್ಕೆ ಸರಿ ಹೊಂದುತ್ತದೆ. ಈ ಅವಧಿಯಲ್ಲಿ ವಿಜಯನಗರವನ್ನು ಅಚ್ಯುತರಾಯ ರಾಜನು ರಾಜ್ಯಭಾರ ಮಾಡುತ್ತಿದ್ದನು.
ಕ್ರಿ.ಶ. 1539 ರಲ್ಲಿ ಗುತ್ತಲದ ಪ್ರದೇಶದ ವ್ಯಾಪ್ತಿಯಲ್ಲಿ ರಣಭೀಕರವಾದ ಬರಗಾಲ ಬಂದಾಗ ಈ ಬರಗಾಲಕ್ಕೆ ಸಿಕ್ಕು ಸಾವಿರಾರು ಜನರ ಸಾವುಗಳಾಗುತ್ತವೆ. ಹೀಗೆ ಸತ್ತ ಜನರ ಅನಾಥ ಶವಗಳು ಚಲ್ಲಾಪಿಲ್ಲಿಯಾಗಿ ಬಿದ್ದಾಗ ಆ ಹೆಣಗಳನ್ನು ಮರುಳ್ಯಯ ಎಂಬ ವ್ಯಕ್ತಿ ಶವಸಂಸ್ಕಾರ ಮಾಡುತ್ತಾನೆ. ಇವನು ಸಂಸ್ಕಾರ ಮಾಡಿದ ಮನುಷ್ಯರ ಶವಗಳ ಸಂಖ್ಯೆ ಬರೊಬ್ಬರಿ 6307 ಎಂಬುದೇ ಮುಖ್ಯ ವಿಷಯ. ಇಡೀ ವಿಶ್ವದಲ್ಲಿ ವ್ಯಕ್ತಿಯೊಬ್ಬ 6307 ಶವಗಳನ್ನು ತನ್ನ ತಲೆಯಮೇಲೆ ಹೊತ್ತು ಸಮಾಧಿ ಮಾಡಿದ್ದು ಇದೇ ಮೊದಲು. ಮತ್ತು ಘನಘೋರವಾದ ಬರಗಾಲದ ಉಲ್ಲೇಖವನ್ನು ಹೊಂದಿದ ಇದೇ ಮೊದಲ ಶಾಸನವಾಗಿದೆ.
ಶಾಸನ ಶಿಲ್ಪ...
ಶಿಲ್ಪದಲ್ಲಿ ಮರುಳ್ಯಯನು ಗಂಡುಗಚ್ಚೆಯನ್ನು ಕಟ್ಟಿ ತಲೆಯಮೇಲೆ ಝಲ್ಲೆಯಲ್ಲಿ ಎರಡು ಶವಗಳನ್ನು ಹೊತ್ತು ನಿಂತಿದ್ದಾನೆ. ಝಲ್ಲೆಯಲ್ಲಿ ಶವಗಳನ್ನು ಅಡ್ಡಡ್ಡವಾಗಿ ಮಲಗಿಸಲಾಗಿದೆ. ಎರಡೆರಡು ಜೀವಗಳನ್ನು ಹೊರುವ ಭೀಮಕಾಯ ಅವನಲ್ಲಿ ಇತ್ತು ಎಂಬಂತೆ ಬಲಾಢ್ಯದೇಹವನ್ನು ಶಿಲ್ಪದಲ್ಲಿ ತೋರಿಸಲಾಗಿದೆ. ವೀರಮೀಸೆ, ಇಳಿಬಿದ್ದ ಗಡ್ಡ, ಗಡ್ಡದ ಕೊನೆಗೆ ನಾಗಜಡೆಯನ್ನು ಮುಖದಲ್ಲಿ ಕಾಣಬಹುದು. ಹಣೆಯಲ್ಲಿ ವಿಭೂತಿ ಧರಿಸಿದ ಮರುಳಯ್ಯ ತಲೆಗೆ ರುಮಾಲು ಸುತ್ತಿದ್ದಾನೆ. ಎಡಗೈಲಿ ಹೆಣದ ಝಲ್ಲೆ ಹಾಗೂ ಬಲಗೈಲಿ ಚಾಮರ ಹಿಡಿದಿದ್ದಾನೆ. ಇವನ ಎಡಬದಿಗೆ ಅನಾಥಶವಗಳ ಸಂಸ್ಕಾರ ಮಾಡಿದ ಪುಣ್ಯಕ್ಕೆ ಸಾಕ್ಷಿ ಎಂಬಂತೆ ಶಿವಲಿಂಗವನ್ನು ಕೆತ್ತಲಾಗಿದೆ.
ಡಾ. ರವಿಕುಮಾರ ನವಲಗುಂದ ಹಾಗೂ ಡಾ. ಚಾಮರಾಜ ಕಮ್ಮಾರ ಶಾಸನ ಪತ್ತೆ ಕಾರ್ಯದಲ್ಲಿದ್ದರು.