ನ್ಯೂಸ್

ಬಡಗಲಪುರದಲ್ಲಿ ಹುಲಿ ಪತ್ತೆಗೆ ಕೂಂಬಿಂಗ್

ಸರಗೂರು: ತಾಲೂಕಿನ ಬಡಗಲಪುರ ಗ್ರಾಮದ ಜಮೀನಿನಲ್ಲಿ ಹುಲಿ ಘರ್ಜನೆ ಕೇಳಿಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ಸೆರೆಗೆ ಕೂಂಬಿಂಗ್ ನಡೆಸಿದರೂ ಹುಲಿ ಕುರುಹು ಪತ್ತೆಯಾಗಲಿಲ್ಲ.

ರೈತನ ಮೇಲೆ ದಾಳಿ ನಡೆಸಿದ್ದ ಹುಲಿ ಸೆರೆ ಹಿಡಿದ ಬೆನ್ನಲೇ ಶನಿವಾರ ರಾತ್ರಿ ಮತ್ತೊಂದು ಹುಲಿಯ ಘರ್ಜನೆ ಕೇಳಿ ಗ್ರಾಮಸ್ಥರು ಆತಂಕಕ್ಕೆ ಒಳಗಾದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಶನಿವಾರ ತಡರಾತ್ರಿ ಮೂರು ಗಂಟೆವರೆಗೂ ಕೂಂಬಿಂಗ್ ನಡೆಸಿದರು. ಆದರೆ, ಯಾವುದೇ ಶಬ್ದವಾಗಲಿ, ಹುಲಿ ಇರುವ ಕುರುಹಾಗಲಿ ಸಿಗಲಿಲ್ಲ. ತಡರಾತ್ರಿ ನಾಲ್ಕು ಗಂಟೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಿದರು.

ಮತ್ತೆ ಸೋಮವಾರ ಬೆಳಗ್ಗೆಯಿಂದಲೇ ಮೂರು ಸಾಕಾನೆಗಳಾದ ಭೀಮ, ಮಹೇಂದ್ರ, ಭಗೀರಥ ಆನೆಗಳನ್ನು ಬಳಸಿಕೊಂಡು ಗ್ರಾಮದ ಜಮೀನು, ಕೆರೆ ಸೇರಿದಂತೆ ಅರಣ್ಯದಂಚಿನಲ್ಲಿ ಕೂಂಬಿಂಗ್ ನಡೆಸಿದರು. ನುಗು ವನ್ಯಜೀವಿ ವಲಯ, ಬೇಗೂರು, ಹೆಡಿಯಾಲ, ಗುಂಡ್ರೆ, ಐನೂರು ಮಾರಿಗುಡಿ ವಲಯದಿಂದ 80ಕ್ಕೂ ಹೆಚ್ಚು ಸಿಬ್ಬಂದಿ ತಂಡ ರಚಿಸಿಕೊಂಡು ಕೂಂಬಿಂಗ್ ನಡೆಸಲಾಯಿತು.

ಮೂರು ಆನೆಗಳು, ಅರಿವಳಿಕೆ ತಜ್ಞರಾದ ಡಾ. ವಾಸಿಂ ಮಿರ್ಜಾ, ಡಾ.ರಮೇಶ್, ಶಾರ್ಪ್‌ಶೂಟರ್ ರಂಜನ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಮಂಗಳವಾರವೂ ಕಾರ್ಯಾಚರಣೆ ನಡೆಸಲಾಗುವುದು ಎಂದು ನುಗು ವನ್ಯಜೀವಿ ವಲಯದ ಅರಣ್ಯಾಧಿಕಾರಿ ವಿವೇಕ್ ತಿಳಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಯಾರೂ ಜಮೀನಿನತ್ತ ಹೋಗಬಾರದು. ಅರಣ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಗ್ರಾಮಸ್ಥರಿಗೆ ಮನವಿ ಮಾಡಿದರು.

ಆರ್‌ಎಫ್‌ಒಗಳಾದ ವಿವೇಕ್, ವೈರಮುಡಿ, ರಾಜೇಶ್, ಅಮೃತೇಶ್, ರಾಮಾಂಜನೇಯ, ಅಮೃತಾ, ಮುನಿರಾಜು ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಧನ ಸಹಾಯ: ಹುಲಿ ದಾಳಿಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡಗಲಪುರ ಗ್ರಾಮದ ಮಹದೇವಗೌಡ ಅವರ ಮನೆಗೆ ಭೇಟಿ ನೀಡಿದ ನುಗು ವಲಯದ ಆರ್‌ಎಫ್‌ಒ ವಿವೇಕ್ ಅವರು ಮಾದೇಗೌಡ ಪತ್ನಿ ಅವರಿಗೆ ಅರಣ್ಯ ಇಲಾಖೆಯಿಂದ 50 ಸಾವಿರ ರೂ.ಧನ ಸಹಾಯ ನೀಡಿದರು. ಗಂಗಾಧರ್, ಗ್ರಾಮಸ್ಥರು ಹಾಜರಿದ್ದರು.