ನ್ಯೂಸ್

ಬಿಎಂಟಿಸಿ ಅಧಿಕಾರಿಗಳ ಸಹಿಯನ್ನ ಕಲರ್ಸ್‌ ಜೆರಾಕ್ಸ್ ಮಾಡಿ ಕೋಟ್ಯಂತರ ವಂಚನೆ

ಬೆಂಗಳೂರು: ಕೋಟ್ಯಂತರ ರೂ. ವಂಚನೆ ಮಾಡಿದ ಆರೋಪದ ಮೇಲೆ ಬಿಎಂಟಿಸಿ ಹಿರಿಯ ಅಧಿಕಾರಿಯನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ.

ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಶ್ರೀರಾಮ್ ಮುಲ್ಕವಾನ್ ಬಂಧಿತ. ತಪ್ಪಿಸಿಕೊಂಡಿರುವ ಬಿಎಂಟಿಸಿ ಕೇಂದ್ರ ಕಚೇರಿ ಅಂಕಿ-ಅಂಶ ಅಧಿಕಾರಿ ಶ್ಯಾಮಲಾ.ಎಸ್.ಮದ್ದೋಡಿ, ಸಹಾಯಕ ಸಂಚಾರ ವ್ಯವಸ್ಥಾಪಕಿ ಬಿ.ಕೆ.ಮಮತ, ಸಹಾಯಕ ಸಂಚಾರ ಅಧೀಕ್ಷಕಿ ಟಿ.ಅನಿತಾ, ಕಿರಿಯ ಸಹಾಯಕ ಪ್ರಕಾಶ್ ಕೊಪ್ಪಳ, ಸಹಾಯಕ ಸಂಚಾರ ನಿರೀಕ್ಷಕಿ ಗುಣಶೀಲ, ಕಿರಿಯ ಸಹಾಯಕ ಆರ್.ವೆಂಕಟೇಶ್ ಪತ್ತೆಗೆ ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 3 ವರ್ಷಗಳ ಅವಧಿಯಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರ ಮತ್ತು ನಿರ್ದೇಶಕರ ಸಹಿ ನಕಲಿ ಮಾಡಿ ಸಂಸ್ಥೆಗೆ ಕೋಟ್ಯಂತ ರೂ. ವಂಚಿಸಿದ ಸಂಬಂಧ ಭದ್ರತಾ ಮತ್ತು ಜಾಗೃತಾ ದಳದ ಸಹಾಯಕ ಕಾರ್ಯದರ್ಶಿ ಸಿ.ಕೆ.ರಮ್ಯಾ ದೂರು ನೀಡಿದ್ದರು. ಅದರನ್ವಯ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಶ್ರೀರಾಮ್ ಮುಲ್ಕವಾನ್‌ನನ್ನು ಬಂಧಿಸಿದ್ದಾರೆ.

ಬಿಎಂಟಿಸಿಯ ವಾಣಿಜ್ಯ ಶಾಖೆಯಲ್ಲಿ ಆರೋಪಿತ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದರು. ನಗರದ ವಿವಿಧೆಡೆ ಬಿಎಂಟಿಸಿ ಒಡೆತನದ ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದು, ಹೋಟೆಲ್‌ಗಳು, ಮಳಿಗೆಗಳು ಮತ್ತು ಸಮುದಾಯ ಭವನಗಳಿಗೆ ಬಾಡಿಗೆ ನೀಡಲಾಗಿದೆ.

ಬಾಡಿಗೆ ರೂಪದಲ್ಲಿ ಬಿಎಂಟಿಸಿಗೆ ಕೋಟ್ಯಂತರ ರೂ. ಆದಾಯವಿದೆ. ಬಿಎಂಟಿಸಿಗೆ ವಾಣಿಜ್ಯ ವಲಯದ ಆದಾಯದಲ್ಲಿ ವ್ಯವಸ್ಥಾಪಕ ನಿರ್ದೇಶಕರು ಮತ್ತು ನಿರ್ದೇಶಕರ ಸಹಿಗಳನ್ನು ನಕಲಿ ಮಾಡಿ ಆರೋಪಿತ ಅಧಿಕಾರಿಗಳು ವಂಚಿಸಿದ್ದರು ಎಂದು ದೂರಿನಲ್ಲಿ ಆರೋಪ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾವ ರೀತಿಯಲ್ಲಿ ಹಗರಣ :

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಮತ್ತು ಭದ್ರತೆ ಮತ್ತು ಜಾಗೃತ ದಳದ ನಿರ್ದೇಶಕ ಕೆ.ಅರುಣ್ ಅವರು ಅನ್ಯ ಕಡತದಲ್ಲಿ ಅನುಮೋದಿಸಿದ್ದ ಸಹಿಗಳನ್ನು ಕಲರ್ ಜೆರಾಕ್ಸ್ ಮಾಡಿಸಿ ಪ್ರತ್ಯೇಕವಾಗಿ 10.5 ಕೋಟಿ ರೂ. ಹಾಗೂ 6.91 ಕೋಟಿ ರೂ. ಅವ್ಯವಹಾರ ನಡೆಸಿದ್ದಾರೆ.

ಲಾಕ್‌ಡೌನ್‌ನಲ್ಲಿ ವಿನಾಯಿತಿ ನೀಡುವ ಸಂಬಂಧ ಪರವಾನಗಿ ಶುಲ್ಕ ಮನ್ನಾ ಮಾಡಬಹುದು ಎಂದು ಷರಾ ಬರೆದು ವ್ಯವಸ್ಥಾಪಕ ನಿರ್ದೇಶಕರು ಸಹಿಯನ್ನು ಕಲರ್ ಜೆರಾಕ್ಸ್ ಮಾಡಿಸಿ 21.64 ಲಕ್ಷ ರೂ. ವಂಚಿಸಿದ್ದರು.

ಯಶವಂತಪುರ ಟಿಟಿಎಂಸಿಯಲ್ಲಿ ಶ್ರೀಲಕ್ಷ್ಮೀ ಎಂಟರ್ ಪ್ರೈಸಸ್ ಕರಾರು ಅವಧಿ ಅಂತ್ಯವಾಗಿದ್ದರೂ ಸಹ ನಕಲಿ ಪರವಾಗಿ ಕೊಟ್ಟು ಮುಂದುವರೆಸಿದ್ದರು. 1.05 ಲಕ್ಷ ರೂ. ಅವ್ಯವಹಾರ ಮಾಡಿದ್ದರು. ಇದರ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಬಿಎಂಟಿಸಿಯಲ್ಲಿ ಆಂತರಿಕ ತನಿಖೆ ನಡೆಸಿದಾಗ ನಕಲಿ ಸಹಿ ಮಾಡಿ ಸಂಸ್ಥೆಗೆ ಅಧಿಕಾರಿಗಳು ಕೋಟ್ಯಂತರ ವಂಚಿಸಿರುವುದು ಬೆಳಕಿಗೆ ಬಂದಿತ್ತು.