ಕೆ.ಆರ್.ನಗರ: ವಿದ್ಯಾರ್ಥಿ ಜೀವನದಲ್ಲಿ ಉತ್ತಮವಾಗಿ ವ್ಯಾಸಂಗ ನಡೆಸಿ ಭದ್ರ ಬದುಕು ಕಟ್ಟಿಕೊಳ್ಳಿ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು. ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿದ್ದ 2023-24ನೇ ಸಾಲಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಳೆದು ಹೋದ ಕಾಲೇಜು ದಿನಗಳ ಮತ್ತೆ ಸಿಗುವುದಿಲ್ಲ. ಈ ಅವಧಿ ಪ್ರತಿಯೊಬ್ಬರ ಬದುಕು ಉತ್ತಮವಾಗಿಸಲು ಸಹಾಯವಾಗುತ್ತದೆ. ವಿದ್ಯಾರ್ಥಿಗಳು ಸಾಧನೆ ಮಾಡಲು ಕನಸು ಕಾಣುವ ಜತೆಗೆ ಉತ್ತಮ ಮಾರ್ಗದರ್ಶನ ಪಡೆದು ಶ್ರಮ, ಪ್ರಾಮಾಣಿಕ ಪ್ರಯತ್ನ, ದೃಢವಾದ ಸಂಕಲ್ಪ ಹೊಂದಿದ್ದರೆ ಸಾಧನೆ ಸುಲಭವಾಗಲಿದೆ ಎಂದು ಹೇಳಿದರು. ರಾ.ಸೇ.ಯೋ ಕಾರ್ಯಕ್ರಮಾಧಿಕಾರಿ ಡಾ.ಸಿ.ಆರ್.ಕಿರಣ್‌ಕುಮಾರ್, ರೆಡ್ ಕ್ರಾಸ್ ಸಮಿತಿ ಸಂಚಾಲಕ ಡಾ.ಎಸ್.ಶಂಕರ್, ಸ್ಕೌಟ್ಸ್ ಮತ್ತು ಗೈಡ್ಸ್ ಸಂಚಾಲಕಿ ಡಾ.ಸೀಮಾ ಬಡಿಗೇರ್, ಪ್ರಾಧ್ಯಾಪಕ ಪ್ರಶಾಂತ್, ಸಾಂಸ್ಕೃತಿಕ ಸಮಿತಿ ವಿದ್ಯಾರ್ಥಿ ಅಧ್ಯಕ್ಷೆ ಕೆ.ಜಿ.ಅಂಬಿಕಾ ಹಾಜರಿದ್ದರು.