ನ್ಯೂಸ್

ಕಾಲೇಜಿನಲ್ಲಿ ಪ್ರವೇಶ ಕೊಡಿಸ್ತೇನೆ ದುಡ್​ ಕೊಡಿ ಅಂತಿದ್ದವರ ವಿರುದ್ಧ ಎಫ್​ಐಆರ್

Mandara

ಬೆಂಗಳೂರು: ಪಿಇಎಸ್ ಕಾಲೇಜಿನಲ್ಲಿ ಪ್ರವೇಶ ಕೊಡಿಸುವುದಾಗಿ ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಸಂರ್ಪಸಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ್ದಾರೆ ಎಂದು ಇಬ್ಬರು ವ್ಯಕ್ತಿಗಳ ವಿರುದ್ಧ ಪಿಇಎಸ್ ವಿವಿ ಜನರಲ್ ಮ್ಯಾನೇಜರ್ ಬಾಲರಾಜು ಪೊಲೀಸರಿಗೆ ದೂರು ನೀಡಿದ್ದಾರೆ.

ಮೆರಿಟ್ ಲೈನ್ ಏಜೆನ್ಸಿ ಮತ್ತು ಸಪ್ನಾ ಕನ್ಸಲ್ಟೆನ್ಸಿ ಸರ್ವೀಸಸ್ ಏಜೆನ್ಸಿಯ ಪ್ರತಿನಿಧಿಗಳಾದ ಅವಿನಾಶ್ ಜಾ ಮತ್ತು ವಿಜಯ್ ಪಾಂಡ್ಯ ಎಂಬುವರ ವಿರುದ್ಧ ಗಿರಿನಗರ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ.ಆರೋಪಿಗಳು ಪಿಇಎಸ್ ಮ್ಯಾನೇಜಿಂಗ್ ಕಮಿಟಿಯವರು ಪರಿಚಯ ಇರುವುದಾಗಿ ಹೇಳಿ ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ನಂಬಿಸುತ್ತಿದ್ದರು.

ಪಿಇಎಸ್ ಕಾಲೇಜಿನಲ್ಲಿ ಪ್ರವೇಶ ಕಲ್ಪಿಸಿಕೊಡುವುದಾಗಿ ಲಕ್ಷಾಂತರ ರೂ. ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ವಿದ್ಯಾರ್ಥಿಗಳ ನೋಂದಣಿ ಬಗ್ಗೆ ಸಂಸ್ಥೆಯ ಆಡಳಿತವು ಪಾರದರ್ಶಕವಾಗಿರುತ್ತದೆ. ಪ್ರವೇಶಾತಿಗೆ ಸಂಬಂಧಿಸಿದಂತೆ ಯಾವುದೇ ಏಜೆನ್ಸಿಗಳೊಂದಿಗೆ ವ್ಯವಹಾರ ಇಟ್ಟುಕೊಂಡಿರುವುದಿಲ್ಲ.  ಆದರೆ, 2014ರಿಂದ ಅವಿನಾಶ್ ಜಾ ಮತ್ತು ವಿಜಯ್ ಪಾಂಡ್ಯ ಎಂಬುವವರು ಸಂಚು ರೂಪಿಸಿ ಅಕ್ರಮ ಲಾಭ ಮಾಡಿಕೊಂಡು ಸಂಸ್ಥೆ ಹೆಸರಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಬಾಲರಾಜು ಹೇಳಿದ್ದಾರೆ.