ನ್ಯೂಸ್

ಆಮಿಷಕ್ಕೆ ಒಳಗಾಗದೆ ಮತದಾನ ಮಾಡಿ

ಬಳ್ಳಾರಿ: ಈ ಬಾರಿ ವಿಧಾನಸಭೆ ಚುನಾವಣೆಗೆ ಈಗಾಗಲೇ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಕೈಗೊಂಡಿದ್ದು, ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ ಪ್ರಾಮಾಣಿಕವಾಗಿ ಮತದಾನ ಮಾಡಬೇಕು. ಆ ಮೂಲಕ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ಹೇಳಿದರು.

ನಗರದ ಮರ್ಚೇಡ್ ಹೊಟೇಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಮೀಟ್ ದಿ ಪ್ರೆಸ್ ಕಾರ್ಯಕ್ರಮದಲ್ಲಿ ಚುನಾವಣೆ ಕುರಿತು ಮಾಹಿತಿ ನೀಡಿದ ಅವರು, ಕಳೆದ ಚುನಾವಣೆಯಲ್ಲಿ 11.54 ಲಕ್ಷ ಮತದಾರರಿದ್ದರು. ಈ ಬಾರಿ 11.33 ಲಕ್ಷ ಮತದಾರರಿದ್ದಾರೆ. ಹೊಸದಾಗಿ 33 ಸಾವಿರಕ್ಕೂ ಹೆಚ್ಚು ಹೊಸಬರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. 1191 ಮತಗಟ್ಟೆ ಸ್ಥಾಪನೆ ಮಾಡಲಾಗುತ್ತಿದೆ. 103 ವಲಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

1.12 ಲಕ್ಷ ಮತದಾರರು ಡಿಲೀಟ್: 2022ರ ಜ.13ರಿಂದ ಈವರೆಗೆ 1.12 ಲಕ್ಷ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಡಬಲ್ ವೋಟರ್ಸ್ 50 ಸಾವಿರ, ಮೃತಪಟ್ಟವರು 20 ಸಾವಿರ ಸೇರಿ ಇನ್ನಿತರರನ್ನು ಕ್ಷೇತ್ರವಾರು ಗುರುತಿಸಿ ಡಿಲೀಟ್ ಮಾಡಲಾಗಿದೆ. ಕಳೆದ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಶೇ.62ರಷ್ಟು ಮತದಾನವಾಗಿದ್ದು, ಬರುವ ಚುನಾವಣೆಯಲ್ಲಿ ಕನಿಷ್ಠ ಶೇ.82 ಮತದಾನವಾಗುವ ಗುರಿ ಹೊಂದಲಾಗಿದೆ ಎಂದು ಪವನ್‌ಕುಮಾರ್ ಮಾಲಪಾಟಿ ಹೇಳಿದರು.

ಚೆಕ್‌ಪೋಸ್ಟ್ ನಿರ್ಮಾಣ: ಚುನಾವಣೆ ಹತ್ತಿರವಿರುವ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಆಂಧ್ರ ಗಡಿಯಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗುವುದು. ಯಾವುದೇ ರೀತಿ ಅಕ್ರಮ ನಡೆಯದಂತೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಕರ್ನೂಲ್ ಹಾಗೂ ಅನಂತಪುರಂ ಜಿಲ್ಲೆಯ ಗಡಿಭಾಗದಲ್ಲಿ ಅಕ್ರಮವಾಗಿ ಹಣ, ಮದ್ಯ ಸಾಗಾಟ ತಡೆಯಲು ಚೆಕ್‌ಪೋಸ್ಟ್ ನಿರ್ಮಿಸಲಾಗುವುದು ಎಂದರು.

ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು ಜನರಲ್ಲಿ ಮತದಾನದ ಜಾಗೃತಿ ಮುಖ್ಯ. ಎಲ್ಲಿಯಾದರೂ ಸೀರೆ ಹಂಚುವುದು ಸೇರಿ ಇತರ ವಸ್ತುಗಳನ್ನು ಹಂಚಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇನ್ನು ಮುಂದೆ ಚುನಾವಣೆ ಮುಗಿಯುವವರೆಗೂ ಯಾವುದೇ ರೀತಿಯ ಅನುಮತಿ ಇಲ್ಲದೆ ಬ್ಯಾನರ್, ಫ್ಲೆಕ್ಸ್‌ಗಳನ್ನು ಅಳವಡಿಸಿದರೆ ಅಂಥವರ ವಿರುದ್ಧ ಕ್ರಮ ನಿಶ್ಚಿತ. ಪವನ್‌ಕುಮಾರ್ ಮಾಲಪಾಟಿ ಜಿಲ್ಲಾಧಿಕಾರಿ, ಬಳ್ಳಾರಿ