ನ್ಯೂಸ್

ಆಟೋ ಚಾಲಕರಿಂದ ಹಣ ವಸೂಲಿ

ಬೆಂಗಳೂರು: ಆಟೋ ಚಾಲಕನೊಬ್ಬ ಪೊಲೀಸರ ಹೆಸರಿನಲ್ಲಿ ಆಟೋ ಚಾಲಕರಿಂದಲೇ ಹಣ ವಸೂಲಿ ಮಾಡಿರುವ ಆರೋಪ ಕೇಳಿ ಬಂದಿದೆ.
ಮೆಜೆಸ್ಟಿಕ್ ಬಸ್ ನಿಲ್ದಾಣದ ಒಳಗಡೆ ಬರಲು ಒಂದು ಆಟೋಗೆ ೨೦ ರೂಪಾಯಿ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾನೆ. ನೀವು ಕೊಡುವ ಹಣವನ್ನು ನಾನು ಪೊಲೀಸರಿಗೂ ಕೊಡುತ್ತೇನೆ ಎಂದು ಆಟೋ ಚಾಲಕರಿಂದ ವಸೂಲಿ ಮಾಡಲು ಮುಂದಾಗಿದ್ದಾನೆ.
ಸ್ಥಳೀಯ ಆಟೋ ಚಾಲಕ, ರಸ್ತೆಯಲ್ಲಿ ನಿಲ್ಲಿಸಿದ್ದ ಓಲಾ ಮತ್ತು ಊಬರ್ ಆಟೋ ಚಾಲಕರಿಂದ ವಸೂಲಿ ಮಾಡಿದ್ದಾನೆ. ಪ್ರಯಾಣಿಕ ಆನ್‌ಲೈನ್ ಬುಕ್ ಮಾಡಿದ್ದ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದ ಓಲಾ ಆಟೋ ಚಾಲಕನೊಬ್ಬ ತನ್ನ ಆಟೋ ನಿಲ್ಲಿಸಿಕೊಂಡು ನಿಂತಿದ್ದಾನೆ. ಈ ವೇಳೆ ಬಂದ ಸ್ಥಳೀಯ ಆಟೋ ಚಾಲಕ, ಇಲ್ಲಿ ಆಟೋ ನಿಲ್ಲಿಸಿದರೆ ಪೊಲೀಸರಿಗೆ ಹಣ ಕೊಡಬೇಕು ಅಂತ ಹೇಳಿ ದರ್ಪ ತೋರಿದ್ದಾನೆ. ಈ ಬಗ್ಗೆ ಪೊಲೀಸರಿಗೆ ಪೋಸ್ಟ್ ಮೂಲಕ ಓಲಾ ಆಟೋ ಚಾಲಕ ದೂರು ಸಲ್ಲಿಸಿದ್ದಾನೆ.
ವಿಡಿಯೋ ವೈರಲ್:
ಸ್ಥಳೀಯ ಆಟೋ ಚಾಲಕ ೨೦ ರೂ.ಗೆ ಬೇಡಿಕೆ ಇಡುವ ದೃಶ್ಯವನ್ನು ಓಲಾ ಮತ್ತು ಊಬರ್ ಚಾಲಕರು ವಿಡಿಯೋ ಮಾಡಿದ್ದಾರೆ. ವಿಡಿಯೋದಲ್ಲಿ ಆತ ಒಂದು ಆಟೋಗೆ ೨೦ ರೂ. ಕೊಡಬೇಕು. ಆ ಹಣ ಪೊಲೀಸರಿಗೆ ಕೊಡಲಾಗುವುದು ಎಂದು ಹೇಳಿದ್ದಾನೆ. ಚಾಲಕರು ವಿಡಿಯೋ ಮಾಡುತ್ತಿರುವುದು ಆತನ ಗಮನಕ್ಕೆ ಬಂದಿದ್ದು, ಆಗಲೂ ಆತ ನನ್ನ ಹೆಸರು ಹೇಮಂತ್ ಅಂತ ಹೇಳಿದ್ದಾನೆ. ಈತನ ಪುಂಡಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.