ಬಾಳೆಹೊನ್ನೂರು: ಕಡಬಗೆರೆಯಲ್ಲಿ ಆರು ವರ್ಷಗಳಿಂದ ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡದ ಹಿನ್ನೆಲೆಯಲ್ಲಿ ಬೇಸತ್ತ ಗ್ರಾಮಸ್ಥರು, ತಂಗುದಾಣ ಹೋರಾಟ ಸಮಿತಿ ಕಾರ್ಯಕರ್ತರು ಭಾನುವಾರ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ತಾತ್ಕಾಲಿಕ ತಂಗುದಾಣ ನಿರ್ಮಿಸಿದ್ದಾರೆ.
ಕಡಬಗೆರೆ ಗ್ರಾಮದ ಮುಖ್ಯರಸ್ತೆ ಬದಿ ಈ ಹಿಂದೆ ತಂಗುದಾಣವೊಂದಿತ್ತು. ಆರು ವರ್ಷಗಳ ಹಿಂದೆ ರಸ್ತೆ ಅಗಲೀಕರಣ ಮಾಡುವ ಸಂದರ್ಭ ತೆರವುಗೊಳಿಸಿ, ಆನಂತರ ನಿರ್ಮಿಸುವ ಭರವಸೆ ನೀಡಲಾಗಿತ್ತು. ಆದರೆ ರಸ್ತೆ ಕಾಮಗಾರಿ ಮುಕ್ತಾಯಗೊಂಡು ವರ್ಷಗಳೇ ಕಳೆದರೂ ತಂಗುದಾಣ ನಿರ್ಮಿಸಲು ಸ್ಥಳೀಯ ಆಡಳಿತ, ಶಾಸಕರು ಕ್ರಮ ಕೈಗೊಂಡಿರಲಿಲ್ಲ.
ಮನವಿಗೆ ಸ್ಪಂದಿಸಿ ತಂಗುದಾಣ ನಿರ್ಮಿಸುವುದಾಗಿ ಜನಪ್ರತಿನಿಧಿಗಳು ಭರವಸೆ ನೀಡಿದ್ದರು. ಆದರೆ ನಿರ್ಲಕ್ಷೃ ತೋರಿದ್ದರಿಂದ ಗ್ರಾಮಸ್ಥರು ಕೆಲ ತಿಂಗಳ ಹಿಂದೆ ಪ್ರತಿಭಟನೆ ನಡೆಸಿದ್ದರು. ನಂತರ ಪ್ರತಿಭಟನೆಗೂ ಜನಪ್ರತಿನಿಧಿಗಳು ಸ್ಪಂದಿಸಿರಲಿಲ್ಲ. ಆ ಬಳಿಕ ಗ್ರಾಮಸ್ಥರು ಬೇಸತ್ತು ತಾತ್ಕಾಲಿಕವಾಗಿ ಈ ಹಿಂದೆ ತಂಗುದಾಣವಿದ್ದ ಜಾಗದಲ್ಲಿ ಟಾರ್ಪಲ್ ಹೊದಿಕೆ ಹಾಕಿ ಕುರ್ಚಿಗಳನ್ನು ಇರಿಸಿ ಬಸ್‌ಗೆ ಕಾಯುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿದ್ದರು.
ಇತ್ತೀಚೆಗೆ ಕಡಬಗೆರೆ ಗ್ರಾಮದಲ್ಲಿ ನೂತನ ತಂಗುದಾಣ ನಿರ್ಮಾಣಕ್ಕೆ ಚಾಲನೆ ನೀಡಿ ಕಾಮಗಾರಿ ಅರ್ಧದಷ್ಟು ಮುಗಿದಿದೆ. ಆದರೆ ಏಳು ತಿಂಗಳಿನಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ. ಈ ಬಗ್ಗೆಯೂ ಜನಪ್ರತಿನಿಧಿಗಳ ಗಮನ ಸೆಳೆದಿರುವ ಹೋರಾಟ ಸಮಿತಿ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲವೇ ಹೋರಾಟ ನಡೆಸುವ ಎಚ್ಚರಿಕೆ ನೀಡಿತ್ತು. ಇದಕ್ಕೂ ಜನಪ್ರತಿನಿಧಿಗಳು ಜಗ್ಗದ ಕಾರಣ ಹೋರಾಟ ಸಮಿತಿ ಸದಸ್ಯರು ಗ್ರಾಮದಲ್ಲಿ ಹಣ ಸಂಗ್ರಹಿಸಿದ್ದಾರೆ. ಇದರಲ್ಲಿ ಟಾರ್ಪಲ್ ಖರೀದಿಸಿ ಅರ್ಧಂಬರ್ಧ ಕಾಮಗಾರಿ ಮುಗಿದ ತಂಗುದಾಣಕ್ಕೆ ಹೊದಿಸಿ ಪ್ರಯಾಣಿಕರಿಗೆ ಬಸ್ ಕಾಯಲು ಅನುವು ಮಾಡಿಕೊಟ್ಟಿದ್ದಾರೆ.
ಪ್ರಯಾಣಿಕರ ತಂಗುದಾಣ ಹೋರಾಟ ಸಮಿತಿಯ ಸುರೇಶ್ ಕೋಟ್ಯಾನ್, ಸಂಪತ್, ಪ್ರಶಾಂತ್, ರಾಕೇಶ್, ಅಜಿತ್ ಭಟ್, ಕುಮಾರ್, ಚಂದ್ರಶೇಖರ್ ರೈ ಇತರರಿದ್ದರು.