ಬಂಗಾರಪೇಟೆಯಲ್ಲಿ ಕಟ್ಟಡ ಬೀಳುತ್ತಿರುವಾಗ ಸೆರೆಯಾದ ದೃಶ್ಯ. 
ನ್ಯೂಸ್

ಧರೆಗುರುಳಿದ ಮೂರಂತಸ್ತಿನ ಕಟ್ಟಡ

ಕಿರುವಾರ ಎಸ್.ಸುದರ್ಶನ್

ಬಂಗಾರಪೇಟೆ: ಪಟ್ಟಣದ ಕೆಇಬಿ ರಸ್ತೆಯಲ್ಲಿ ಮೂರು ಅಂತಸ್ತಿನ ಕಟ್ಟಡವೊಂದು ಶುಕ್ರವಾರ ಏಕಾಏಕಿ ಕುಸಿದು ಬಿದ್ದಿದ್ದು, ಮುಂಜಾಗ್ರತೆಯಿಂದ ಕಟ್ಟಡದಲ್ಲಿದ್ದವರು ಹೊರ ಬಂದ ಹಿನ್ನೆಲೆಯಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೂದಿಕೋಟೆ ಗ್ರಾಮದ ವಕೀಲ ರಾಜಕುಮಾರ ಅವರ ಕಟ್ಟಡ ಇದಾಗಿದ್ದು, ಸುಮಾರು ಮೂರ್ನಾಲ್ಕು ವರ್ಷದ ಹಿಂದೆ ನಾಲ್ಕು ಮಳಿಗೆಗಳು ಇರುವ ಕಟ್ಟಡವನ್ನು ಖರೀದಿಸಿದ್ದರು. ನಂತರ ಮಳಿಗೆಗಳ ಮೇಲೆ ಎರಡು ಅಂತಸ್ತು ನಿರ್ಮಿಸಿ, ಒಂದು ಮನೆಯನ್ನು ಬಾಡಿಗೆಗೆ ನೀಡಿ ಮತ್ತೊಂದು ಮನೆಯಲ್ಲಿ ರಾಜಕುಮಾರ ವಾಸವಿದ್ದರು.

ನೆಲಮಾಳಿಗೆಯ ಮಳಿಗೆಗಳನ್ನು ರಿಪೇರಿ ಮಾಡುವ ಕಾರಣದಿಂದ ಅಂಗಡಿ ಗೋಡೆಯನ್ನು ತೆರವು ಮಾಡಲು ಮುಂದಾಗಿದ್ದ ವೇಳೆ ಗೋಡೆ ಬಿರುಕು ಬಿಟ್ಟು, ಕಟ್ಟಡ ವಾಲಿದೆ. ಇದನ್ನು ಗಮನಿಸಿದ ಕಟ್ಟಡದಲ್ಲಿನ ನಿವಾಸಿಗಳು ಹೊರಗೆ ಬಂದು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿ ಶಾಮಕ ದಳ ಸಿಬ್ಬಂದಿ ಕಟ್ಟಡದಲ್ಲಿದ್ದ ಗ್ಯಾಸ್ ಸಿಲಿಂಡರ್, ವಿದ್ಯುತ್ ಸಂಪರ್ಕ ಇತ್ಯಾದಿಗಳನ್ನು ಕಡಿತಗೊಳಿಸಿದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಕಟ್ಟಡ ವಾಲಿದ ನಂತರ ಸುತ್ತಮುತ್ತಲು ಜನರ ಓಡಾಟ ನಿರ್ಬಂಽಸಲಾಗಿತ್ತು. ನೋಡ ನೋಡುತ್ತಿದ್ದಂತೆ ಕೆಲವೇ ಕ್ಷಣಗಳಲ್ಲಿ ಕಟ್ಟಡ ಕುಸಿದು ಬಿದ್ದಿದೆ. ಕಟ್ಟಡ ಮಾಲೀಕನ ನಿರ್ಲಕ್ಷ÷್ಯದಿಂದ ಘಟನೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಸ್ಥಳಕ್ಕೆ ಅಗ್ನಿ ಶಾಮಕ, ಬೆಸ್ಕಾಂ, ಪುರಸಭೆ ಮತ್ತು ಪೊಲೀಸರು ಭೇಟಿ ನೀಡಿ ತೆರವು ಕಾರ್ಯಾಚರಣೆಗೆ ಸಹಕಾರ ನೀಡಿದರು.

ಕುಸಿದ ಕಟ್ಟಡವು ಪ್ರಮುಖ ರಸ್ತೆಯಲ್ಲಿದ್ದು, ಕಟ್ಟಡದ ಮುಂಭಾಗದಲ್ಲಿ ಖಾಸಗಿ ಶಾಲೆಯಿದೆ. ಬೆಳಗಿನ ಸಮಯದಲ್ಲಿ ಶಾಲೆ ಮಕ್ಕಳು ಸೇರಿ ನೂರಾರು ಜನರು ಓಡಾಡುವ ಪ್ರಮುಖ ದಾರಿಯಾಗಿದೆ. ಕಟ್ಟಡ ಬಿರುಕು ಬಿಟ್ಟು ವಾಲುವ ಹಂತದಲ್ಲಿದ್ದಾಗಲೇ ಅಗ್ನಿಶಾಮಕ ಸಿಬ್ಬಂದಿ ಮುಂಜಜಾಗ್ರತೆ ವಹಿಸಿ ಜನ ಸಂಚಾರ ನಿಯಂತ್ರಣಕ್ಕೆ ತಂದಿದ್ದರಿAದ ದೊಡ್ಡ ಅನಾಹುತ ತಪ್ಪಿದೆ.

ಕುಸಿಯಲು ಕಾರಣವೇನು?

ಹಲವು ವರ್ಷಗಳ ಹಿಂದೆಯೇ ನಿರ್ಮಾಣವಾಗಿದ್ದ ಕಟ್ಟಡದ ನೆಲ ಅಂತಸ್ತಿನಲ್ಲಿ ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿತ್ತು. ಶುಕ್ರವಾರ ಬೆಳಗ್ಗೆ ಮಳಿಗೆಗಳ ಶೆಟರ್ ಕೆಡವಿ ಪರ್ಯಾಯ ಮಳಿಗೆ ನಿರ್ಮಿಸುವಾಗ ಕಟ್ಟಡ ಬಿರುಕು ಬಿಟ್ಟು, ವಾಲಿದೆ. ತದನಂತರ ಇದ್ದಕ್ಕಿಂದ್ದAತೆ ಕುಸಿದಿದೆ.

ಅಗತ್ಯ ವಸ್ತುಗಳ ಹಡುಕಾಟ

ಇತ್ತ ಕಟ್ಟಡದ ಅವಶೇಷದ ಅಡಿ ಸಿಲುಕಿದ ಅಗತ್ಯ ವಸ್ತುಗಳನ್ನು ಅಗ್ನಿಶಾಮಕ ಸಿಬ್ಬಂದಿ ಹುಡುಕಿ ವಾರಸುದಾರರಿಗೆ ಹಸ್ತಾಂತರ ಮಾಡಿದರು. ಕಟ್ಟಡ ಬಿದ್ದ ಸುದ್ದಿ ತಿಳಿದ ಸಾರ್ವಜನಿಕರು ಘಟನಾ ಸ್ಥಳಕ್ಕೆ ಜಮಾಯಿಸಿದ್ದು, ಸಾರ್ವಜನಿಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಮನೆ ಮಾಲೀಕರ ಕುಟುಂಬಸ್ಥರು ಮತ್ತು ಕಟ್ಟಡದÀ ನಿವಾಸಿಗಳು ಮನೆಯಲ್ಲಿನ ವಸ್ತುಗಳು ನಾಶÀವಾದ ಹಿನ್ನೆಲೆಯಲ್ಲಿ ಅಳಲು ತೋಡಿಕೊಂಡರು.

ಕೋಟ್....

ಕಟ್ಟಡ ಮಾಲೀಕನ ನಿರ್ಲಕ್ಷ್ಯದಿಂದ ಅನಾಹುತ ಸಂಭವಿಸಿದೆ. ಸುಮಾರು 40 ವರ್ಷಗಳ ಹಿಂದೆ ನಿರ್ಮಿಸಿದ್ದ ಅಂಗಡಿ ಮಳಿಗೆಗಳ ಮೇಲೆ ಎರಡು ಅಂತಸ್ತಿನ ಮನೆ ನಿರ್ಮಿಸಿದ್ದರು. ಜತೆಗೆ ಯಾವುದೇ ಮುಂಜಾಗ್ರತೆ ವಹಿಸದೆ ನಾಲ್ಕು ಅಂಗಡಿಗಳನ್ನು ಎರಡು ಅಂಗಡಿಗಳನ್ನಾಗಿ ಬದಲಾಯಿಸಲು ಹೋದಾಗ ಕಟ್ಟಡ ಬಿರುಕು ಬಿಟ್ಟು ಕುಸಿದಿದೆ.

- ಎಂ.ಜಿ ಗೋವಿಂದ ಪುರಸಭೆ ಅಧ್ಯಕ್ಷ