ನ್ಯೂಸ್

ತಮಿಳುನಾಡಿನಲ್ಲಿ ಕೋಲ್ಡ್​ರಿಫ್ ಸಿರಪ್ ನಿಷೇಧ

ಚೆನ್ನೈ: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್ ಕುಡಿದು ಮಕ್ಕಳು ಮೃತಪಟ್ಟ ವರದಿಗಳ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಕೋಲ್ಡ್​ರಿಫ್ ಕೆಮ್ಮಿನ ಸಿರಪ್​ನ ಮಾರಾಟವನ್ನು ನಿಷೇಧಿಸಿದೆ. ಎರಡು ರಾಜ್ಯಗಳಲ್ಲಿ ಮಕ್ಕಳ ಸಾವಿಗೆ ಕೋಲ್ಡ್ ರಿಫ್ ಕೆಮ್ಮಿನ ಸಿರಪ್ ಕಾರಣ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಸಿರಪ್​ನ ಮಾರಾಟವನ್ನು ತಮಿಳುನಾಡಿನ ಔಷಧ ನಿಯಂತ್ರಣ ಇಲಾಖೆ ನಿಷೇಧಿಸಿದೆ ಎಂದು ಮೂಲಗಳು ತಿಳಿಸಿವೆ. ಮಕ್ಕಳ ಸಾವಿನ ಕುರಿತು ತನಿಖೆ ನಡೆಯುತ್ತಿದೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್​ಸಿಡಿಸಿ) ಈ ಪ್ರದೇಶಗಳಲ್ಲಿ 500 ಜನರ ರಕ್ತದ ಮಾದರಿಗಳನ್ನು ಪರೀಕ್ಷಿಸಿದ್ದು, ಯಾವುದೇ ಸಾಂಕ್ರಾಮಿಕ ರೋಗ ಕಂಡು ಬಂದಿಲ್ಲ. ಹಾಗಾಗಿ ಮಕ್ಕಳಲ್ಲಿ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಿರುವ ಅಂಶಗಳ ಕುರಿತು ತನಿಖೆ ನಡೆಸಲಾಗುತ್ತಿದೆ.

2 ಸಿರಪ್ ನಿಷೇಧ: ಮಕ್ಕಳ ಸಾವಿನ ಬಳಿಕ ಮಧ್ಯಪ್ರದೇಶದ ಚಿಂದ್ವಾರದಲ್ಲಿ ಕೋಲ್ಡ್ ರಿಫ್ ಮತ್ತು ನೆಕೊ್ಟ್ರೕ-ಡಿಎಸ್ ಸಿರಪ್​ಗಳನ್ನು ನಿಷೇಧಿಸಲಾಗಿದೆ. ಪ್ರಾಥಮಿಕ ಪರೀಕ್ಷೆಗಳಿಂದ ಮಕ್ಕಳ ಸಾವು ಕೆಮ್ಮಿನ ಸಿರಪ್​ನಿಂದ ಸಂಭವಿಸಿಲ್ಲ ಎಂಬುದು ತಿಳಿದು ಬರುತ್ತಿದೆ. ಸಿರಪ್​ನ ಮಾದರಿಗಳನ್ನು ನಾಗಪುರ ಮತ್ತು ಪುಣೆಯ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್)ನ ವರದಿಗಾಗಿ ಕಾಯುತ್ತಿದ್ದೇವೆ ಎಂದು ಮಧ್ಯಪ್ರದೇಶ ಆರೋಗ್ಯ ಸಚಿವ ರಾಜೇಂದ್ರ ಶುಕ್ಲಾ ತಿಳಿಸಿದ್ದಾರೆ.

ಕಲಬೆರಕೆ ಕಂಡು ಬಂದಿಲ್ಲ: ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಮಕ್ಕಳ ಸಾವಿಗೆ ಕಾರಣವಾಗಿರುವ ಕೆಮ್ಮಿನ ಸಿರಪ್​ಗಳ ಮಾದರಿಗಳಲ್ಲಿ ಯಾವುದೇ ಕಲಬೆರಕೆ ಕಂಡು ಬಂದಿಲ್ಲ. ಮೂತ್ರಪಿಂಡಕ್ಕೆ ಹಾನಿ ಮಾಡುವ ರಾಸಾಯನಿಕಗಳು ಸಿರಪ್​ನಲ್ಲಿಲ್ಲ ಎಂಬುದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಮತ್ತು ಮಧ್ಯಪ್ರದೇಶ ರಾಜ್ಯ ಆಹಾರ ಮತ್ತು ಔಷಧ ಮಂಡಳಿ ನಡೆಸಿದ ಪರೀಕ್ಷೆಯಿಂದ ತಿಳಿದು ಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಸಮಿತಿ ರಚನೆ

ರಾಜಸ್ಥಾನದಲ್ಲಿ ಮಕ್ಕಳ ಸಾವಿಗೆ ಕಾರಣ ಪತ್ತೆ ಹಚ್ಚಲು ಸಮಿತಿ ರಚಿಸಲಾಗಿದೆ. ಮಕ್ಕಳ ಸಾವುಗಳಿಗೆ ಕಾರಣರಾದವರನ್ನು ಬಿಡುವುದಿಲ್ಲ ಎಂದು ರಾಜಸ್ಥಾನ ಗೃಹ ಸಚಿವ ಜವಾಹರ್ ಬೇದಂ ತಿಳಿಸಿದ್ದಾರೆ. ಭರತ್ ಪುರ ಮತ್ತು ಸಿಕಾರ್ ಜಿಲ್ಲೆಯಲ್ಲಿ ಮೃತಪಟ್ಟ ಮಕ್ಕಳಿಗೆ ವೈದ್ಯರ ಸಲಹೆ ಇಲ್ಲದೆ ಮನೆಯಲ್ಲಿ ಸಿರಪ್ ನೀಡಲಾಗಿದೆ ಎಂಬುದು ತನಿಖೆಯಿಂದ ದೃಢಪಟ್ಟಿದೆ. ಮಕ್ಕಳಿಗೆ ಡೆಕ್ಸ್​ಟ್ರೋಮೆಥೋರ್ಫಾನ್ (ಡಿಎಕ್ಸ್​ಎಂ) ಔಷಧ ಶಿಫಾರಸು ಮಾಡಲಾಗುವುದಿಲ್ಲ ಎಂದು ಆರೋಗ್ಯ ಇಲಾಖೆ ನಿರ್ದೇಶಕ ರವಿಪ್ರಕಾಶ್ ಶರ್ಮಾ ತಿಳಿಸಿದ್ದಾರೆ.

ಮೃತರ ಸಂಖ್ಯೆ 11ಕ್ಕೆ ಏರಿಕೆ

ಕೆಮ್ಮಿನ ಸಿರಪ್ ಸೇವನೆಯಿಂದ ಮೃತಪಟ್ಟ ಮಕ್ಕಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ, ಮಧ್ಯಪ್ರದೇಶ ಚಿಂದ್ವಾರದಲ್ಲಿ 9 ಮಕ್ಕಳು ಮೃತಪಟ್ಟಿದ್ದರೆ, ರಾಜಸ್ಥಾನ ಸಿಕಾರ್​ನಲ್ಲಿ ಒಂದು ಹಾಗೂ ಭರತ್​ಪುರದಲ್ಲಿ ಒಂದು ಮಗು ಮೃತಪಟ್ಟಿದೆ.

ಮಕ್ಕಳಿಗೆ ಕೆಮ್ಮಿನ ಔಷಧ ಶಿಫಾರಸು ಮಾಡಬೇಡಿ

ಬೆಂಗಳೂರು: ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು-ಶೀತಕ್ಕೆ ಸಂಬಂಧಿಸಿದಂತೆ ಔಷಧ ಶಿಫಾರಸು ಮಾಡಬಾರದು. ಐದು ವರ್ಷದೊಳಗಿನ ಮಕ್ಕಳಿಗೂ ಸಾಮಾನ್ಯವಾಗಿ ಅಗತ್ಯ ಇರುವುದಿಲ್ಲ. ಅತಿ ಅಗತ್ಯವಾದರೆ ಮಾತ್ರ ಸೂಕ್ತ ಪ್ರಮಾಣದಲ್ಲಿ ಕಡಿಮೆ ಅವಧಿಗೆ ಒದಗಿಸಬೇಕು ಎಂದು ಕೇಂದ್ರ ಸರ್ಕಾರದ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ (ಡಿಜಿಎಚ್​ಎಸ್) ಸೂಚನೆ ನೀಡಿದೆ. ಈ ಕುರಿತು ಎಲ್ಲ ರಾಜ್ಯಗಳ ಆರೋಗ್ಯ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದ್ದು, ಮಕ್ಕಳಲ್ಲಿನ ಕೆಮ್ಮಿಗೆ ಔಷಧಗಳನ್ನು ವಿವೇಚನೆ ಬಳಸಿ ವೈದ್ಯರು ಶಿಫಾರಸು ಮಾಡಬೇಕು. ಬಹುತೇಕ ಕೆಮ್ಮಿನ ಸಮಸ್ಯೆಗಳು ಔಷಧಗಳ ಅಗತ್ಯವಿಲ್ಲದೆ ಕಡಿಮೆಯಾಗುತ್ತವೆ. ಆದ್ದರಿಂದ ಅನಗತ್ಯವಾಗಿ ಔಷಧ ಬಳಕೆ ತಪ್ಪಿಸಿ, ವೈದ್ಯರ ಸಲಹೆಗಳನ್ನು ಮಾತ್ರ ಪಾಲಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದೆ. ಕೆಮ್ಮು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪ್ರಮಾಣದಲ್ಲಿ ದ್ರವ ಆಹಾರ ಸೇವನೆ, ವಿಶ್ರಾಂತಿ ಮತ್ತು ಇತರ ಚಿಕಿತ್ಸಾ ಕ್ರಮಗಳನ್ನು ಅನುಸರಿಸಬೇಕು. ಈ ಬಗ್ಗೆ ಜಿಲ್ಲಾ ಆರೋಗ್ಯ ಪ್ರಾಧಿಕಾರಗಳು, ಸರ್ಕಾರಿ ಆರೋಗ್ಯ ಕೇಂದ್ರಗಳು, ಔಷಧ ಮಳಿಗೆಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದೆ.