ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೆ ಸಂಪುಟ ಪುನಾರಚನೆ ಸಂಬಂಧ ಆಂತರಿಕ ಚರ್ಚೆ ಶುರುವಾಗಿದ್ದು, ತೆರೆ ಮರೆಯಲ್ಲಿ ವೇದಿಕೆ ಸಜ್ಜು ಮಾಡಿಕೊಳ್ಳುತ್ತಿರುವ ವಾತಾವರಣ ಮೂಡುತ್ತಿದೆ.
ಸರ್ಕಾರ ರಚನೆಯಾದ ದಿನದಿಂದಲೂ ಸಿಎಂ, ಡಿಸಿಎಂ ನಡುವೆ ಅಧಿಕಾರ ಹಂಚಿಕೆಯಾಗಲಿದೆ ಎಂದು ಚರ್ಚೆಗಳು ನಡೆಯುತ್ತಲೇ ಇವೆ. ಈ ಮೊದಲೇ ಹೇಳಿದಂತೆ ನವೆಂಬರ್ ಕೊನೆಯಲ್ಲಿ ಅಥವಾ ಡಿಸೆಂಬರ್ ಆರಂಭದಲ್ಲಿ ಸಂಪುಟ ಪುನಾರಚನೆಯಾಗಲಿದೆ ಎಂದು ಹೇಳಲಾಗಿತ್ತು. ಇದೀಗ ಆ ಸಮಯ ಹತ್ತಿರವಾಗುತ್ತಿದಂತೆ ಚರ್ಚೆಗಳು ಆರಂಭವಾಗಿವೆ.
ಸಿಎಂ, ಡಿಸಿಎಂ ಈ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ, ಅವರ ನೀತಿ ನಿಲುವು, ಸರ್ಕಾರದ ತೀರ್ಮಾನಗಳು ಚರ್ಚೆಗೆ ಆಹಾರವಾಗುತ್ತಿವೆ. ವಿಧಾನ ಪರಿಷತ್ ನಾಮನಿರ್ದೇಶನದಲ್ಲಿನ ಬದಲಾವಣೆ, ನಿಗಮ ಮಂಡಳಿ ಪಟ್ಟಿ ಪರಿಷ್ಕರಣೆ, ಇತ್ತೀಚಿನ ರಸ್ತೆ ಗುಂಡಿ ವಿಚಾರ, ನಗರ ಪ್ರದಕ್ಷಿಣೆ ಹೀಗೆ...ಪ್ರತಿ ವಿಚಾರವೂ ಈ ಬೆಳವಣಿಗೆಗೆ ತಳುಕು ಹಾಕಿಕೊಳ್ಳುತ್ತಿದೆ.
ಇದು ಕಾಂಗ್ರೆಸ್‌ನಲ್ಲಿ ಅಷ್ಟೇ ಅಲ್ಲದೆ, ವಿಧಾನಸೌಧ ಮೊಗಸಾಲೆಯಲ್ಲೂ ಚರ್ಚಾ ವಿಷಯವಾಗಿದೆ. ಉಸ್ತುವಾರಿ ಸಚಿವರ ಅನುಪಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ, ಬೆಂಗಳೂರು ನಗರ ರಸ್ತೆಗುಂಡಿ ಪರಿಶೀಲಿಸಿರುವುದು ಸರ್ಕಾರದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ.
ಬಿಹಾರ ವಿಧಾನಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರದಲ್ಲಿ ಸಂಪುಟ ಪುನಾರಚನೆಯಾಗಲಿದೆ ಎನ್ನಲಾಗುತ್ತಿದೆ. ಈ ಕುರಿತು ಪ್ರಮುಖ ನಾಯಕರು ಮತ್ತು ಸಚಿವರೇ ಸಣ್ಣ ದನಿಯಲ್ಲಿ ಹೇಳುವ ಮೂಲಕ ಸುಳಿವು ನೀಡುತ್ತಿದ್ದಾರೆ. ವಿಧಾನ ಪರಿಷತ್ ಮುಖ್ಯಸಚೇತಕ ದೆಹಲಿಯಲ್ಲೇ ಸಂಪುಟ ಪುನಾರಚನೆ ಹೇಳಿಕೆ ನೀಡಿದ್ದರು. ಅದಾದ ಬಳಿಕ ವಸತಿ ಸಚಿವ ಜಮೀರ್ ಅಹ್ಮದ್ ಮಾತನಾಡಿದ್ದಾರೆ. ಒಟ್ಟಾರೆ ಹೇಳುವುದಾದರೆ ಮತ್ತೆ ಶಕ್ತಿ ಪ್ರದರ್ಶನಕ್ಕೆ ಮತ್ತು ಸಂಪುಟ ಪುನಾರಚಣೆಯಲ್ಲಿ ಮೇಲುಗೈ ಸಾಧಿಸುವ ಸರ್ಕಸ್ ಶುರುವಾಗಿದೆ.
ಕೈ ಒಳಾಂಗಣದಲ್ಲಿ ಚರ್ಚೆ
1. ಹಿರಿಯ ಸಚಿವರನ್ನು ಕೈಬಿಟ್ಟು ಪಕ್ಷದ ಜವಾಬ್ದಾರಿ ನೀಡುವುದು
2. ಸರ್ಕಾರಕ್ಕೆ ವರ್ಚಸ್ಸು ತರಲು, ದೂರದೃಷ್ಟಿಯಿಂದ ಸಮರ್ಥರಿಗೆ ಅವಕಾಶ
3. ಸ್ಪೀಕರ್, ಸಭಾಪತಿ ಸ್ಥಾನದಲ್ಲೂ ಬದಲಾವಣೆ ಮೂಲಕ ಅವಕಾಶಗಳ ಸೃಷ್ಟಿ
4. ಪರಿಶಿಷ್ಟ ಪಂಗಡ ಸಮುದಾಯದ ಇಬ್ಬರಿಗೆ ಅವಕಾಶಕ್ಕೆ ಒತ್ತಡ
5. ಈಗಾಗಲೇ ಹೈಕಮಾಂಡ್‌ನಿಂದ ಸಚಿವರ ಕಾರ್ಯವೈಖರಿ ಪರಾಮರ್ಶೆ