ಬೆಂಗಳೂರು: ಕರೊನಾದಿಂದ ಎದುರಾದ ಅಕಾಲಿಕ ಆಪತ್ತಿಗೆ ಸಿಲುಕಿಕೊಂಡವರಿಗೆ ನೆರವಾಗಲು ಸರ್ಕಾರದ ಮಟ್ಟದಲ್ಲಿ ರಚನೆಗೊಂಡ ವಾರ್ ರೂಮ್ಲ್ಲೀಗ ರಾಜಕೀಯದ ಶೀತಲ ಸಮರ ಭುಗಿಲೆದ್ದಿದೆ! ಪಕ್ಷಾತೀತವಾಗಿ ನೆರವಿನ ಚಟುವಟಿಕೆ ನಡೆಯುತ್ತಿದ್ದ ಕೇಂದ್ರದಲ್ಲಿ ಭಿನ್ನಾಭಿಪ್ರಾಯ ತಾರಕಕ್ಕೇರಿದೆ.
ಇಡೀ ವಾರ್ ರೂಂಗೆ ರೂಪಕೊಟ್ಟ ಅಧಿಕಾರೇತರ ತಂಡದಲ್ಲಿ ನಡೆದ ಬದಲಾವಣೆ ಈ ಸಂಘರ್ಷದ ಮೂಲ ಕಾರಣ. ಈ ಬದಲಾವಣೆಯಲ್ಲಿ ಬಿಜೆಪಿ ಕೈ ಮೇಲಾಗಿದೆ. ಸರ್ಕಾರದ ವಾರ್ರೂಂ ಪಕ್ಷಾತೀತವಾಗಿರಬೇಕು ಎನ್ನುವುದು ಕಾಂಗ್ರೆಸ್ನವರ ಆಕ್ಷೇಪ. ಕರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವವರು ಕರೆ ಮಾಡಿದ ತಕ್ಷಣವೇ ಅವರಿಗೆ ಆಹಾರ, ಆರೋಗ್ಯ, ವಸತಿ ಸೇರಿ ವಿವಿಧ ಸೌಲಭ್ಯ ಕಲ್ಪಿಸುವುದು ವಾರ್ ರೂಂನ ಉದ್ದೇಶ, ಆಶಯ.
ಬೆಂಗಳೂರಿನಿಂದಲೇ ಇಡೀ ರಾಜ್ಯದ ಮೂಲೆಮೂಲೆ ಸಂರ್ಪಸುವ ನೆಟ್ವರ್ಕನ್ನು ಒಂದೆರೆಡು ದಿನದಲ್ಲೇ ಸಿದ್ಧಪಡಿಸಲಾಯಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಟ್ಟಡದಲ್ಲೇ ಈ ವ್ಯವಸ್ಥೆ ರಚನೆಯಾಯಿತು. ಜಿಲ್ಲಾ ಮಟ್ಟದಿಂದ, ತಾಲೂಕು ಮಟ್ಟದವರೆಗೆ ಪ್ರತ್ಯೇಕ ವಾಟ್ಸಪ್ ಗ್ರೂಪ್ಗಳನ್ನು ಮಾಡಿಕೊಂಡು ಕ್ಷಣಮಾತ್ರದಲ್ಲಿ ಸ್ಪಂದಿಸುವ ಸಂಕಲ್ಪ ಮಾಡಲಾಗಿತ್ತು. ಪಕ್ಷಾತೀತವಾಗಿ ಆಸಕ್ತರು ಈ ಕೈಂಕರ್ಯಕ್ಕೆ ಜತೆಯಾದರು.
ಆದರೆ ಇಡೀ ವಾರ್ ರೂಂಗೆ ಒಂದು ರೂಪಕೊಟ್ಟ ಅಧಿಕಾರೇತರ ತಂಡದಲ್ಲೇ ಏಕಾಏಕಿ ಬದಲಾವಣೆಗಳಾದವು. ಉತ್ಸಾಹ ತೋರಿದವರು ಹೆಜ್ಜೆ ಹಿಂದಿಟ್ಟರು. ಪ್ರಮುಖ ಅಧಿಕಾರಿಯನ್ನೇ ಬದಿಗೆ ಸರಿಸುವ ಪ್ರಯತ್ನ ನಡೆಯಿತು. ಇಷ್ಟಕ್ಕೆ ನಿಲ್ಲದೆ, ಮಾಸ್ಟರ್ ವಾಲಂಟಿಯರ್ಗಳು ಮೌನಕ್ಕೆ ಶರಣಾದರು. ವಾರಿಯರ್ಗಳು ಸೇವೆಯನ್ನು ಕೊನೆಯ ವ್ಯಕ್ತಿಗೆ ತಲುಪಿಸಿದರೆ, ಮಾಸ್ಟರ್ ವಾಲಂಟಿಯರ್ ಎನಿಸಿಕೊಂಡವರು ಶಾಸಕರು, ಡಿಸಿ, ಎಸ್ಪಿ ಹಂತದಲ್ಲಿ ಆಗಬೇಕಾದ ಸಂವಹನ ನಡೆಸಿ ಸಂಯೋಜನೆ ಮಾಡುತ್ತಿದ್ದರು. ಕೆಲವು ಜಿಲ್ಲೆಗಳಲ್ಲಿ ಇವರೆಲ್ಲ ವಾಟ್ಸ್ಆಪ್ ಗ್ರೂಪ್ನಲ್ಲಿ ಸಂದೇಶಗಳನ್ನು ನೋಡಿ ಸುಮ್ಮನಾಗುವ ಹಂತ ತಲುಪಿದ್ದಾರೆ.
ಇಷ್ಟಕ್ಕೆಲ್ಲ ಕಾರಣ, ಸರ್ಕಾರದ ಸೌಲಭ್ಯವನ್ನು ಜನರಿಗೆ ತಲುಪಿಸುವ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂಬುದಕ್ಕೆ ಕಾಂಗ್ರೆಸ್ ಚಿಂತನೆ ಇರುವ ವಾರಿಯರ್ಗಳಿಗೆ ಪುರಾವೆ ಸಿಕ್ಕಿತು.ಒಟ್ಟಾರೆ ಕರೊನಾ ಪರಿಹಾರ ನೆಪದಲ್ಲಿ ದಿನದಿಂದ ದಿನಕ್ಕೆ ರಾಜಕೀಯ ಮೇಳೈಸಲು ಆರಂಭವಾಗಿದೆ.
ವಾರ್ ರೂಂ ಮಾಡಿದ್ದೇನು?
ಹಸಿದವರಿಗೆ ಊಟ ಕಳುಹಿಸಿಕೊಟ್ಟಿದೆ
ವಸತಿ ಇಲ್ಲದವರಿಗೆ ತಾತ್ಕಾಲಿಕ ವಸತಿ
ತುರ್ತು ಇದ್ದವರಿಗೆ ಅತ್ಯಾವಶ್ಯಕ ದಿನಸಿ ಕಿಟ್ ವಿತರಣೆ
ಅಕ್ಕಿ, ಬೇಳೆ, ಸೋಪಿನ ಪೌಡರ್, ಸಕ್ಕರೆ, ಶುಂಠಿ, ಸಾಂಬಾರ್ ಪೌಡರ್, ಕೊಬ್ಬರಿ, ವಿವಿಧ ಬೇಳೆ ಸೇರಿ ವಿವಿಧ ಸಾಮಗ್ರಿ ಒಳಗೊಂಡ ಬಾಕ್ಸ್ ನೀಡಿಕೆ
ಹಾಲು ಒಕ್ಕೂಟಗಳಲ್ಲಿ ಉಳಿಯುವ ಹಾಲನ್ನು ಕೊಳಗೇರಿ ನಿವಾಸಿ, ಕಾರ್ವಿುಕರಿಗೆ ಉಚಿತ ವಿತರಣೆ
ಬೇಸತ್ತು ನಿರ್ಗಮನ
ಬಿಜೆಪಿಮುಖಂಡರು ತಮ್ಮ ಸ್ವಂತ ಖರ್ಚಿನಲ್ಲಿ ಸಾಮಗ್ರಿ ವಿತರಿಸುವಾಗ ಪ್ರಚಾರ ಮಾಡಿಕೊಳ್ಳಲಿ, ಅದನ್ನು ಹೊರತು ಸರ್ಕಾರದಿಂದ ನೀಡುವ ಕಿಟ್ ವಿತರಿಸುವಾಗಲೂ ರಾಜಕೀಯ ಮಾಡಿದರೆ ಸರಿಯಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಬೇಸರಿಸಿದರು. ಇನ್ನೂ ಮುಖ್ಯವಾಗಿ ರೆಡ್ ಕ್ರಾಸ್ನಿಂದ ತೊಡಗಿಕೊಂಡಿದ್ದ ಕೆಲವರೂ ಸಹ ಈ ಬೆಳವಣಿಗೆಗೆ ಬೇಸತ್ತು ಹೊರಬಂದಿದ್ದಾರೆ.
ಆರೋಪಗಳೇನು
ಸರ್ಕಾರದಿಂದ ನೀಡುವ ಸವಲತ್ತುಗಳನ್ನು ಬಿಜೆಪಿಯಿಂದಲೇ ಕೊಡಲಾಗುತ್ತಿದೆ ಎಂದು ಜನರಲ್ಲಿ ಬಿಂಬಿಸುವ ಪ್ರಯತ್ನ
ವಾರ್ ರೂಂನಿಂದ ನಿರ್ದೇಶನ ನೀಡುವಾಗ ಬಿಜೆಪಿ ಕಾರ್ಯಕರ್ತರು, ಬಿಜೆಪಿ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳೇ ವಿತರಿಸುವಂತೆ ಮಾಡಲಾಗುತ್ತಿದೆ
ಬಿಜೆಪಿ ನಾಯಕರ ಬ್ಯಾನರ್ ಕೂಡ ಬಳಸಿಕೊಳ್ಳಲಾಗುತ್ತಿದೆ ಎಂಬುದಕ್ಕೆ ದಾಖಲೆ ಇದೆ
ಉಚಿತ ಹಾಲು ಪೂರೈಕೆಯಲ್ಲೂ ರಾಜಕೀಯ
ಇಂದಿರಾ ಕ್ಯಾಂಟೀನ್ನ ಉಚಿತ ಆಹಾರವನ್ನು ತಾವೇ ಕೊಟ್ಟಿದ್ದಾಗಿ ಹಂಚಿ ಫೋಟೋದಲ್ಲಿ ಪೋಸು
ಶ್ರೀಕಾಂತ್ ಶೇಷಾದ್ರಿ,