ಮುಂಬೈ: ಜಾಗತಿಕ ಬ್ಯಾಂಕಿಂಗ್ ಸಮೂಹವಾದ, ಸಿಂಗಪೂರ್ ಮೂಲದ ಡಿಬಿಎಸ್ ಮುಂದಿನ ಮೂರು ವರ್ಷಗಳಲ್ಲಿ ತನ್ನ ಒಟ್ಟು ನೌಕರರ ಪೈಕಿ ಶೇ. 10ರಷ್ಟು ಉದ್ಯೋಗಿಗಳನ್ನು ಕಡಿಮೆ ಮಾಡಲಿದೆ. ಕಂಪನಿಯ ಕಾರ್ಯಾಚರಣೆಯಲ್ಲಿ ಇನ್ನೂ ಹೆಚ್ಚು ಆಳವಾಗಿ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ - ಎಐ) ಅಳವಡಿಕೆ ಆಗಲಿರುವುದರಿಂದ ಈ ಅನಿವಾರ್ಯತೆ ಎದುರಾಗಿದೆ ಎಂದು ಡಿಬಿಎಸ್ ಮುಖ್ಯ ಕಾರ್ಯನಿರ್ವಾಹಕ ಪಿಯೂಷ್ ಗುಪ್ತಾ ಸೋಮವಾರ ತಿಳಿಸಿದ್ದಾರೆ.
ನ್ಯಾಸ್ಕಾಮ್ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಅಳವಡಿಸಿಕೊಳ್ಳಲಾದ ಎಲ್ಲ ತಂತ್ರಜ್ಞಾನಗಳಿಗಿಂತಲೂ ಎಐ ಭಿನ್ನವಾಗಿದೆ. ಅತ್ಯಂತ ಪ್ರಬಲವೂ ಆಗಿದೆ. ಅದು ಸ್ವತಃ ಸೃಷ್ಟಿ ಮಾಡಿಕೊಳ್ಳಬಲ್ಲದು, ಇಲ್ಲವೇ ಇತರರನ್ನು ಅನುಕರಿಸಬಲ್ಲದು. ನನ್ನ ಹದಿನೈದು ವರ್ಷಗಳ ಅಧಿಕಾರಾವಧಿಯಲ್ಲಿ ಇದೇ ಮೊದಲ ಬಾರಿಗೆ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿ ಮಾಡಲು ನಾನು ಒದ್ದಾಡುತ್ತಿದ್ದೇನೆ. ಮುಂದಿನ 3 ವರ್ಷಗಳಲ್ಲಿ ನಾವು 4 ಸಾವಿರ ಉದ್ಯೋಗಿಗಳನ್ನು ಕೈಬಿಡಬೇಕಾಗುತ್ತದೆ.
ಕಳೆದ 10 ವರ್ಷಗಳಲ್ಲಿ ಯಾರನ್ನೂ ಕೆಲಸದಿಂದ ತೆಗೆದಿರಲಿಲ್ಲ’ ಎಂದು ಹೇಳಿದರು. ‘2016-17ರಲ್ಲಿ ಬ್ಯಾಂಕಿನಲ್ಲಿ ಡಿಜಿಟಲೈಸೇಷನ್ ಮಾಡಿದಾಗ 1600 ಉದ್ಯೋಗಿಗಳ ಮೇಲೆ ಪರಿಣಾಮವಾಗಿತ್ತು. ಆದರೆ ಕಾರ್ವಿುಕ ಸಂಘಟನೆಗಳು ಮತ್ತು ಇತರ ಪ್ರತಿನಿಧಿಗಳ ಜತೆಗಿನ ಸಮಾಲೋಚನೆ ಬಳಿಕ ಮತ್ತೆ ಕೆಲಸದ ಮರುಹೊಂದಾಣಿಕೆ ಮಾಡಿಕೊಡಲಾಗಿತ್ತು. ಆದರೆ ಈಗಿನ ಎಐ ಸವಾಲು ಆ ರೀತಿ ಇಲ್ಲ. ಉದ್ಯೋಗಿಗಳ ಕೆಲಸವನ್ನು ಹೇಗೆ ಮರುಹೊಂದಾಣಿಕೆ ಮಾಡುವುದೆಂದೇ ತೋಚುತ್ತಿಲ್ಲ’ ಎಂದು ಹೇಳಿದರು.
‘ಕೆಲಸ ಕಳೆದುಕೊಳ್ಳಲಿರುವ 4 ಸಾವಿರ ಉದ್ಯೋಗಿಗಳ ಪೈಕಿ ಹೆಚ್ಚಿನವರು ತಾತ್ಕಾಲಿಕ ಮತ್ತು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರು’ ಎಂದು ನಂತರ ಡಿಬಿಎಸ್ ಬ್ಯಾಂಕ್ ಸ್ಪಷ್ಟನೆ ನೀಡಿದೆ.