ಬೆಂಗಳೂರು: ಖಾಲಿ ಸೈಟ್‌ಗಳಿಗೆ ನಕಲಿ ದಾಖಲೆ, ವಾರಸುದಾರರನ್ನು ಸೃಷ್ಟಿಸಿ ಕೋರ್ಟ್‌ನಲ್ಲಿ ದಾವೆ ಹೂಡಿ ಆದೇಶ ಪಡೆದು ಭೂಕಬ್ಜ ಮಾಡುತ್ತಿದ್ದ ಗ್ಯಾಂಗ್ ವಿರುದ್ಧ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯನ್ನು (ಕೋಕಾ) ಸಿಐಡಿ ಜಾರಿ ಮಾಡಿದೆ.
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಬೆಲೆ ಬಾಳುವ ಸೈಟ್‌ಗಳನ್ನು ಖರೀದಿಸಿ ಕಟ್ಟಡ ನಿರ್ಮಾಣ ಮಾಡದೆ ಖಾಲಿ ಬಿಟ್ಟು ಮಾಲೀಕರು, ಬೇರೆಡೆ ಅಥವಾ ವಿದೇಶ, ಹೊರ ರಾಜ್ಯದಲ್ಲಿ ನೆಲೆಸುವರೇ ಈ ಗ್ಯಾಂಗ್ ಟಾರ್ಗೆಟ್ ಆಗಿತ್ತು.
ಬೆಲೆ ಬಾಳುವ ಖಾಲಿ ಸೈಟ್‌ಗಳನ್ನು ಗುರುತಿಸಿ ಅಕ್ಕಪಕ್ಕದ ಮನೆಯವರನ್ನು ವಿಚಾರಿಸಿ ಮಾಲೀಕರು ಎಲ್ಲಿದ್ದಾರೆ. ಸೈಟ್ ನಂಬರ್ ಏನೆಂದು ಮಾಹಿತಿ ಕಲೆಹಾಕುತ್ತಿದ್ದರು. ಬಳಿಕ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ದೃಢೀಕೃತ ಪ್ರಮಾಣ ಪತ್ರ ಪಡೆದು ಅದನ್ನೇ ಹೋಲುವಂತೆ ನಕಲಿ ದಾಖಲೆ ಸೃಷ್ಟಿಸುತ್ತಿದ್ದರು.
ಅಂದರೆ ಮೂಲ ಮಾಲೀಕತ್ವದ ಬಗ್ಗೆ ಎರಡು ಪಾರ್ಟಿಗಳನ್ನು ಅದಕ್ಕೆ ಬೇಕಾದ ಗುರುತಿನ ಚೀಟಿ ತಯಾರು ಮಾಡಿ, ಓರ್ವ ಕೋರ್ಟ್‌ನಲ್ಲಿ ದಾವೆ ಸಲ್ಲಿಸಿ ಈ ಸೈಟ್ ನನಗೆ ಸೇರಬೇಕೆಂದು ವಾದ ಮಂಡಿಸುತ್ತಿದ್ದ. ಪ್ರತಿವಾದಿಯೂ ಇದೇ ಗ್ಯಾಂಗ್ ಆಗಿದ್ದರಿಂದ ಕೋರ್ಟ್‌ಗೆ ಹಾಜರಾಗಿ ‘ಇಲ್ಲ.. ನನಗೆ ಸೇರಬೇಕು’ ಎಂದು ವಕಾಲತ್ತು ಸಲ್ಲಿಸುತ್ತಿದ್ದರು.
ಕೆಲ ತಿಂಗಳು ವಾದಿ- ಪ್ರತಿವಾದಿಗಳು ನಡೆದು ಕೊನೆಗೆ ರಾಜೀ ಸಂಧಾನ ಮಾಡಿಕೊಂಡಿರುವುದಾಗಿ ಕೋರ್ಟ್‌ಗೆ ಎರಡು ಪಾರ್ಟಿದಾರರು ಪ್ರಮಾಣ ಪತ್ರ ಸಲ್ಲಿಸಿ ಈ ಸೈಟ್ ಈತನಿಗೆ ಬಿಟ್ಟು ಕೊಟ್ಟು ಬದಲಿಗೆ ಹಣ ಪಡೆದಿರುವುದಾಗಿ ಹೇಳುತ್ತಿದ್ದರು. ಆಗ ಕೋರ್ಟ್, ದಾವೆ ಇತ್ಯಾರ್ಥವಾಗಿದೆ ಎಂದು ಓರ್ವ ವ್ಯಕ್ತಿಗೆ ಖಾತೆ ಮಾಡುವಂತೆ ಆದೇಶ ನೀಡುತ್ತಿತ್ತು.
ಆದರೆ, ಈ ಯಾವುದೇ ವಿಷಯ ಸೈಟ್‌ನ ಮೂಲ ಮಾಲೀಕರಿಗೆ ತಿಳಿಯುತ್ತಿರಲಿಲ್ಲ. ಯಾಕೆಂದರೆ ಕೋರ್ಟ್‌ನಿಂದ ಯಾವುದೇ ನೋಟಿಸ್ ಹೋಗಿರುತ್ತಿಲಿಲ್ಲ. ಕೊನೆಗೆ ಕೋರ್ಟ್ ಆದೇಶ ಪಡೆದು ಆರೋಪಿಗಳು ಸಂಬಂಧಪಟ್ಟ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಿ ಖಾತೆಯನ್ನು ತನ್ನ ಹೆಸರಿಗೆ ಬದಲಾಯಿಸಿಕೊಡುವಂತೆ ಅರ್ಜಿ ಸಲ್ಲಿಸುತ್ತಿದ್ದರು. ಕೋರ್ಟ್ ಆದೇಶ ಇರುವುದರಿಂದ ಸ್ಥಳೀಯ ಕಂದಾಯ ಅಧಿಕಾರಿಗಳು ಖಾತೆಯನ್ನು ವರ್ಗಾವಣೆ ಮಾಡುತ್ತಿದ್ದರು. ಈ ಖಾತೆಯನ್ನು ಇಟ್ಟುಕೊಂಡು ಸೈಟ್ ಅನ್ನು ಆರೋಪಿಗಳು ‘ನಾನೇ ಮೂಲ ವಾರಸುದಾರ’ ಎಂದು ಮಾರಾಟ ಮಾಡಿ ಹಣ ಪಡೆಯುತ್ತಿದ್ದರು. ಇದೇ ರೀತಿಯಾಗಿ ನಗರದ 108 ಸೈಟ್‌ಗಳನ್ನು ಕಬಳಸಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೈಕೋರ್ಟ್ ವಿಚಾರಣೆ ವೇಳೆ ಬೆಳಕಿಗೆ
ಯಶವಂತಪುರ ವಿಲೇಜ್ ಬಳಿ ಗೋಕುಲ 1ನೇ ಹಂತದಲ್ಲಿರುವ ರವಿಂದ್ರ ಸಿ. ಷಾಗೆ ಸೇರಿದ 100್ಡ56 ಅಡಿ ಸೈಟ್ ಅನ್ನು ಲಪಟಾಯಿಸುವ ಉದ್ದೇಶದಿಂದ 2020ರಲ್ಲಿ ವಂಚಕ ಜಾನ್ ಮೋಸಸ್ ತಂಡ ಕಟ್ಟಿದ್ದ. ಸ್ವತ್ತಿಗೆ ಮಾಲೀಕನಾಗಿ ಮಣಿ, ಬಾಡಿಗೆದಾರನಾಗಿ ಅರುಣ್, ಜಿಪಿಎ ಹೋಲ್ಡರ್ ಸೆಂಥಿಲ್ ಕುಮಾರ್ ಎಂಬುವರನ್ನು ತಯಾರು ಮಾಡಿ ಜಾಗಕ್ಕೆ ಬೇಕಾದ ಎಲ್ಲ ರೀತಿಯ ನಕಲಿ ದಾಖಲಾತಿ ಸೃಷ್ಟಿಸಿದ್ದ. ಬಾಡಿಗೆ ಕರಾರು ಪತ್ರ, ಬಿಬಿಎಂಪಿ ಖಾತಾ ಪ್ರಮಾಣಪತ್ರ ಹಾಗೂ ಲೀಗಲ್ ನೋಟಿಸ್ ಸೇರಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿದ್ದ. ಆರೋಪಿಗಳಿಂದ ನಕಲಿ ಸಹಿ ಮಾಡಿಸಿ ನೈಜವೆಂದು ಬಿಂಬಿಸಿ ಲಘು ವ್ಯವಹಾರಗಳ ಕೋರ್ಟ್‌ಗೆ ದಾವೆ ಸಲ್ಲಿಸಿದ್ದ. ವಾದಿ- ಪ್ರತಿವಾದಿಗಳ ನಡುವೆ ರಾಜೀ ಸಂಧಾನ ಮಾಡಿಸಿ ಕೋರ್ಟ್‌ನಲ್ಲಿ ಆದೇಶ ಪಡೆದುಕೊಂಡಿದ್ದ. ನ್ಯಾಯಾಲಯ ಆದೇಶ ಮೇರೆಗೆ ಸ್ವತ್ತಿನಲ್ಲಿದ್ದವರನ್ನು ಖಾಲಿ ಮಾಡಿಸಿ ಅಕ್ರಮವಾಗಿ ಸೈಟ್‌ನ್ನು ತಮ್ಮ ಸ್ವಾಧೀನಕ್ಕೆ ಪಡೆದು ವಂಚಿಸಿದ್ದ. ಈ ಸಂಬಂಧ ಅಸಲಿ ಮಾಲೀಕರು ಹೈಕೋರ್ಟ್ ಮೊರೆ ಹೋದಾಗ ಇಡೀ ದಂಧೆ ಬೆಳಕಿಗೆ ಬಂದಿತ್ತು.
51 ಪ್ರಕರಣಗಳಲ್ಲಿ ಚಾರ್ಜ್‌ಶೀಟ್
ಸಿಐಡಿಯ ಡಿವೈಎಸ್‌ಪಿ ಆರ್. ಪುನೀತ್‌ಕುಮಾರ್, ಇನ್‌ಸ್ಪೆಕ್ಟರ್ ವಿ. ಶಿವಕುಮಾರ್ ನೇತೃತ್ವದ ತಂಡ ತನಿಖೆ ಕೈಗೊಂಡು ಆರೋಪಿ ಬಿ.ಮಣಿ, ಅರುಣ್, ಸೆಂಥಿಲ್ ಕುಮಾರ್, ಜಾನ್ ಮೋಸೆಸ್, ಅಂಥೋಣಿ ರಾಜ್, ನರೇಂದ್ರ ಕುಮಾರ್, ಎಡ್ವಿನ್, ಕಾಂತಮ್ಮ ಸೇರಿ ವಂಚಕರನ್ನು ಬಂಧಿಸಿತ್ತು. ಇದೆ ಮಾದರಿ ಹಲಸೂರು, ಯಲಹಂಕ ಸೇರಿ ನಗರ ವಿವಿಧೆಡೆ 108 ಪ್ರಕರಣ ಬೆಳಕಿಗೆ ಬಂದಿವೆ. ಇದರಲ್ಲಿ 51 ಪ್ರಕರಣಗಳ ತನಿಖೆ ಪೂರ್ಣವಾಗಿದ್ದು, ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಲಾಗಿದೆ. ಉಳಿದ ಪ್ರಕರಣ ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.