ಕೊಯಮತ್ತೂರು(ತಮಿಳುನಾಡು): ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುವಾಗ ತಲೆಗೂದಲು ಕಳೆದುಕೊಂಡಿರುವ ರೋಗಿಗಳ ನೆರವಿಗೆ ಕೊಯಮತ್ತೂರು ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರು ಧಾವಿಸಿದ್ದಾರೆ. ತಮ್ಮ ತಲೆಗೂದಲಿನ ಒಂದು ಭಾಗವನ್ನು ದೇಣಿಗೆಯನ್ನಾಗಿ ನೀಡಿ ಔದಾರ್ಯ ಮೆರೆದಿದ್ದಾರೆ.
ವಿದ್ಯಾರ್ಥಿನಿಯರಿಂದ ಪಡೆದಂತಹ ತಲೆಗೂದಲನ್ನು ಸಂಗ್ರಹಿಸಿ, ವಿಗ್ ತಯಾರಿಸಿದ ಬಳಿಕ ಕ್ಯಾನ್ಸರ್ ರೊಗಿಗಳಿಗೆ ವಿತರಿಸಲಾಗುತ್ತದೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ಅನೇಕ ವಿದ್ಯಾರ್ಥಿನಿಯರು, ಹಣ ನೀಡುವಷ್ಟು ಆರ್ಥಿಕವಾಗಿ ಸದೃಢರಾಗಿಲ್ಲ. ಆದರೆ, ತಲೆಗೂದಲನ್ನು ದೇಣಿಗೆಯನ್ನಾಗಿ ನೀಡಿದ್ದೇವೆ. ಇದರಿಂದ ಏನಾದರೂ ಮಾಡಿಕೊಳ್ಳಲಿ. ಆದರೆ, ಕ್ಯಾನ್ಸರ್ ರೋಗಿಗಳ ಮುಖದಲ್ಲಿ ಕೊಂಚ ಮಂದಹಾಸ ಮೂಡಿದರೆ ಸಾಕು ಎಂದು ಹೇಳಿದ್ದಾರೆ.
ಆರ್ಥಿಕವಾಗಿ ಸಹಾಯ ಮಾಡಲು ಸಾಧ್ಯವಾಗದಿದ್ದಕ್ಕೆ ನನಗೆ ಈ ಉಪಾಯ ಹೊಳೆಯಿತು. ನಾನೂ ಕೂಡ ನನ್ನ ತಲೆಗೂದಲನ್ನು ನೀಡಿದ್ದೇನೆ. ಕನಿಷ್ಠ 8 ಇಂಚು ತಲೆಗೂದಲನ್ನು ಪ್ರತಿಯೊಬ್ಬರ ಬಳಿ ಕತ್ತರಿಸಿಕೊಳ್ಳಲಾಗಿದೆ. ನಾನು ಅದಕ್ಕಿಂತಲೂ ಹೆಚ್ಚಿಗೆ ನೀಡಿದ್ದೇನೆ. ಈವರೆಗೆ 80 ಸದಸ್ಯರು ತಮ್ಮ ತಲೆಗೂದಲನ್ನು ನೀಡಿದ್ದಾರೆ. ಒಟ್ಟು 200 ಮಂದಿ ತಲೆಗೂದಲು ನೀಡಲಿದ್ದಾರೆ ಎಂದು ವಿದ್ಯಾರ್ಥಿನಿ ವಿನೋಧಿನಿ ಹೇಳಿದ್ದಾಳೆ.
ಇನ್ನು ವಿದ್ಯಾರ್ಥಿನಿಯರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. (ಏಜೆನ್ಸೀಸ್)