ನ್ಯೂಸ್

ಹೋಟೆಲ್​ಗಳಲ್ಲಿ ಶೀಘ್ರವೇ ಬೆಲೆ ಹೆಚ್ಚಳ?; ಈಗಾಗಲೇ ಕೆಲವೆಡೆ ದರ ಪರಿಷ್ಕರಣೆ..

ಬೆಂಗಳೂರು: ರಾಜ್ಯಾದ್ಯಂತ ಚಳಿ ತೀವ್ರಗೊಂಡಿದ್ದು, ಸಾರ್ವಜನಿಕರು ಬಿಸಿಬಿಸಿ ಕಾಫಿ-ಟೀ, ತಿಂಡಿ ಸವಿಯೋಣ ಎಂದು ಹೋಟೆಲ್​ಗೆ ಹೋಗಬೇಕೆಂದರೂ ಎಲ್ಲಿಗೆ ಹೋಗಬೇಕು ಎಂದು ಯೋಚಿಸಿ ಹೋಗಬೇಕಾಗಬಹುದು. ಏಕೆಂದರೆ ಹೋಟೆಲ್​ಗಳಲ್ಲಿ ದರ ಹೆಚ್ಚಳವಾಗಲಿದ್ದು, ಈಗಾಗಲೇ ಕೆಲವೆಡೆ ದರ ಪರಿಷ್ಕರಣೆಯೂ ನಡೆದಿದೆ.

ರಾಜಧಾನಿ ಬೆಂಗಳೂರಿನಲ್ಲಿ ಕೆಲವು ಹೋಟೆಲ್​ಗಳವರು ದರ ಪರಿಷ್ಕರಿಸಲು ಚಿಂತನೆ ನಡೆಸಿದ್ದರೆ, ಇನ್ನು ಕೆಲವು ಹೋಟೆಲ್​ಗಳಲ್ಲಿ ದರ ಪರಿಷ್ಕರಣೆ ಮಾಡಲಾಗಿದ್ದು, ಪರಿಷ್ಕೃತ ದರವನ್ನು ಶೀಘ್ರದಲ್ಲೇ ಜಾರಿಗೊಳಿಸುವ ಕುರಿತಂತೆ ಹೋಟೆಲ್​ಗಳಲ್ಲಿ ಸೂಚನೆಗಳನ್ನೂ ಅಳವಡಿಸಲಾಗಿದೆ.

ಬೆಣ್ಣೆ, ತುಪ್ಪ, ಕಾಫಿ ಪುಡಿ ಇತ್ಯಾದಿಯ ಬೆಲೆ ಈಗಾಗಲೇ ಹೆಚ್ಚಳಗೊಂಡಿದ್ದು, ಸದ್ಯ ಹಾಲಿನ ದರವೂ ಏರುವ ಸೂಚನೆ ಇದೆ. ಇಂದು ಆ ಕುರಿತ ನಿರ್ಧಾರವೂ ಪ್ರಕಟವಾಗುವ ಸಾಧ್ಯತೆ ಇದೆ. ಈ ಎಲ್ಲದರ ಹಿನ್ನೆಲೆಯಲ್ಲಿ ಹೋಟೆಲ್​ ಮಾಲೀಕರು ದರ ಹೆಚ್ಚಳಕ್ಕೆ ಮುಂದಾಗಿದ್ದಾರೆ. ಬೆಂಗಳೂರಿನ ಹೋಟೆಲೊಂದರಲ್ಲಿ ಈಗಾಗಲೇ ಕಾಫಿ ಮತ್ತು ದೋಸೆ ದರದಲ್ಲಿ ಏರಿಕೆ ಮಾಡಲಾಗಿದ್ದು, ಹೊಸ ದರ ನ. 24ರಂದು ಜಾರಿಗೆ ಬರುವ ಕುರಿತು ಸೂಚನೆಯನ್ನೂ ಪ್ರಕಟಿಸಲಾಗಿದೆ. ಉಳಿದಂತೆ ಇತರ ಹೋಟೆಲ್​ಗಳಲ್ಲೂ ಕಾಫಿ-ಟೀ ಜತೆಗೆ ಆಯ್ದ ಕೆಲವು ತಿಂಡಿ-ತಿನಿಸುಗಳ ಬೆಲೆ ಹೆಚ್ಚಳ ಆಗುವ ಸಾಧ್ಯತೆಗಳಿವೆ.