ದೇಶದ ವಿವಿಧೆಡೆ ಬೆಳೆಯುವ ಕಾಫಿಯ ವೈವಿಧ್ಯವನ್ನು ‘ಮನ್ ಕೀ ಬಾತ್’ ಬಾನುಲಿ ಕಾರ್ಯಕ್ರಮದಲ್ಲಿ ಕೊಂಡಾಡಿರುವ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಬೆಳೆಯುವ ಕಾಫಿ ಜಗತ್ಪ್ರಸಿದ್ಧಿ ಪಡೆಯುತ್ತಿದೆ ಎಂದಿದ್ದಾರೆ. ‘ಭಾರತೀಯ ಕಾಫಿ ಪ್ರಪಂಚದಾದ್ಯಂತ ಬಹಳ ಜನಪ್ರಿಯವಾಗುತ್ತಿದೆ. ಕೆಲವರು, ಕಾಫಿ ಕೃಷಿಯ ಮೇಲಿನ ತಮ್ಮ ಉತ್ಸಾಹವನ್ನು ಮುಂದುವರಿಸಲು ಲಾಭದಾಯಕ ಕಾಪೋರೇಟ್ ಉದ್ಯೋಗಗಳನ್ನು ತೊರೆದಿದ್ದಾರೆ’ ಎಂದು ಶ್ಲಾಘಿಸಿದ ಪ್ರಧಾನಿ, ‘ಕಾಫಿ ಕೃಷಿಯಿಂದ ಹಲವು ಮಹಿಳೆಯರ ಬದುಕು ಹಸನಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೇಶದ ಒಟ್ಟು ಕಾಫಿ ಉತ್ಪನ್ನದ ಶೇಕಡ 70ರಷ್ಟನ್ನು ಕರ್ನಾಟಕದಲ್ಲಿಯೇ ಬೆಳೆಯಲಾಗುತ್ತಿದೆ ಎಂಬುದು ಗಮನಾರ್ಹ. ನಂತರದ ಸ್ಥಾನದಲ್ಲಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಒಡಿಶಾಗಳಿವೆ. ಈಶಾನ್ಯ ರಾಜ್ಯಗಳಲ್ಲೂ ಕಳೆದ ಕೆಲ ವರ್ಷಗಳಿಂದ ಕಾಫಿಯನ್ನು ಬೆಳೆಯಲಾಗುತ್ತಿದೆ.
ಕರ್ನಾಟಕದಲ್ಲಿ ಅರೇಬಿಕಾ ಮತ್ತು ರೋಬೊಸ್ಟಾ ತಳಿಯ ಕಾಫಿಯನ್ನು ಚಿಕ್ಕಮಗಳೂರು, ಕೊಡಗು, ಹಾಸನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ. ಕೊಡಗು ಜಿಲ್ಲೆಯೊಂದರಲ್ಲೇ ವರ್ಷಕ್ಕೆ ಸುಮಾರು 1,10,730 ಮೆಟ್ರಿಕ್ ಟನ್ ಕಾಫಿಯನ್ನು ಉತ್ಪಾದಿಸುತ್ತಿದ್ದು, ಇದು ಕರ್ನಾಟಕದ ಶೇಕಡ 50 ಮತ್ತು ಭಾರತದ ಉತ್ಪಾದನೆಯ ಶೇ.35ರಷ್ಟಿದೆ. ಕಾಫಿ ಕೃಷಿಯು ಕಾರ್ವಿುಕ ಪ್ರಧಾನವಾಗಿದ್ದು ಕೊಡಗಿನ ಕಾಫಿ ತೋಟಗಳಲ್ಲಿ ಶೇ.51ರಷ್ಟು ಉದ್ಯೋಗ ಸೃಷ್ಟಿಯಾಗುತ್ತಿದೆ. ಕರ್ನಾಟಕದಲ್ಲಿ 5 ಲಕ್ಷಕ್ಕೂ ಹೆಚ್ಚು ಕೃಷಿ ಕಾರ್ವಿುಕರು ಕಾಫಿ ತೋಟ ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಥಳೀಯ ಪ್ರದೇಶದ ನಿರ್ದಿಷ್ಟ ಪರಿಸರ ಸ್ಥಿತಿಯನ್ನು ಅವಲಂಬಿಸಿ ಕಾಫಿ ಕೃಷಿಯನ್ನು ಮಾಡಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 85,465 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದ್ದು, 15 ಸಾವಿರ ಕಾಫಿ ಬೆಳೆಗಾರರಿದ್ದಾರೆ. ಈ ಪೈಕಿ ಶೇ.96ರಷ್ಟು ಸಣ್ಣ ಬೆಳೆಗಾರರು. ಚಾಮರಾಜನಗರ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದವರು ಕಾಫಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.
ಈ ಸಾಧನೆ ಮತ್ತು ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುತಿಸಿ ಪ್ರಶಂಸಿಸಿರುವುದು ಸಕಾರಾತ್ಮಕ ಸಂಗತಿಯೇ. ಅಂತೆಯೇ ಕಾಫಿ ಬೆಳೆಗಾರರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲೂ ಒಂದಿಷ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಹವಾಮಾನ ಬದಲಾವಣೆಯ ಸವಾಲು, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ಆಗಾಗ ಕಾಡುವ ಕೊಳೆ ರೋಗ ಸೇರಿದಂತೆ ಹಲವು ಸಮಸ್ಯೆಗಳು ಬೆಳೆಗಾರರನ್ನು ಬಾಧಿಸುತ್ತಿದ್ದು, ಆರ್ಥಿಕ ಭದ್ರತೆ ಇಲ್ಲದಂತಾಗಿದೆ. ಇದರಿಂದ ಕಾಫಿ ಬೆಳೆಗಾರರ ಬದುಕು ಇಂದಿಗೂ ಶೋಚನೀಯವಾಗಿದೆ. ಇಂಥ ಸವಾಲು ಮತ್ತು ಸಮಸ್ಯೆಗಳ ಪರಿಹಾರ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಪ್ರಾಮಾಣಿಕ ಮತ್ತು ಪರಿಣಾಮಕಾರಿ ಪ್ರಯತ್ನಗಳನ್ನು ಮಾಡಬೇಕಿದೆ. ಅಲ್ಲದೆ, ಅವಕಾಶಗಳ ಸದ್ಬಳಕೆಯೂ ಅಗತ್ಯ. ‘ಕರ್ನಾಟಕದ ಕಾಫಿಯನ್ನು ಮೌಲ್ಯವರ್ಧನೆ ಮಾಡಿ ಬ್ರ್ಯಾಂಡ್ ರೂಪ ನೀಡಲಾಗುವುದು’ ಎಂದು 2023-24ನೇ ಸಾಲಿನ ಬಜೆಟ್ನಲ್ಲಿ ಘೋಷಿಸಲಾಗಿದ್ದರೂ, ಈ ನಿಟ್ಟಿನಲ್ಲಿ ಆಗಬೇಕಾದ ಕೆಲಸ ಪ್ರಗತಿ ಕಂಡಿಲ್ಲ. ಚಿಕ್ಕಮಗಳೂರು, ಕೊಡಗು ಮತ್ತು ಬಾಬಾ ಬುಡನಗಿರಿಯ ಅರೇಬಿಕಾ ಕಾಫಿ ವೈವಿಧ್ಯ ಜಿ.ಐ (ಜಿಯಾಗ್ರಫಿಕಲ್ ಇಂಡಕ್ಷನ್) ಟ್ಯಾಗ್ ಹೊಂದಿವೆ.
ರಾಜ್ಯದ ಕಾಫಿಯನ್ನು ಇನ್ನಷ್ಟು ಪ್ರಚಾರ ಪಡಿಸಿ ಜನಪ್ರಿಯಗೊಳಿಸಲು ಮತ್ತು ಕಾಫಿ ಎಕೊ ಟೂರಿಸಂಗೆ ಉತ್ತೇಜನ ನೀಡಲು ಸೂಕ್ತ ಬ್ರ್ಯಾಂಡ್ ರೂಪಿಸುವುದು ಅತ್ಯಗತ್ಯವಾಗಿದೆ. ಉದ್ಯಮವಾಗಿಯೂ ಬೃಹತ್ ರೂಪ ಪಡೆದುಕೊಂಡಿರುವ ಕಾಫಿ ವರ್ಷದಿಂದ ವರ್ಷಕ್ಕೆ ತನ್ನ ಆರ್ಥಿಕ ಸಾಮರ್ಥ್ಯವನ್ನು ವೃದ್ಧಿಸಿಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಬೆಳೆಗಾರರ ಸಮಸ್ಯೆಗಳು ಬಗೆಹರಿಯಬೇಕಿದೆ ಮತ್ತು ಕಾಫಿ ಕೃಷಿ ಹಾಗೂ ಕಾಫಿ ಉದ್ಯಮದ ಮೂಲಕ ಉದ್ಯೋಗಸೃಷ್ಟಿ ಪ್ರಮಾಣ ಹೆಚ್ಚಬೇಕಿದೆ. ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ನವೋದ್ಯಮಗಳಿಗೆ ಪ್ರೋತ್ಸಾಹ ದೊರೆಯಬೇಕಿದೆ.