ಬೇಲೂರು: ಬಾಡಿಗೆ ಕಟ್ಟಡದಲ್ಲಿ ಪ್ರಾರಂಭವಾದ ಕಾಫಿ ಬೆಳೆಗಾರರ ಸಂಘವು ಇಂದು ಸ್ವಂತ ಕಟ್ಟಡದಲ್ಲಿ 25 ವರ್ಷ ಪೂರೈಸಿದ್ದರಿಂದ ಬೆಳ್ಳಿಹಬ್ಬ ಆಚರಿಸುತ್ತಿದ್ದೇವೆ ಎಂದು ಕಾಫಿ ಬೆಳೆಗಾರರ ಸಂಘದ ಸಂಸ್ಥಾಪಕ ಅಧ್ಯಕ್ಷ ಅರೇಹಳ್ಳಿ ರಾಜೇಗೌಡ ಹೇಳಿದರು.
ತಾಲೂಕಿನ ಅರೇಹಳ್ಳಿಯ ಸಕಲೇಶಪುರ ರಸ್ತೆಯಲ್ಲಿರುವ ಕಾಫಿ ಬೆಳೆಗಾರರ ಸಂಘದಲ್ಲಿ ಸೋಮವಾರ ಆಯೋಜಿಸಿದ್ದ ಅರೇಹಳ್ಳಿ ಕಾಫಿ ಬೆಳೆಗಾರರ ಸಂಘದ ಬೆಳ್ಳಿಹಬ್ಬ ಸಂಭ್ರಮ ಹಾಗೂ ಮೊದಲನೇ ಮಹಡಿಯಲ್ಲಿನ ನೂತನ ಕಟ್ಟಡ ಮತ್ತು ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಕನಸು ಕಂಡು ಅದನ್ನು ಸಾಕಾರಗೊಳಿಸಲು ಪ್ರಯತ್ನ ಪಟ್ಟಿದ್ದರಿಂದ ಸಂಘವನ್ನು ಸ್ಥಾಪಿಸಲು ಸಾಧ್ಯವಾಯಿತು. ಇಲ್ಲಿಯವರೆಗೂ ಹಲವಾರು ಮಹನೀಯರು ಸಂಘವನ್ನು ಕಟ್ಟಿ ಬೆಳೆಸಿರುವುದರಿಂದಲೇ ಇಂದು ನಾವೆಲ್ಲರೋ ಒಟ್ಟಾಗಿ ಸೇರಿ ಬೆಳ್ಳಿಹಬ್ಬ ಆಚರಿಸಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಸಂಘದ ಬೆಳವಣಿಗೆಗೆ ಎಲ್ಲರೂ ಮೂಂದಾಗಬೇಕು ಎಂದರು.
ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಮಲೆನಾಡ ಭಾಗದಲ್ಲಿ ಕಾಡಾನೆಗಳ ಸಮಸ್ಯೆ ಮಿತಿಮೀರಿದೆ. ಇದರಿಂದ ಕಾಫಿ ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಕಾಫಿ ಬೆಳೆಗಾರರು ಮತ್ತು ಸಂಘದ ಜತೆಗೆ ಸದಾ ನಾನಿರುತ್ತೇನೆ. ಕಾಡಾನೆಗಳ ಸಮಸ್ಯೆಯ ವಿರುದ್ಧದ ಬೆಳೆಗಾರರ, ರೈತರ, ಕೂಲಿ ಕಾರ್ಮಿಕರ ಹೋರಾಟಕ್ಕೆ ನಾನು ಬೆಂಬಲ ನೀಡುತ್ತೇನೆ ಎಂದರು.
ಜಿಲ್ಲಾ ಪ್ಲಾಂಟರ್ಸ್ ಸಂಘದ ಉಪಾಧ್ಯಕ್ಷ ಮಂಜುನಾಥ್ ಶೆಟ್ಟಿ ಮಾತನಾಡಿ, ಸಂಘದ ಮೂಲಕ ಒತ್ತುವರಿ ಸಮಸ್ಯೆ, ಕಾಡಾನೆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕುವಂತೆ ಮಾಡುವಲ್ಲಿ ನಿರಂತರ ಹೋರಾಟವನ್ನು ಮಾಡಿಕೊಂಡು ಬರಲಾಗುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಮುಖ್ಯವಾಗಿದೆ. ಈಗಾಗಲೇ ಕಾಡಾನೆ ಸಮಸ್ಯೆಯಿಂದಾಗಿ ಬೆಳೆ ಕಳೆದುಕೊಂಡು ಜೀವ ಭಯದಲ್ಲೇ ಎಲ್ಲರೂ ಆತಂಕದಲ್ಲಿ ಬದುಕುವಂತಾಗಿದೆ. ಇದಕ್ಕೆ ಸರ್ಕಾರ ಮತ್ತು ಅಧಿಕಾರಿಗಳು ಶಾಶ್ವತವಾದ ಪರಿಹಾರಕ್ಕೆ ಮುಂದಾಗಬೇಕಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಸಭಾಂಗಣ ನಿರ್ಮಾಣದ ದಾನಿ ಸಿದ್ದೇಶ್ ನಾಗೇಂದ್ರ ಮಾತನಾಡಿ, ನಾನು ಕಾಫಿ ಬೆಳೆಗಾರನಲ್ಲದಿದ್ದರೂ ಮೂಲತಃ ನನ್ನ ಕುಟುಂಬ ಕಾಫಿ ಬೆಳೆಯನ್ನು ನಂಬಿ ಬದುಕುತ್ತಿದ್ದ ಕುಟುಂಬವಾದ್ದರಿಂದ ಸಂಘಕ್ಕೆ ನೆರವಾಗುವ ನಿಟ್ಟಿನಲ್ಲಿ ಸಭಾಂಗಣದ ನಿರ್ಮಾಣಕ್ಕೆ ಶ್ರೀ ನಾಗೇಂದ್ರ ಸೇವಾ ಪ್ರತಿಷ್ಠಾನದಿಂದ ಕೊಡುಗೆ ನೀಡಲಾಗಿದೆ ಎಂದರು.
ರೇಹಳ್ಳಿ ಕಾಫಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಶಾರೀಬ್ ಫರ್ಹಾನ್, ಕಾರ್ಯದರ್ಶಿ ಕೆ.ಬಿ.ಪುಟ್ಟರಾಜು, ಜಂಟಿ ಕಾರ್ಯದರ್ಶಿ ಬಿ.ಸಿ.ಮೋಹನ್‌ಕುಮಾರ್, ಪದಾಧಿಕಾರಿಗಳಾದ ಪರಮೇಶ್, ಲೋಹಿತ್, ಯು.ಪಿ.ಮಲ್ಲೇಶ್, ಎಂ.ಆರ್.ವಿನೋದ್, ನಜೀಬುರ್ ರೆಹಮಾನ್, ಚೇತನ್‌ಕುಮಾರ್, ಡಬ್ಲುೃ.ಆರ್.ಪಿಂಟೊ ಸೇರಿದಂತೆ ಇತರರಿದ್ದರು.