ಹರ್ಷಿಕಾ ಪೂಣಚ್ಚ, ಶ್ವೇತಾ ಚಂಗಪ್ಪ, ಅನು ಪೂವಮ್ಮ. 
ನ್ಯೂಸ್

ಕಾಫಿ ಎಂಬ ಕಿಕ್; ಕೂರ್ಗ್ ಕಣ್ಮಣಿಯರ ಮನದಾಳ..

ಇಂದು ವಿಶ್ವ ಕಾಫಿ ದಿನ. ಕಾಫಿಗೆ ಚಿಕ್ಕಮಗಳೂರು ಎಷ್ಟು ಜನಪ್ರಿಯವೋ, ಕೊಡಗು ಸಹ ಅಷ್ಟೇ ಜನಪ್ರಿಯ. ‘ಕಾಫಿ ಕಪ್ ಆಫ್ ಇಂಡಿಯಾ’ ಎಂದು ಕರೆಸಿಕೊಳ್ಳುವ ಕೊಡಗಿನ ಬಗ್ಗೆ, ಅಲ್ಲಿನ ಕಾಫಿ ಬೆಳೆ ಮತ್ತು ಘಮದ ಬಗ್ಗೆ ಕೊಡಗಿನ ಕುವರಿಯರು ಏನಂತಾರೆ?

ಕಾಫಿಗೂ ನಮಗೂ ಅವಿನಾಭಾವ ನಂಟು

ಕಾಫಿ ಎಂದ ತಕ್ಷಣ ಎಲ್ಲರಿಗೂ ಕೂರ್ಗ್ ನೆನಪಾಗುತ್ತದೆ. ನಮ್ಮ ಬೆಳಗು ಶುರುವಾಗುವುದೇ ಆ ಕಾಫಿಯಿಂದ. ಹಾಗಾಗಿ ಕಾಫಿಗೂ ನಮಗೂ ಗಾಢ ಸಂಬಂಧ. ನಾವು ಕಾಫಿ ಬೆಳೆಯುವ ರೈತರೇ ಆಗಿರುವುದರಿಂದ ಅದರ ಸಂಪೂರ್ಣ ಮಾಹಿತಿ ನನಗೆ ಗೊತ್ತು. ಅದನ್ನೊಂದು ಕೇವಲ ಬೆಳೆಯಾಗಿ, ಆದಾಯದ ಮೂಲವಾಗಿ ನೋಡದೇ, ತಲತಲಾಂತರದಿಂದ ಅದರ ಜತೆಗೆ ನಮಗೆ ಗೊತ್ತಿಲ್ಲದೆ ಭಾವನಾತ್ಮಕ ನಂಟು ಬೆಳೆದುಬಂದಿದೆ. ಈಗಲೂ ಅದು ಮುಂದುವರಿಯುತ್ತಿದೆ. ಕೂರ್ಗ್​ನಲ್ಲಿದ್ದಾಗ ಮಾತ್ರ ಆ ನಂಟು ಎಂದಂತಲ್ಲ. ಎಲ್ಲೇ ಇದ್ದರೂ ಕಾಫಿಯ ಅಮಲೇ ಬೇರೆ. ಕೆಲಸದ ಒತ್ತಡದ ನಡುವೆ ಒಂದು ಕಪ್ ಒಂದೊಳ್ಳೆ ಕಾಫಿ ಸಿಕ್ಕರೆ, ಅದನ್ನು ಅನುಭವಿಸಿ ಸವಿಯುವ ಮಜವೇ ಬೇರೆ.

| ಹರ್ಷಿಕಾ ಪೂಣಚ್ಚ

ಕಾಫಿ ಎಂದರೆ ಬಾಲ್ಯ ನೆನಪಿಗೆ ಬರುತ್ತದೆ

ಹಿಂದೆಲ್ಲ ಕಾಫಿಯಲ್ಲಿಯೇ ಜೀವನ ಮಾಡುತ್ತಿದ್ದೆ. ಕಾಫಿ ಬಗ್ಗೆ ಹೇಳಹೊರಟರೆ, ಬಾಲ್ಯವೆಲ್ಲ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಾದರೂ ಬೇಸಿಗೆಯ ರಜೆಯ ಮಜ ಅನುಭವಿಸಿದ್ದು ನಮ್ಮ ಕೊಡಗಿನ ಕಾಫಿ ತೋಟಗಳಲ್ಲಿ. ಆಗ ಕಾಫಿ ಸಸಿ ನೆಡುವ ಪ್ರಕ್ರಿಯೆಯೇ ನಮಗೆಲ್ಲ ಖುಷಿಕೊಡುವಂಥದ್ದು. ಕೂರ್ಗ್​ಗೆ ಕಾಲಿಟ್ಟರೆ ಅಲ್ಲಿ ಸೂಸುವ ಘಮವೇ ಬೇರೆ. ಹೂಬಿಡುವ ಸಂದರ್ಭದಲ್ಲಿ ಇಡೀ ವಾತಾವರಣದ ಪರಿಮಳವೇ ಬೇರೆಯಾಗಿರುತ್ತದೆ. ಇದೀಗ ಅದೆಲ್ಲವನ್ನೂ ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ.

| ಶ್ವೇತಾ ಚೆಂಗಪ್ಪ

ಸ್ನೇಹಿತರಿಗಾಗಿಯೇ ಕಾಫಿ ಮೂಟೆ ಇರುತ್ತದೆ

ಎಲ್ಲೇ ಹೋದರೂ ಕೊಡಗನ್ನು ಕಾಫಿಯಿಂದಲೇ ಗುರುತಿಸುತ್ತಾರೆ. ಕರ್ನಾಟಕದಲ್ಲಿ ಅತೀ ಹೆಚ್ಚು ಕಾಫಿ ಬೆಳೆಯುವುದು ಚಿಕ್ಕಮಗಳೂರು ಮತ್ತು ಕೂರ್ಗ್​ನಲ್ಲಿ. ಆ ನಾಡಿನಿಂದ ಬಂದ ನಮಗೆ ಆ ವಿಚಾರವನ್ನು ಹೇಳಿಕೊಳ್ಳುವುದೇ ಹೆಮ್ಮೆ. ನಾನು ಕಾಫಿ ತೋಟಗಳ ಮಡಿಲಲ್ಲೇ ಹುಟ್ಟಿದವಳು. ಅದಕ್ಕೂ ನನಗೂ ಜಾಸ್ತಿ ಕನೆಕ್ಷನ್. ಭತ್ತ, ಕಾಳುಮೆಣಸು ನಮ್ಮಲ್ಲಿನ ಪ್ರಮುಖ ಬೆಳೆಯಾದರೂ ಕಾಫಿಯೇ ಹೆಚ್ಚು. ಕೂರ್ಗ್​ನಿಂದ ಬೆಂಗಳೂರಿಗೆ ಬರುತ್ತಿದ್ದೇನೆ ಎಂದರೆ, ಒಂದಷ್ಟು ಸ್ನೇಹಿತರಿಂದ ಕಾಫಿ ಪೌಡರ್ ಬೇಕು ಎಂಬ ಸಂದೇಶ ಬಂದಿರುತ್ತದೆ. ಹಾಗಾಗಿಯೇ ಪ್ರತಿ ವರ್ಷ ಇಂತಿಷ್ಟು ಮೂಟೆಯನ್ನು ಅದಕ್ಕಾಗಿಯೇ ತೆಗೆಸಿಟ್ಟಿರುತ್ತೇನೆ. ವಿದೇಶದಿಂದ ಬಂದ ಸ್ನೇಹಿತರೂ ಕಾಫಿಯನ್ನೇ ಕೇಳುತ್ತಾರೆ. ಹಾಗೆ ಕೇಳಿದಾಗಲೆಲ್ಲ ನನಗೆ ಖುಷಿಯ ಜತೆಗೆ ಹೆಮ್ಮೆಯೂ ಅನಿಸುತ್ತದೆ.

| ಅನು ಪೂವಮ್ಮ