ನವದೆಹಲಿ: ಭಾರೀ ಮಳೆಯಿಂದಾಗಿ ದೇಶಾದ್ಯಂತ ಜಲಪ್ರಳಯವೇ ಉಂಟಾಗಿದೆ. ಈ ನಡುವೆ ಬೆಚ್ಚಗಿನ ಸ್ಥಳಗಳನ್ನು ಹುಡುಕಿ ಹಾವುಗಳು ಎಲ್ಲೆಂದರಲ್ಲಿ ನುಗ್ಗುತ್ತಿದ್ದು, ಜನರು ಎಚ್ಚರಿಕೆಯಿಂದ ಇರಬೇಕಿದೆ. ಇದಕ್ಕೆ ಸೂಕ್ತ ಉದಾಹರಣೆಯಾಗಿ ಅರಣ್ಯಾಧಿಕಾರಿ ಸುಶಾಂತ್ ನಂದಾ ಅವರು ಹಂಚಿಕೊಂಡಿರುವ ವಿಡಿಯೋ ನೋಡಿದರೆ ಎಂತಹವರೂ ಬೆಚ್ಚಿಬೀಳಿಸುವಂತಿದೆ.
ತೀವ್ರ ಮಳೆಯಿಂದಾಗಿ ಎಲ್ಲೆಂದರಲ್ಲಿ ನುಗ್ಗುತ್ತಿರುವ ಹಾವುಗಳು ಮನೆಯ ಅಡುಗೆ ಕೋಣೆ, ಬಟ್ಟೆಗಳಲ್ಲಿ ಅಲ್ಲದೇ ಹಾಕುವ ಚಪ್ಪಲಿ ಹಾಗೂ ಶೂ ಗಳಲ್ಲೂ ಕೂಡ ಅವಿತುಕುಳಿತಿರುತ್ತವೆ. ತಮ್ಮ ಟ್ವಿಟ್ಟರ್ನಲ್ಲಿ ಅಧಿಕಾರಿ ಹಂಚಿಕೊಂಡಿರುವ ವಿಡಿಯೋನಲ್ಲಿ ಈ ಭಯಾನಕ ದೃಶ್ಯವನ್ನು ಕಾಣಬಹುದು.
ಮನೆಯೊಂದರ ಚಪ್ಪಲಿ ಸ್ಟ್ಯಾಂಡ್ನಲ್ಲಿ ವಿಚಿತ್ರ ಶಬ್ದ ಕೇಳಿಬರುತ್ತದೆ. ಗಾಬರಿಯಾದ ಮನೆಯವರು ಇದು ಹಾವಿನದ್ದೇ ಇರಬಹುದೆಂದು ಊಹಿಸಿ ಹಾವು ತಜ್ಞರನ್ನು ಕರೆಸುತ್ತಾರೆ. ಶೂ ನಲ್ಲೇ ಅವಿತುಕುಳಿತಿರುವ ಬಗ್ಗೆ ಖಚಿತಗೊಂಡು ಅದೇ ಶೂ ಬಳಿ ರಾಡ್ನಿಂದ ಮುಟ್ಟಿದ ಕೂಡಲೇ ಗಾಬರಿಗೊಂಡ ಹಾವು ಹೆಡೆ ಎತ್ತಿ ನಿಲ್ಲುತ್ತದೆ. ಈ ಭಯಾನಕ ವಿಡಿಯೋ ಈಗ ಭಾರೀ ವೈರಲ್ ಆಗುತ್ತಿದೆ. ವಿಶೇಷವಾಗಿ ಮಾನ್ಸೂನ್ ಸಮಯದಲ್ಲಿ ಎಚ್ಚರಿಕೆ ವಹಿಸಬೇಕೆಂದು ಅಧಿಕಾರಿ ಸಲಹೆ ನೀಡಿದ್ದಾರೆ. (ಏಜೆನ್ಸೀಸ್)