ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಬೋಟ್‌ನಲ್ಲಿ ಸಮುದ್ರ ಮಧ್ಯೆ ಅಸ್ವಸ್ಥಗೊಂಡ ಮೀನುಗಾರರೊಬ್ಬರನ್ನು ಕೋಸ್ಟ್‌ಗಾರ್ಡ್ ನೆರವಿನಿಂದ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ ಘಟನೆ ಮಂಗಳವಾರ ನಡೆದಿದೆ.
ನವಮಂಗಳೂರು ಬಂದರಿನಿಂದ 36 ನಾಟಿಕಲ್ ಮೈಲು ದೂರದ ಸಮುದ್ರ ಮಧ್ಯೆಅಸ್ವಸ್ಥಗೊಂಡ ಸ್ಥಳೀಯ ಮೀನುಗಾರ ವಸಂತ್ ಎಂಬವರೇ ಕೋಸ್ಟ್‌ಗಾರ್ಡ್‌ನಿಂದ ರಕ್ಷಿಸಲ್ಪಟ್ಟ ವ್ಯಕ್ತಿಯಾಗಿದ್ದಾರೆ. ಇವರು ಈಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಬೇಬಿ ಮೇರಿ 4 ಎಂಬ ಮೀನುಗಾರಿಕಾ ಬೋಟ್‌ನಲ್ಲಿ ಸ್ಥಳೀಯ ಮೀನುಗಾರ ವಸಂತ್ ಮಂಗಳವಾರ ಮೀನುಗಾರಿಕೆಗೆ ತೆರಳಿದ್ದರು. ಸಂಜೆ 3.20ರ ವೇಳೆಗೆ ಅವರಿಗೆ ಎದೆ ನೋವು, ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಈ ಬಗ್ಗೆ ಭಾರತೀಯ ಕೋಸ್ಟ್ ಗಾರ್ಡ್‌ಗೆ ತುರ್ತು
ಸಹಾಯಕ್ಕಾಗಿ ಸಂಪರ್ಕಿಸಲಾಗಿತ್ತು.
ಅಸ್ವಸ್ಥಗೊಂಡ ವಸಂತ್ ಅವರ ಆರೋಗ್ಯ ಸ್ಥಿತಿ ಬಗ್ಗೆ ಅಲ್ಲೇ ಸಮೀಪದಲ್ಲಿದ್ದ ಇನ್ನೊಂದು ಮೀನುಗಾರಿಕಾ ಬೋಟ್ ಸುಲ್ತಾನಿಯಾ ಮೂಲಕ ಮಾಹಿತಿ ಪಡೆದ ಕರಾವಳಿ ಕಾವಲು ಪಡೆಯ ಜಿಲ್ಲಾ ಕೇಂದ್ರ ತಕ್ಷಣ ವಸಂತನ ರಕ್ಷಣೆಗೆ ತೆರಳಲು ಅಗತ್ಯದ ವ್ಯವಸ್ಥೆ ಮಾಡಿತ್ತು.
ಸಮುದ್ರದಲ್ಲಿ ಗಸ್ತಿನಲ್ಲಿದ್ದ ಭಾರತೀಯ ಕೋಸ್ಟ್ ಗಾರ್ಡ್‌ನ ಇಂಟರ್‌ಸೆಪ್ಟರ್ ಬೋಟ್ ಸಿ-446ರ ಮೂಲಕ ಬೋಟ್‌ನತ್ತ ತೆರಳಿದ ತಟ ರಕ್ಷಣಾ ಪಡೆಯು ಅಸ್ವಸ್ಥಗೊಂಡಿದ್ದ ವಸಂತ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿತು.
ಮಂಗಳೂರು ಮೀನುಗಾರಿಕಾ ಇಲಾಖೆ ಮತ್ತು ನವಮಂಗಳೂರು ಬಂದರು ಪ್ರಾಧಿಕಾರದ ಸಹಯೋಗದಲ್ಲಿ ಜೆಟ್ಟಿಯಲ್ಲಿ ಸಾಗರ ರಕ್ಷಣಾ ಉಪ ಕೇಂದ್ರ (ಎಂಆರ್‌ಎಸ್‌ಸಿ ) ತುರ್ತು ವೈದ್ಯಕೀಯ ಸೇವೆಗಳನ್ನು ತ್ವರಿತವಾಗಿ ವ್ಯವಸ್ಥೆಗೊಳಿಸಿತ್ತು. ಬಳಿಕ ಅವರನ್ನು ಹೆಚ್ಚಿನ ಚಿಕಿತೆಗಾಗಿ ನಗರದ ಖಾಸಗಿ ಆಸ್ಪತ್ರ್ರೆಗೆ ದಾಖಲಿಸಲಾಗಿದೆ ಎಂದು ಕೋಸ್ಟ್‌ಗಾರ್ಡ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.