ನ್ಯೂಸ್

ಜಿಲ್ಲೆಯ ಆಮೂಲಾಗ್ರ ಅಭಿವೃದ್ಧಿಗೆ ಕ್ರಮ: ಸ್ವಾತಂತ್ರ್ಯೋತ್ಸವದಲ್ಲಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿಕೆ

ರಾಮನಗರ: ಜಿಲ್ಲೆಯನ್ನು ಆಮೂಲಾಗ್ರವಾಗಿ ಅಭಿವೃದ್ಧಿಪಡಿಸಿ ಮಾದರಿಯನ್ನಾಗಿಸಲು ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 75ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ಬಳಿಕ ಧ್ವಜವಂದನೆ ಸ್ವೀಕರಿಸಿ ಮಾತನಾಡಿ, ಅಪರೂಪದ ಪ್ರಾಕೃತಿಕ ಸಂಪತ್ತು, ಕುಶಲ ಮಾನವ ಸಂಪನ್ಮೂಲ, ಐತಿಹಾಸಿಕ ತಾಣಗಳು, ಕಲೆ ಸಾಂಸ್ಕೃತಿಕ ಪರಂಪರೆ ಹೊಂದಿರುವ ಜಿಲ್ಲೆ ಮಾದರಿಯಾಗಿ ಹೊರಹೊಮ್ಮಲಿದೆ ಎಂದರು. ಜಿಲ್ಲೆಯಲ್ಲಿ 7 ರೈತ ಉತ್ಪಾದಕ ಸಂಘಗಳಿದ್ದು, ತೋಟಗಾರಿಕೆ ಇಲಾಖೆ ಮತ್ತು ಕೃಷಿ ಕಲ್ಪ ಫೌಂಡೇಶನ್ ಸಹಯೋಗದೊಂದಿಗೆ ರೈತ ಉತ್ಪನ್ನಗಳನ್ನು ಅತಿ ಹೆಚ್ಚು ಬೆಲೆಗೆ ಖರೀದಿಸಲಾಗುತ್ತಿದ್ದು, ವಿಶಾಖಪಟ್ಟಣ ಮತ್ತು ದೆಹಲಿಯವರೆಗೆ ಕಳುಹಿಸಲಾಗುತ್ತಿದೆ. ಎಫ್‌ಪಿಒಗಳನ್ನು ಬಲಪಡಿಸಲು ಸರ್ಕಾರದಿಂದ ಅಗತ್ಯ

ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.

ಶೇ.58 ಲಸಿಕಾಕರಣ: ಕರೊನಾ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಈಗಾಗಲೇ ಶೇ.58 ಲಸಿಕಾಕರಣ ಆಗಿದೆ. ಈವರೆಗೂ 4.75 ಲಕ್ಷ ಜನರಿಗೆ ಲಸಿಕೆ ನೀಡಲಾಗಿದ್ದು, ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುತ್ತಿದ್ದು, ಒಟ್ಟು 47 ವೆಂಟಿಲೇಟರ್ ಬೆಡ್‌ಗಳು ಇದ್ದು, 370 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ. ಮಕ್ಕಳಿಗಾಗಿ ವಿಶೇಷ ಐಸಿಯು ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಶೇ.98.31 ಜನ ಕೋವಿಡ್‌ನಿಂದ ಗುಣಮುಖರಾಗಿದ್ದು, ಈವರೆಗೆ 4,58,111 ಜನ ಮೊದಲ ಡೋಸ್ ಪಡೆದಿದ್ದು, 1,62,662 ಮಂದಿ ಎರಡನೇ ಡೋಸ್ ಪಡೆದಿದ್ದಾರೆ ಎಂದರು.

ನಾಡಪ್ರಭು ಕೆಂಪೇಗೌಡರ ಪ್ರವಾಸಿ ಸರ್ಕ್ಯೂಟ್ ಅಭಿವೃದ್ಧಿ ಮಾಡಲಾಗುತ್ತಿದ್ದು, 75 ಕೋಟಿ ರೂ.ಗಳ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣದ ಕೆಲಸಕ್ಕೆ ಶೀಘ್ರ ಚಾಲನೆ ನೀಡಲಾಗುವುದು. ಚನ್ನಪಟ್ಟಣ ತಾಲೂಕಿನ ಭೈರಾಪಟ್ಟಣದಲ್ಲಿ ಮಾವು ಹಾಗೂ ವಿವಿಧ ಹಣ್ಣುಗಳ ಸಂಸ್ಕರಣಾ ಘಟಕ ಸ್ಥಾಪನೆಗೆ ಮಾಸ್ಟರ್ ಪ್ಲಾನ್ ಸಿದ್ಧವಾಗಿದೆ. ವಿವಿಧ ಜಲ ಮೂಲಗಳಿಂದ ಗ್ರಾಮೀಣ ಭಾಗದ ಮನೆಗಳಿಗೆ 250 ಕೋಟಿ ರೂ.ಗಳ ವೆಚ್ಚದಲ್ಲಿ ಶಾಶ್ವತ ನೀರು ಪೂರೈಸುವ ಯೋಜನೆ ಪ್ರಗತಿಯಲ್ಲಿದೆ ಎಂದರು. ಮೊಗೇನಹಳ್ಳಿ ಕೆರೆ, ಕಣ್ವ ಮತ್ತು ಮಂಚನಬೆಲೆ ಜಲಾಶಯಗಳಿಗೆ ಹಾಗೂ ವೈ.ಜಿ.ಗುಡ್ಡ ಕೆರೆಗೆ ನೀರು ತುಂಬಿಸುವ 540 ಕೋಟಿ ರೂ.ಗಳ ವೆಚ್ಚದ ಕಾಮಗಾರಿ ಶೇ.55 ಪೂರ್ಣವಾಗಿದ್ದು,

ಮುಂದಿನ ವರ್ಷಾಂತ್ಯಕ್ಕೆ ಪೂರ್ಣವಾಗಲಿದೆ.

ಬೆಂಗಳೂರಿನಿಂದ ಶುದ್ಧೀಕರಿಸಿದ ನೀರನ್ನು 147 ಕೆರೆ ತುಂಬಿಸುವ 160 ಕೋಟಿ ರೂ.ಗಳ ಕಾಮಗಾರಿ ವಿವಿಧ ಹಂತದಲ್ಲಿದ್ದು, ಕಣ್ವ ಜಲಾಶಯದ ಏತ ನೀರಾವರಿ ಯೋಜನೆಯ 28.85 ಕೋಟಿ ರೂ.ಗಳ ಮೊತ್ತದ ಟೆಂಡರ್ ಕಾಮಗಾರಿಗಳು ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿವೆ. ದೊಡ್ಡಾಲಹಳ್ಳಿ ಸೂಕ್ಷ್ಮ ನೀರಾವರಿ ಯೋಜನೆಯ 70 ಕೋಟಿ ರೂ.ಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಮಂಚನಬೆಲೆ ಹಾಗೂ ವೈ.ಜಿ.ಗುಡ್ಡ ಜಲಾಶಯ ವ್ಯಾಪ್ತಿಯಲ್ಲಿನ 400 ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿಗಾಗಿ 40 ಕೋಟಿ ರೂ. ಕಾಮಗಾರಿಗೆ ವಿಸ್ತೃತ ಯೋಜನಾ ವರದಿ ಸಿದ್ಧವಾಗಿದ್ದು ಎಂದರು. ಗರಳಾಪುರ, ಸಾತನೂರು ಏತ ನೀರಾವರಿ ಯೋಜನೆ ಗಳಿಂದ 12 ಕೆರೆಗಳಿಗೆ 252 ಕೋಟಿ ರೂ.ವೆಚ್ಚದಲ್ಲಿ ನೀರು ತುಂಬಿಸುವ ಕಾಮಗಾರಿ ಬಹುತೇಕ ಪೂರ್ಣವಾಗಿದ್ದು, ’ಜಲ ಜೀವನ್ ಮಿಷನ್’ ಯೋಜನೆಯಡಿ 221 ಕೋಟಿ ರೂ.ಅನುದಾನದಲ್ಲಿ ಜಿಲ್ಲೆಯ ಎಲ್ಲ ಮನೆಗಳಿಗೂ ನಲ್ಲಿ ನೀರೊದಗಿಸುವ ಯೋಜನೆ

ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಸನ್ಮಾನ ಕಾರ್ಯಕ್ರಮ : ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ವಿವಿಧ ರಂಗದಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿದರು. ರೇಷ್ಮೆ ಬೆಳೆ ವಿಭಾಗದಲ್ಲಿ ನೂರ್ ಬೇಗ್, ಮುಜೀಬ್ ಪಾಷ, ಚಾಮರಾಜ, ಪುಟ್ಟರತ್ನಬಾಯಿ, ತಿರುಮಲೇಗೌಡ, ರವಿ ಅವರನ್ನು ಸನ್ಮಾನಿಸಿದರು. ಕರೊನಾ ವಾರಿಯರ್ಸ್ ವಿಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಶ್ವೇತಾ, ಡಾ. ಮುತ್ತುರಾಜು, ಡಾ. ಭಾಗ್ಯಲಕ್ಷ್ಮೀ, ಡಾ.ಯದುಕುಮಾರ್, ಶುಶ್ರೂಷಕ ಅಧಿಕಾರಿಗಳಾದ ಕವಿತಾ, ಮಹಾಲಕ್ಷ್ಮೀ, ಗಂಗಾಧರ್, ಅಂಗನವಾಡಿ ಕಾರ್ಯಕರ್ತೆ ಭಾಗ್ಯಮ್ಮ, ದೀಪಾ ಹಾಗೂ ನಾಗರತ್ನಮ್ಮ, ಸ್ಯಾನಿಟರಿ ಸೂಪರ್ ವೈಸರ್ ಲಿಂಗರಾಜು, ಪೌರಕಾರ್ಮಿಕರಾದ ಮಹದೇವ ಮತ್ತು ಪಾಪಮ್ಮ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿ ಅತಿ ಹೆಚ್ಚು ಅಂಕ ಗಳಿಸಿದ ಶಿವನಹಳ್ಳಿ ಕಿತ್ತೂರುರಾಣಿ ಚನ್ನಮ್ಮ ಶಾಲೆಯ ಡಿ.ಎಲ್. ಸ್ನೇಹ ಹಾಗೂ ಬಿ.ಆರ್.ಲಾವಣ್ಯ ಅವರನ್ನು ಸನ್ಮಾನಿಸಲಾಯಿತು.

ಮೇಕೆದಾಟು ಯೋಜನೆ ನಿಲ್ಲುವುದಿಲ್ಲ: ಜಿಲ್ಲೆಯೂ ಸೇರಿ ರಾಜ್ಯದ ಪಾಲಿನ ಜೀವನಾಡಿ ಆಗಲಿರುವ ಮೇಕೆದಾಟು ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದರು.

ಕುಡಿಯುವ ನೀರಿನ ಉದ್ದೇಶಕ್ಕಾಗಿ ಅನುಷ್ಠಾನವಾಗುತ್ತಿರುವ ಈ ಯೋಜನೆಯ ಸಮಗ್ರ ಯೋಜನಾ ವರದಿ (ಡಿಪಿಆರ್)ಯನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದೆ. ಆಯೋಗದಿಂದ ಒಪ್ಪಿಗೆ ಸಿಕ್ಕಿದ ಕೂಡಲೇ ಯೋಜನೆ ಕಾಮಗಾರಿ ಆರಂಭ ಮಾಡಲಾಗುವುದು. ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆಗೆ ಇದು ಅಗತ್ಯ ಯೋಜನೆಯಾಗಿದ್ದು, ಇದಕ್ಕೆ ನೆರೆ ರಾಜ್ಯ ವಿರೋಧಿಸುವುದು ಸರಿಯಲ್ಲ. ಯಾರೇ ವಿರೋಧ ಮಾಡಿದರೂ ಯೋಜನೆ ನಿಲ್ಲುವುದಿಲ್ಲ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಅನುದಾನ ಬಿಡುಗಡೆ: ಪ್ರವಾಸೋದ್ಯಮ ಅಭಿವೃದ್ಧಿಗೆ ಬಹಳ ಪ್ರಾಮುಖ್ಯತೆ ನೀಡಲಾಗಿದ್ದು, ಕೆಂಪಾಪುರದಲ್ಲಿರುವ ನಾಡಪ್ರಭು ಕೆಂಪೇಗೌಡರ ವೀರ ಸಮಾಧಿಯನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಇದರ ಸಲುವಾಗಿ 35 ಕೋಟಿ ರೂ.ವೆಚ್ಚ ಮಾಡಲಾಗುತ್ತಿದ್ದು, ಗ್ರಾಮದ ಪುನರ್ವಸತಿಗಾಗಿ 10 ಕೋಟಿ ರೂ.ಗಳನ್ನು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದಿಂದ ನಾಳೆಯೇ ಡಿಸಿಗೆ ಕೊಡಲಾಗುತ್ತದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ಸ್ಕಿಲ್ ಹಬ್ : ಹೆಚ್ಚು ಉದ್ಯೋಗ ಸೃಷ್ಟಿ ಮಾಡಲು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಮಾದರಿ ಸ್ಕಿಲ್ ಹಬ್ ರಾಮನಗರದಲ್ಲಿ ಆರಂಭ ಮಾಡಲಾಗುವುದು. ಉತ್ಸಾಹಿ ತರುಣರು, ತರುಣಿಯರಿಗೆ ಉದ್ಯೋಗ ಕೌಶಲ ಮಾರ್ಗದರ್ಶನ ಇಲ್ಲಿ ಸಿಗಲಿದೆ ಎಂದು ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಸ್ಕಿಲ್ ಕನೆಕ್ಟ್ ಕಾರ್ಯಕ್ರಮದ ಮೂಲಕ ಉದ್ಯೋಗಾಂಕ್ಷಿಗಳು-ಉದ್ಯೋಗದಾತರ ಸಂಪರ್ಕಕ್ಕೆ ವೇದಿಕೆ ಕಲ್ಪಿಸುವುದರ ಜತೆಗೆ, ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದ 150 ಸರ್ಕಾರಿ ಐಟಿಐಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. 315 ಮಿನಿ ಉದ್ಯೋಗ ಮೇಳಗಳಿಂದ 25,360 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಗಿದೆ. ಗ್ರಾಮೀಣ ಮಹಿಳೆಯರ ಆರ್ಥಿಕ ಶಕ್ತಿ ಹೆಚ್ಚಿಸಲು ಎನ್.ಆರ್.ಎಲ್.ಎಂ ಯೋಜನೆಯಡಿ 6 ಲಕ್ಷ ಸ್ವ-ಸಹಾಯ ಗುಂಪುಗಳಿಗೆ 13,700 ಕೋಟಿ ರೂಪಾಯಿ ಬ್ಯಾಂಕ್ ಸಾಲ ನೀಡುವುದರ ಜತೆಗೆ, 59,323 ಸ್ವ ಸಹಾಯ ಗುಂಪುಗಳಿಗೆ 524 ಕೋಟಿ ರೂ.ಗಳ ಸಮುದಾಯ ಬಂಡವಾಳ ನಿಧಿ ಕೊಡಲಾಗಿದೆ. ಆರ್ಥಿಕ ಸಂಕಷ್ಟದಲ್ಲಿದ್ದ 2.16 ಲಕ್ಷ ಬೀದಿಬದಿ ವ್ಯಾಪಾರಿಗಳಿಗೆ ತಲಾ 2,000 ರೂ.ನೆರವು ನೀಡಲಾಗಿದೆ ಎಂದು ಹೇಳಿದರು.