ಬೆಂಗಳೂರು: ಕುಮಾರಕೃಪಾ ರಸ್ತೆಯಲ್ಲಿರುವ ನವೀಕೃತ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ವಾಸ್ತವ್ಯ ಮಾಡಲಿದ್ದಾರೆ. ಬಂಗಲೆ ಪ್ರವೇಶಕ್ಕೂ ಮುನ್ನ ವಿಶೇಷ ಪೂಜೆ ಮಾಡಲಾಯಿತು. ಸೋಮವಾರ ಬೆಳಗ್ಗೆ ನಡೆದ ಪೂಜೆಯಲ್ಲಿ ಸಿಎಂ ಸಿದ್ದರಾಮಯ್ಯ ಸಹ ಭಾಗಿಯಾಗಿದ್ದರು.
ಈ ಮೊದಲು ಕಾವೇರಿ ನಿವಾಸದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಾಸವಾಗಿದ್ದರು. ಬಿಜೆಪಿ ಸರ್ಕಾರದ ಅವಧಿ ಮುಗಿದ ನಂತರ ಜೂನ್‌ನಲ್ಲಿ ಯಡಿಯೂರಪ್ಪ ಕಾವೇರಿ ನಿವಾಸ ತೊರೆದಿದ್ದರು. ಯಡಿಯೂರಪ್ಪ ಕಾವೇರಿ ನಿವಾಸದಿಂದ ಹೊರ ಬಂದ ನಂತರ ಸಣ್ಣ-ಪುಟ್ಟ ರಿಪೇರಿ ಕೆಲಸಗಳು ನಡೆದಿದ್ದವು. ಈಗ ಕಾವೇರಿ ನಿವಾಸ ನವೀಕರಣಗೊಂಡಿದ್ದು, ಇನ್ನು ಮುಂದೆ ಸಿಎಂ ಸಿದ್ದರಾಮಯ್ಯ ವಾಸವಿರಲಿದ್ದಾರೆ.
2013ರಲ್ಲಿ ಸಿಎಂ ಆಗಿದ್ದ ಅವಧಿಯಲ್ಲಿ ಕಾವೇರಿ ನಿವಾಸದಲ್ಲೇ ಸಿದ್ದರಾಮಯ್ಯ ಉಳಿದುಕೊಂಡಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲೂ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲೇ ಇದ್ದರು. ಆಗ ಸಚಿವರಾಗಿದ್ದ ಕೆ.ಜೆ ಜಾರ್ಜ್ ಹೆಸರಿಗೆ ಈ ನಿವಾಸ ಹಂಚಿಕೆಯಾಗಿತ್ತು.
ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ವಾಸ್ತವ್ಯ ಬದಲಿಸಿದ್ದ ಸಿದ್ದರಾಮಯ್ಯ ಕಾವೇರಿಯಿಂದ ಶಿವಾನಂದ ವೃತ್ತದ ಬಳಿ ಇರುವ ಗಾಂಧಿ ಭವನ ರಸ್ತೆಯಲ್ಲಿನ ಕುಮಾರಕೃಪಾ ಪೂರ್ವ ನಂ.1 ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಸ್ಥಳಾಂತರಗೊಂಡಿದ್ದರು. ಈಗ ಮತ್ತೆ ಕಾವೇರಿ ನಿವಾಸದಲ್ಲಿ ವಾಸ ಮಾಡಲಿದ್ದಾರೆ.
ಸಿದ್ದರಾಮಯ್ಯ ವಾಸವಿದ್ದ ಮನೆ ತೆರವಾಗಿರುವ ಕಾರಣ ಡಿಸಿಎಂ ಡಿ.ಕೆ.ಶಿವಕುಮಾರ್ ಈ ನಿವಾಸದಲ್ಲಿ ವಾಸ್ತವ್ಯ ಹೂಡಲಿದ್ದಾರೆ.