ನ್ಯೂಸ್

ಭಾರತದಲ್ಲಿ ಸಿಎಂಗಳ ಬಳಿ ಇದೆ 1,600 ಕೋಟಿ ರೂ. ಆಸ್ತಿ

ನವದೆಹಲಿ: ಆಂಧ್ರಪ್ರದೇಶದ ಸಿಎಂ ಎನ್.ಚಂದ್ರಬಾಬು ನಾಯ್ಡು ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ. ದೇಶದಲ್ಲಿ ಮುಖ್ಯಮಂತ್ರಿಗಳ ಬಳಿ ಒಟ್ಟು 1,600 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಇದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್್ಸರ್ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (ಎನ್​ಇಡಬ್ಲ್ಯು) ವರದಿಯಿಂದ ಈ ಸಂಗತಿ ಬಹಿರಂಗಗೊಂಡಿದೆ. ದೇಶದ 27 ರಾಜ್ಯ ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಸ್ವಯಂ ಸಲ್ಲಿಸಿರುವ ಅಫಿಡವಿಟ್​ಗಳನ್ನು ವಿಶ್ಲೇಷಿಸಿ ಈ ವರದಿ ಪ್ರಕಟಿಸಲಾಗಿದೆ. ಇತ್ತೀಚಿನ ಚುನಾವಣೆಗೂ ಮುನ್ನ ಅವರು ಸಲ್ಲಿಸಿರುವ ಅಫಿಡವಿಟ್​ಗಳ ಮಾಹಿತಿ ಆಧರಿಸಿ ಈ ವಿಶ್ಲೇಷಣೆ ನಡೆಸಲಾಗಿದೆ. ಪ್ರಸ್ತುತ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತವಿದೆ.

ಎರಡನೇ ಸ್ಥಾನದಲ್ಲಿ ಪೇಮಾ ಖಂಡು

ಮುಖ್ಯಮಂತ್ರಿಗಳ ಪೈಕಿ ಮೂವರು ಶತಕೋಟ್ಯಧಿಪತಿಗಳಿದ್ದಾರೆ. ಅರುಣಾಚಲಪ್ರದೇಶದ ಸಿಎಂ, ಬಿಜೆಪಿಯ ಪೇಮಾ ಖಂಡು 332 ಕೋಟಿ ರೂ. ಆಸ್ತಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಅವರು 165 ಕೋಟಿ ರೂ. ಮೊತ್ತದ ಚರಾಸ್ತಿ ಹಾಗೂ 167 ಕೋಟಿ ರೂ. ಮೊತ್ತದ ಸ್ಥಿರಾಸ್ತಿ ಹೊಂದಿದ್ದಾರೆ.

ಸಿದ್ದರಾಮಯ್ಯ ಸಂಪತ್ತು 51 ಕೋಟಿ ರೂ.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅತ್ಯಂತ ಶ್ರೀಮಂತ ಸಿಎಂಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, 51 ಕೋಟಿ ರೂ. ಮೌಲ್ಯದ ಸಂಪತ್ತು ಹೊಂದಿದ್ದಾರೆ. ಅವರ ಬಳಿ 21 ಕೋಟಿ ರೂ. ಮೌಲ್ಯದ ಚರಾಸ್ತಿ, 30 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳಿವೆ.

ಮಮತಾ ಬಳಿ 15.38 ಲಕ್ಷ ರೂಪಾಯಿ

ಪಶ್ಚಿಮಬಂಗಾಳದ ಸಿಎಂ, ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಬಳಿ 15.38 ಲಕ್ಷ ರೂ. ಸಂಪತ್ತಿದ್ದು, ದೇಶದಲ್ಲೇ ಅತ್ಯಂತ ಕಡಿಮೆ ಶ್ರೀಮಂತ ಸಿಎಂ ಅನಿಸಿಕೊಂಡಿದ್ದಾರೆ. ಅವರ ಆಸ್ತಿ ಪಟ್ಟಿಯಲ್ಲಿ ಯಾವುದೇ ಸ್ಥಿರಾಸ್ತಿಯ ಉಲ್ಲೇಖವಿಲ್ಲ.

ಸಿಎಂ ನಾಯ್ಡು ಆಸ್ತಿ 931 ಕೋಟಿ ರೂ.

ದೇಶದ 30 ಮುಖ್ಯಮಂತ್ರಿಗಳ ಒಟ್ಟು ಆಸ್ತಿ 1,632 ಕೋಟಿ ರೂಪಾಯಿ ಆಗಿದ್ದರೆ, ಚಂದ್ರಬಾಬು ನಾಯ್ಡು ಒಬ್ಬರ ಬಳಿಯೇ 931 ಕೋಟಿ ರೂ. ಆಸ್ತಿ ಇದೆ. ಸರಾಸರಿ ಪ್ರಕಾರ ಪ್ರತಿ ಮುಖ್ಯಮಂತ್ರಿ ಬಳಿ 54.42 ಕೋಟಿ ರೂ. ಆಸ್ತಿ ಇದ್ದಂತಾಗಿದೆ. ತೆಲುಗುದೇಶಂ ಪಕ್ಷ(ಟಿಡಿಪಿ)ದ ಮುಖ್ಯಸ್ಥರೂ ಆಗಿರುವ ಚಂದ್ರಬಾಬು ನಾಯ್ಡು ಘೋಷಿಸಿಕೊಂಡಿರುವ ಆಸ್ತಿ ವಿವರಗಳ ಪ್ರಕಾರ, ಅವರ ಬಳಿ 810 ಕೋಟಿ ರೂ. ಮೊತ್ತದ ಚರಾಸ್ತಿ ಹಾಗೂ 121 ಕೋಟಿ ರೂ. ಮೊತ್ತದ ಸ್ಥಿರಾಸ್ತಿಗಳಿವೆ.

ಚಂದ್ರಬಾಬು ನಾಯ್ಡು ಅವರ ಘೊಷಿತ 931 ಕೋಟಿ ರೂಪಾಯಿಗಳ ಸಂಪತ್ತಿನ ಬಹುಪಾಲು ಡೈರಿ ಕಂಪನಿಯಲ್ಲಿನ ಅವರ ಕುಟುಂಬದ ಹೂಡಿಕೆಯಿಂದ ಬಂದಿದೆ. ನಾಯ್ಡು 1992ರಲ್ಲಿ ಹೆರಿಟೇಜ್ ಫುಡ್ಸ್ ಕಂಪನಿ ಸ್ಥಾಪಿಸಿದ್ದರು. ಅವರ ಪತ್ನಿ ಭುವನೇಶ್ವರಿ ನಾರಾ ಅವರು ಕಂಪನಿಯ 24.37 ಶೇಕಡಾ ಪಾಲನ್ನು ಹೊಂದಿದ್ದಾರೆ. ನಾರಾ ಕುಟುಂಬ ಹೆರಿಟೇಜ್ ಫುಡ್ಸ್​ನ 41.3 ಶೇಕಡಾ ಷೇರುಗಳನ್ನು ಹೊಂದಿದೆ. 1 ಕೋಟಿ ರೂಪಾಯಿಗಳ ಬಂಡವಾಳ ಹೂಡಿ ಅವರ ಕುಟುಂಬ ಈ ಕಂಪನಿ ಸ್ಥಾಪಿಸಿತ್ತು. ಕಂಪನಿಯ ಮಾರುಕಟ್ಟೆ ಬಂಡವಾಳವು 1995ರಲ್ಲಿ 25 ಕೋಟಿ ರೂ. ಇತ್ತು. ಈಗ ಅವರ ಕಂಪನಿಯ ಬಂಡವಾಳ 4,381 ಕೋಟಿ ರೂಪಾಯಿಗಳಿಗೆ ಏರಿದೆ. ಜೂನ್ 2024ರಲ್ಲಿ ಇದು 6,755 ಕೋಟಿ ರೂಪಾಯಿಗಳನ್ನು ತಲುಪಿತ್ತು. ಕಂಪನಿ 2023ರಲ್ಲಿ 3,000 ಕೋಟಿ ರೂಪಾಯಿ ಮತ್ತು 2025ರಲ್ಲಿ 4,000 ಕೋಟಿ ರೂಪಾಯಿ ವಹಿವಾಟು ನಡೆಸಿದೆ.

12 ಮುಖ್ಯಮಂತ್ರಿಗಳ ವಿರುದ್ಧ ಕ್ರಿಮಿನಲ್ ಕೇಸ್

ಮುಖ್ಯಮಂತ್ರಿಗಳ ಪೈಕಿ ಶೇ.40 ಅಂದರೆ 30ರಲ್ಲಿ 12 ಮಂದಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ. ಅದರಲ್ಲೂ ಹತ್ತು ಸಿಎಂಗಳ ವಿರುದ್ಧ ಕೊಲೆಯತ್ನ, ಅಪಹರಣ, ಲಂಚ, ಕ್ರಿಮಿನಲ್ ಬೆದರಿಕೆ ಮುಂತಾದ ಗಂಭೀರ ಪ್ರಕರಣಗಳಿವೆ.

ಸಾಲದಲ್ಲಿರುವ ಸಿಎಂಗಳು

ಹನ್ನೊಂದು ಸಿಎಂಗಳು 1 ಕೋಟಿ ರೂ. ಅಥವಾ ಅದಕ್ಕೂ ಹೆಚ್ಚಿನ ಸಾಲ ಹೊಂದಿದ್ದಾರೆ. ಅರುಣಾಚಲ ಸಿಎಂ ಪೇಮಾ ಖಂಡು 180 ಕೋಟಿ ರೂ. ಸಾಲದೊಂದಿಗೆ ಈ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ. ಕರ್ನಾಟಕದ ಸಿಎಂ ಸಿದ್ದರಾಮಯ್ಯ 23 ಕೋಟಿ ರೂ., ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು 10 ಕೋಟಿ ರೂ. ಸಾಲ ಹೊಂದಿದ್ದಾರೆ.