ಬೆಂಗಳೂರು: ಮಂಜೂರಾಗಿದ್ದ ಐದು ಎಕರೆ ನಿವೇಶನವನ್ನು ಕೆಐಎಡಿಬಿಗೆ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಸಿದ್ಧಾರ್ಥ ವಿಹಾರ ಟ್ರಸ್ಟ್ ಹಿಂತಿರುಗಿಸಿದ್ದು, ಮುಖ್ಯಮಂತ್ರಿ ಕುರ್ಚಿ ಶೋಧದ ತಂತ್ರಗಾರಿಕೆಯಿದು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯ ವ್ಯಂಗ್ಯವಾಡಿದ್ದಾರೆ.
ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ಕೆಐಎಡಿಬಿ ಅಭಿವೃದ್ಧಿಪಡಿಸಿದ ಡಿೆನ್ಸ್ ಏರೋಸ್ಪೇಸ್ ಬಡಾವಣೆಯಲ್ಲಿ ನಾಗರಿಕ ಸವಲತ್ತಿಗೆ ಕಾದಿಟ್ಟ ನಿವೇಶನ ಅಕ್ರಮವಾಗಿ ಮಂಜೂರಾಗಿತ್ತು ಎಂಬುದನ್ನು ಖರ್ಗೆ ಕುಟುಂಬದ ಟ್ರಸ್ಟ್ ಪರೋಕ್ಷವಾಗಿ ಒಪ್ಪಿದೆ ಎಂದು ಟೀಕಿಸಿದ್ದಾರೆ.
ಒಂದು ಕುಟುಂಬದ ಸದಸ್ಯರಿರುವ ಟ್ರಸ್ಟ್‌ಗೆ ಬೆಲೆಬಾಳುವ ಜಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿದ್ದೆ. ಈ ಕುರಿತು ರಾಜ್ಯಪಾಲರಿಗೆ ಸಾಮಾಜಿಕ ಕಾರ್ಯಕರ್ತರ ಸಲ್ಲಿಸಿದ ದೂರಿನ ವಿಷಯ ಪ್ರಸ್ತಾಪಿಸಿದಾಗ ಸಚಿವ ಪ್ರಿಯಾಂಕ್ ಖರ್ಗೆ ಮತ್ತವರ ಆಪ್ತರು ನನಗೆ ನಿಂದಿಸಿ, ಬೆದರಿಕೆ ಹಾಕಿದ್ದರು.
ಇದೀಗ ಖರ್ಗೆ ಕುಟುಂಬದ ಟ್ರಸ್ಟ್ ತನಗೆ ಮಂಜೂರಾದ ಐದು ಎಕರೆ ನಿವೇಶನವನ್ನು ಕೆಐಎಡಿಬಿಗೆ ಹಿಂತಿರುಗಿಸಿದ್ದು, ಸತ್ಯಕ್ಕೆ ಜಯ ಸಿಕ್ಕಿದೆ. ಅಷ್ಟಕ್ಕೂ ಇದು ಸಿಎಂ ಕುರ್ಚಿಯತ್ತ ದಾಪುಗಾಲು ಹಾಕುವ ತಂತ್ರ ಎನ್ನಬಹುದು ಎಂದು ಲಹರ್ ಸಿಂಗ್ ಸಿರೋಯ ಕಾಲೆಳೆದಿದ್ದಾರೆ.