ನ್ಯೂಸ್

ಸಿಎಂ ಯೋಗಿ ಸರ್ಜಿಕಲ್ ಸ್ಟ್ರೈಕ್

Webdesk - Mallikarjun K R

ಲಖನೌ: ಕನ್ವರ್ ಯಾತ್ರೆಯ ಮಾರ್ಗದಲ್ಲಿರುವ ಹೋಟೆಲ್- ರೆಸ್ಟೋರೆಂಟ್ ಮತ್ತಿತರ ಆಹಾರದ ಅಂಗಡಿಗಳ ಮುಂದೆ ಮಾಲೀಕರ ಹೆಸರುಗಳನ್ನು ಪ್ರದರ್ಶಿಸಬೇಕೆಂಬ ಮುಜಾಫರ್​ನಗರ ಜಿಲ್ಲಾ ಪೊಲೀಸರ ವಿವಾದಾತ್ಮಕ ಆದೇಶವನ್ನು ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ಇಡೀ ರಾಜ್ಯಕ್ಕೆ ವಿಸ್ತರಿಸಿದೆ. ಜಿಲ್ಲಾ ಪೊಲೀಸರು ಸೋಮವಾರ ಹೊರಡಿಸಿದ್ದ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಇದೊಂದು ‘ಮುಸ್ಲಿಂ-ವಿರೋಧಿ ಕ್ರಮ’ ಎಂದು ವಿಪಕ್ಷಗಳು ಟೀಕಿಸಿದ್ದವು. ಈ ಆದೇಶವು ಮುಸ್ಲಿಂ ವರ್ತಕರನ್ನು ಟಾರ್ಗೆಟ್ ಮಾಡಿದೆಯೆಂದು ಆಳುವ ಪಕ್ಷದ ಕೆಲವು ಮಿತ್ರ ಪಕ್ಷಗಳು ಕೂಡ ಆರೋಪಿಸಿರುವುದರಿಂದ ವಿವಾದದ ಕಾವು ಹೆಚ್ಚಾಗಿದೆ.

ರಾಜ್ಯಾದ್ಯಂತ ಕನ್ವರ್ ಯಾತ್ರೆಯ ಮಾರ್ಗದಲ್ಲಿರುವ ಎಲ್ಲ ಹೊಟೇಲ್​ಗಳಿಗೆ ಈ ನಿಯಮವನ್ನು ಅನ್ವಯಿಸುವ ಔಪಚಾರಿಕ ಆದೇಶವನ್ನು ಶೀಘ್ರವೇ ಹೊರಡಿಸಲಾಗುವುದೆಂದು ರಾಜ್ಯ ಸರ್ಕಾರದ ವಕ್ತಾರರೊಬ್ಬರು ತಿಳಿಸಿದ್ದಾರೆ. ಯಾವುದೇ ‘ಗೊಂದಲವನ್ನು’ ನಿವಾರಿಸುವ ಉದ್ದೇಶದಿಂದ ಹೊಟೇಲ್​ಗಳ ಮಾಲೀಕರ ಹೆಸರನ್ನು ಪ್ರದರ್ಶಿಸುವಂತೆ ಮುಜಾಫರ್​ನಗರ ಪೊಲೀಸರು ಸೋಮವಾರ ಆದೇಶಿಸಿದ್ದರು.

ಕನ್ವರ್ ಯಾತ್ರೆಯ ಸುಮಾರು 240 ಕಿ.ಮೀ. ಮಾರ್ಗ ಮುಜಾಫರ್​ನಗರ ಜಿಲ್ಲೆಯಲ್ಲಿ ಹಾದು ಹೋಗುತ್ತದೆ. ಎಲ್ಲ ಹೋಟೆಲ್, ಧಾಬಾ ಮತ್ತು ತಳ್ಳು ಗಾಡಿಗಳ ಸಹಿತ ಎಲ್ಲ ಆಹಾರದಂಗಡಿಗಳ ಮಾಲೀಕರ ಹೆಸರನ್ನು ಪ್ರದರ್ಶಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾ ಪೊಲೀಸಸ್ ಮುಖ್ಯಸ್ಥ ಅಭಿಷೇಕ್ ಸಿಂಗ್ ಹೇಳಿದ್ದಾರೆ.

ಕನ್ವರಿಯಾಗಳಲ್ಲಿ (ಕನ್ವರ್ ಯಾತ್ರಿಗಳು) ಗೊಂದಲವಾಗುವುದನ್ನು ನಿವಾರಿಸಲು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಉದ್ಭವಿಸುವುದನ್ನು ತಡೆಯುವುದು ಇದರ ಉದ್ದೇಶವಾಗಿದೆ ಎಂದಿದ್ದಾರೆ.

ಅಧಿಕಾರಿ ಸಮರ್ಥನೆ: 2006ರ ಆಹಾರ ಸುರಕ್ಷತೆ ಮತ್ತು ಮಾನಕಗಳ ಕಾನೂನಿನ ಪ್ರಕಾರ ಪ್ರತಿ ರೆಸ್ಟೋರೆಂಟ್ ಮತ್ತು ಧಾಬಾಗಳ ಸಂಚಾಲಕರು ತಮ್ಮ ಸಂಸ್ಥೆಗಳ ಹೆಸರು, ಮಾಲೀಕರ ಹೆಸರು ಮತ್ತು ಲೈಸೆನ್ಸ್ ಸಂಖ್ಯೆ ಪ್ರದರ್ಶಿಸುವುದು ಕಡ್ಡಾಯ ಎಂದು ಹೇಳಿರುವ ಮೀರತ್​ನ ಅಳತೆ ಮತ್ತು ಮಾಪನಗಳ ಇಲಾಖೆಯ ಅಧಿಕಾರಿ ವಿ.ಕೆ. ಮಿಶ್ರಾ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಯೋಗಿ ಆದಿತ್ಯನಾಥ ನೇತೃತ್ವದಲ್ಲೇ ಉಪ ಚುನಾವಣೆ: ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ಕಳಪೆ ಪ್ರದರ್ಶನ ತೋರಿದ್ದು ಹಾಗೂ ಸಿಎಂ ಯೋಗಿ ಆದಿತ್ಯನಾಥ ಅವರ ಕಾರ್ಯವೈಖರಿ ಕುರಿತು ಪಕ್ಷದೊಳಗೆ ತೀವ್ರ ಅಸಮಾಧಾನ ವ್ಯಕ್ತವಾಗಿದ್ದರ ನಡುವೆಯೇ ಉಪ ಚುನಾವಣೆಗೆ ಸಿಎಂ ಯೋಗಿಯೇ ನೇತೃತ್ವ ವಹಿಸುವುದು ನಿಚ್ಚಳವಾಗಿದೆ. ಉಪ ಚುನಾವಣೆ ನಡೆಯಲಿರುವ ಹತ್ತು ಕ್ಷೇತ್ರಗಳಲ್ಲಿನ ಸಿದ್ಧತೆಗಳ ನೇರ ನಿಯಂತ್ರಣ ಸಾಧಿಸಿರುವ ಸಿಎಂ ಯೋಗಿ, ಸಂಬಂಧಿತ ಕ್ಷೇತ್ರಗಳಲ್ಲಿ ಬೀಡುಬಿಟ್ಟಿರುವ ಸಚಿವರಿಗೆ ಜವಾಬ್ದಾರಿ ವಹಿಸಿದ್ದಾರೆ. ಅಲ್ಲದೆ, ಜನರ ಕುಂದುಕೊರತೆಗಳನ್ನು ಪರಿಹರಿಸಿ, ಮತಗಟ್ಟೆಗಳನ್ನು ಬಲಪಡಿಸಿ ಎಂಬ ನಿರ್ದೇಶನವನ್ನೂ ನೀಡಿದ್ದಾರೆ. ಈ ಕುರಿತಂತೆ ಬುಧವಾರವೇ ಸಿಎಂ ಲಖನೌ ನಿವಾಸದಲ್ಲಿ ಸಭೆ ಕೂಡ ನಡೆಸಲಾಗಿತ್ತು. ಅಂದಹಾಗೆ ಈ ಉಪ ಚುನಾವಣೆಗೆ ಇನ್ನೂ ದಿನಾಂಕ ಘೋಷಣೆ ಆಗಿಲ್ಲ.

ಸಾತ್ವಿಕ ಆಹಾರ: ಶುದ್ಧ ಸಸ್ಯಾಹಾರಿ ಹೋಟೆಲ್​ನಲ್ಲಿ ‘ಸಾತ್ವಿಕ’ ಆಹಾರ ಸಿಗುವ ಸಾಧ್ಯತೆ ಹೆಚ್ಚಿರುವುದರಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಹೇಳಿದೆ. ಆದರೆ, ಲೋಕ ಜನ ಶಕ್ತಿ ಮತ್ತು ಜೆಡಿಯುನಂಥ ಬಿಜೆಪಿಯ ಮಿತ್ರಪಕ್ಷಗಳು ಹಾಗೂ ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಿಎಸ್​ಪಿ, ಒವೈಸಿ ನೇತೃತ್ವದ ಎಐಎಂಐಎಂ ಮುಂತಾದ ಪ್ರತಿಪಕ್ಷಗಳು ಈ ಕ್ರಮವನ್ನು ಕಟುವಾಗಿ ವಿರೋಧಿಸಿವೆ. ಇದು ‘ಸರ್ಕಾರಿ ಪ್ರಾಯೋಜಿತ ಧರ್ವಂಧತೆ’ ಆಗಿದೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ವರ್ಣಿಸಿದ್ದಾರೆ.