ಬೆಂಗಳೂರು: ರಾಷ್ಟ್ರಾದ್ಯಂತ ಜಾರಿಯಲ್ಲಿರುವ ಲಾಕ್ಡೌನ್ನ ಮೊದಲ ಹಂತ ಮಂಗಳವಾರಕ್ಕೆ (ಏಪ್ರಿಲ್ 14) ಅಂತ್ಯವಾಗಲಿದೆ. ಈಗಾಗಲೆ ಲಾಕ್ಡೌನ್ ಅನ್ನು ಏಪ್ರಿಲ್ 30ರವರೆಗೆ ವಿಸ್ತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ 2ನೇ ಹಂತದ ಲಾಕ್ಡೌನ್ ಅನ್ನು ಅತ್ಯಂತ ಸ್ಮಾರ್ಟ್ ಆಗಿ ಜಾರಿಗೊಳಿಸಲು ರಾಜ್ಯ ಸರ್ಕಾರ ಚಿಂತನೆ ಆರಂಭಿಸಿದೆ.
ಈ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ಸಮಾಲೋಚನೆ ಆರಂಭಿಸಿದ್ದಾರೆ. ಸೋಮವಾರ ಬೆಳಗ್ಗೆ ನಡೆದ ಈ ಸಮಾಲೋಚನೆಯ ವೇಳೆ ಸ್ಮಾರ್ಟ್ ಲಾಕ್ಡೌನ್ ಬಗ್ಗೆ ಖಾಸಗಿ ಸಂಸ್ಥೆಯೊಂದು ಸಿಎಂ ಎದುರು ಪವರ್ಪಾಯಿಂಟ್ ಪರ್ಸೆಂಟೇಷನ್ ನೀಡಿತು.
ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳಲ್ಲದೆ ಡಿಸಿಎಂ ಡಾ. ಅಶ್ವತ್ಥನಾರಾಯಣ, ಕಂದಾಯ ಸಚಿವ ಆರ್. ಅಶೋಕ್ ಸೇರಿ ಹಲವು ಸಚಿವರು ಈ ಸಭೆಯಲ್ಲಿ ಉಪಸ್ಥಿತರಿದ್ದರು.
ಕೃಷಿ ಚಟುವಟಿಕೆ, ಕಟ್ಟಡ ನಿರ್ಮಾಣ, ಸಣ್ಣ ಕೈಗಾರಿಕೆಗಳು, ತಯಾರಿಕಾ ಕ್ಷೇತ್ರಕ್ಕೆ ವಿನಾಯಿತಿ, ಐಟಿ-ಬಿಟಿ ಕಂಪನಿಗಳಿಗೆ ಶೇ.50 ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ಕೊಡುವ ಬಗ್ಗೆ ಕೇಂದ್ರ ಸರ್ಕಾರ ನೀಡಿರುವ ಸಲಹೆಗಳನ್ನು ಆಧರಿಸಿ ಸಭೆಯಲ್ಲಿ ಚಿಂತನಮಂಥನ ನಡೆಸಲಾಗುತ್ತಿದೆ.