ಬೆಂಗಳೂರು: ಕಾಂಗ್ರೆಸ್ ಸರ್ಕಾರವು 38 ಇಲಾಖೆಗಳಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸ್ತವಃ ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರದ ಕೂಪದಲ್ಲಿ ಕುಳಿತಿದ್ದಾರೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಂಗಳವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಕುಟುಂಬವು ಮುಡಾದ 14 ನಿವೇಶನ ವಾಪಸ್ ಮಾಡಿದ್ದು, ಪ್ರಿಯಾಂಕ್ ಖರ್ಗೆಯವರು 5 ಎಕರೆ ವಾಪಸ್ ಮಾಡಿದ್ದರಿಂದ ಭ್ರಷ್ಟಾಚಾರ ಸಾಬೀತಾಗಿದೆ. ಅದರ ತನಿಖೆ ಏನಿದ್ದರೂ ತೋರಿಕೆಯ ಕಸರತ್ತು ಅಷ್ಟೇ ಎಂದು ವ್ಯಂಗ್ಯವಾಡಿದರು.
ಪ್ರಧಾನಿ ಮೋದಿಯವರ ಯೋಗ್ಯತೆ. ವಯಸ್ಸು, ಅಧಿಕಾರದ ಮಟ್ಟಕ್ಕೆ ಸಿಎಂ ಸಿದ್ದರಾಮಯ್ಯ ಇದ್ದಾರೆಯೆ? ಅದನ್ನು ತಿಳಿದು ಮಾತನಾಡಬೇಕು. ಪ್ರಧಾನಿಯವರ ಬಗ್ಗೆ ಹಗುರ ಮಾತುಗಳನ್ನು ಮುಂದುವರಿಸಿದರೆ ತಕ್ಕಶಾಸ್ತಿಯಾಗಲಿದೆ ಎಂದು ಎಚ್ಚರಿಸಿದರು.
ಈಚೆಗೆ ವೈನ್ ಮರ್ಚೆಂಟ್ ಅಸೋಸಿಯೇಶನ್‍ನವರು ಒಂದು ಆಪಾದನೆ ಮಾಡಿದ್ದಾರೆ. ಸುಮಾರು 500 ಕೋಟಿಗಳಷ್ಟು ಭ್ರಷ್ಡಾಚಾರ, ಅಬಕಾರಿ ಸಚಿವರ ವಸೂಲಿ ಮಾಡಿದ್ದಾಗಿ ಅವರೇ ಹೇಳಿದ್ದಾರೆ. ಬಳಿಕ ಸುಲಿಗೆ ನಮ್ಮ ಗಮನಕ್ಕೂ ಬಂದಿದ್ದು, 700 ಕೋಟಿ ಲೂಟಿಯಾಗಿದೆ ಎಂದು ನಾವು ತಿಳಿಸಿದ್ದೆವು.
ಚುನಾವಣೆಗಾಗಿ ಅಬಕಾರಿ ಹಣ ವಸೂಲಿಯಾಗಿದೆ. ಈ ವಿಚಾರವನ್ನು ಪ್ರಧಾನಿ ಮೋದಿಯವರು ಮಹಾರಾಷ್ಟ್ರದ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ತಿಳಿಸಿದ್ದಾರೆ. ಇದಕ್ಕೆ ಪುರಾವೆ ಕೇಳುತ್ತಿರುವ ಸಿಎಂ ಸಿದ್ದರಾಮಯ್ಯ, ಮದ್ಯ ಮಾರಾಟಗಾರರ ಸಂಘದ ದೂರಿನಂತೆ ಕ್ರಮಕೈಗೊಳ್ಳಲಿ ಎಂದು ಸವಾಲು ಹಾಕಿದರು.
ವೈನ್ ಮರ್ಚೆಂಟ್‍ಗಳಿಗೆ ಆಗುವ ತೊಂದರೆಗಳನ್ನು ಮುಂದಿಟ್ಟುಕೊಂಡು 25ರಂದು ಇಡೀ ರಾಜ್ಯದಲ್ಲಿ ಅಂಗಡಿ ಮುಂಗಟ್ಟುಗಳ ಬಾಗಿಲು ಹಾಕಿ ಹೋರಾಟ ಮಾಡುವುದಾಗಿ ಘೋಷಿಸಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ಹೊಸದಾಗಿ ಲೈಸನ್ಸ್ ಪಡೆಯಲು 4.50 ಲಕ್ಷ ರೂ. ಸರಕಾರಿ ಶುಲ್ಕ ಕಟ್ಟಬೇಕಿದೆ. ಹೊಸ ಲೈಸನ್ಸ್ ಪಡೆಯಲು 70-80 ಲಕ್ಷ ಖರ್ಚಾಗುತ್ತದೆ. ಇದು ಎಲ್ಲಿ ಹೋಗುತ್ತದೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದರು.
ಒಂದು ವರ್ಷಕ್ಕೆ ಲೈಸನ್ಸ್ ನವೀಕರಿಸಲು 4.60 ಲಕ್ಷ ರೂ. ಕಟ್ಟಬೇಕು. 6 ಲಕ್ಷ ಲಂಚ ಕೊಡಬೇಕು. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಇದಾದ ನಂತರ ಏನೇ ದೂರುಗಳಿಲ್ಲದಿದ್ದರೂ ಒಂದು ಬಾರ್ ಅಂಡ್ ರೆಸ್ಟೋರೆಂಟ್ ಅಥವಾ ಒಂದು ಮದ್ಯದ ಅಂಗಡಿಯವರ ಮೇಲೆ ಇಲಾಖೆಯು 2 ಕೇಸ್ ಕಡ್ಡಾಯವಾಗಿ ಹಾಕುತ್ತದೆ. ಆಪಾದನೆ ತಪ್ಪಿಸಲು ಕೇಸ್ ಹಾಕುವುದಲ್ಲದೆ, 2 ಸಾವಿರ ರೂ. ದಂಡ, 25 ಸಾವಿರ ಲಂಚ ಕೇಳುತ್ತಾರೆ ಎಂದು ಆರೋಪಿಸಿದರು.
ಅಬಕಾರಿ ಇಲಾಖೆ ಹಗರಣವನ್ನು ಅಲ್ಲಗಳೆಯುವ ಭರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀವು ಭ್ರಷ್ಟಾಚಾರ ಸಾಬೀತು ಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದ್ದಾರೆ.
ಗುತ್ತಿಗೆದಾರರ ಸಂಘದವರು ಬಿಜೆಪಿ ಸರಕಾರ ಶೇ 40 ವಸೂಲಿ ಮಾಡುತ್ತಿದೆ ಎಂದು ಆಪಾದಿಸಿದ್ದರಲ್ಲವೇ? ಅದನ್ನು ಅವರು ಸಾಬೀತು ಪಡಿಸಿದ್ದಾರಾ? ನೀವು ಅದನ್ನು ಚುನಾವಣಾ ಮುಖ್ಯ ವಿಷಯ ಮಾಡಿಕೊಂಡಿರಲ್ಲವೇ? ಇದುವರೆಗೂ ಅದನ್ನು ಸಾಬೀತುಪಡಿಸಲು ನಿಮಗೆ ಆಗಿದೆಯೇ ಎಂದು ಸಿದ್ದರಾಮಯ್ಯಗೆ ಪ್ರಶ್ನೆಗಳನ್ನು ಕೇಳಿದರು.
ಗುತ್ತಿಗೆದಾರರ ಸಂಘ ಸತ್ಯ ಹೇಳಿದ್ದೆಂದು ತಿಳಿಸುವ ಮತ್ತು ನಂಬುವ ಮುಖ್ಯಮಂತ್ರಿಗಳು ವೈನ್ ಮರ್ಚೆಂಟ್ ಅಸೋಸಿಯೇಶನ್‍ನ ಆರೋಪವನ್ನು ಅಲ್ಲಗಳೆಯಲು ಕಾರಣ ಏನಿದೆ? ಎಂದು ಕೇಳಿದರಲ್ಲದೆ, ಸಿದ್ದರಾಮಯ್ಯನವರು ಭ್ರಷ್ಟಾಚಾರದ ಪಿತಾಮಹ ಎಂದು ಆರೋಪಿಸಿದರು. ಮಾಡುವುದನ್ನು ಮಾಡಿ ಅದನ್ನು ಮರೆಮಾಚುವ ಪರಿಪಾಠವನ್ನು ಸಿಎಂ ಅವರು ಮೈಗೂಡಿಸಿಕೊಂಡಿದ್ದಾರೆ.
ಭ್ರಷ್ಟಾಚಾರ ಮಾಡುವುದೇ ಅಬಕಾರಿ ಇಲಾಖೆ- ಸಚಿವರ ಕೆಲಸ. ಡಿ.ಸಿ.ಗಳು, ಎ.ಸಿಗಳಿಗೆ ವರ್ಗಾವಣೆಗೂ ಹಣ ನಿಗದಿಯಾಗಿದೆ ಎಂದು ದೂರಿದರು. ಮದ್ಯಪಾನ ಸಂಯಮ ಮಂಡಳಿ ಕುಡಿಯಬಾರದೆಂದು ಗಾಂಧೀಜಿ ತತ್ವಗಳನ್ನು ಮುಂದಿಟ್ಟರೆ, ಸರಕಾರ ಅಬಕಾರಿ ಇಲಾಖೆಗೆ ಹೆಚ್ಚು ಮಾರಾಟದ, ಹಣ ಸಂಗ್ರಹದ ವಿಚಾರದಲ್ಲಿ ತನ್ನ ಗುರಿ ನಿಗದಿ ಮಾಡುತ್ತದೆ ಎಂದು ಟೀಕಿಸಿದರು.
ಗ್ಯಾರಂಟಿ ಜಾರಿ ಕುರಿತು ಹೇಳಿ ಮದ್ಯದ ಬೆಲೆ ಏರಿಸುತ್ತಾರೆ. ವೈನ್ ಮಾರಾಟಗಾರರ ಸಂಘದ ಆಪಾದನೆ ಮೇಲೆ ಸಿಎಂ ಕ್ರಮ ಜರುಗಿಸಿದ್ದಾರಾ? ತಲೆಯನ್ನೇ ಕೆಡಿಸಿಕೊಂಡಿಲ್ಲ. ಈ 3 ಉಪ ಚುನಾವಣೆಗಳಲ್ಲಿ ಹೆಂಡದ ಹಣದ ಹೊಳೆ ಹರಿದಿದೆ ಎಂದು ದೂರಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಭ್ರಷ್ಟಾಚಾರ, ಹಗರಣಗಳನ್ನು ಬಯಲಿಗೆ ತರುವ ಮೂಲಕ ಆ ಕುರಿತು ಪದೇಪದೇ ಗಮನ ಸೆಳೆಯಲಾಗುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.