ನ್ಯೂಸ್

ಸಿಎಂ ಸಿದ್ದರಾಮಯ್ಯ ಪರ ಶಾಸಕರ ಒಗ್ಗಟ್ಟು

Bengaluru - Political - Shivananda Tagadur

ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಶಾಸಕರ ಒಗ್ಗಟ್ಟಾಗಿದ್ದೇವೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ರಾಜಕೀಯ ಸಲಹೆಗಾರ ಬಿ.ಆರ್.ಪಾಟೀಲ್, ಮಾಜಿ ಸಭಾಪತಿಗಳಾದ ಬಿ.ಎಲ್.ಶಂಕರ್, ವಿ.ಆರ್. ಸುದರ್ಶನ್ ಅವರು ಬಿಜೆಪಿ ಮತ್ತು ಜೆಡಿಎಸ್ ನಾಯಕರು ವಾಮ ಮಾರ್ಗದಲ್ಲಿ ಜನರು ಆಯ್ಕೆ ಮಾಡಿದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ರಾಜಕೀಯ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ದೂರಿದರು.
ಸಿಎಂ ರಾಜಕೀಯ ಸಲಹೆಗಾರ ಬಿ.ಆರ್.ಪಾಟೀಲ್ ಮಾತನಾಡಿ, ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿರುವುದು ಲ ನೀಡುವುದಿಲ್ಲ. ಸಿದ್ದರಾಮಯ್ಯ ಅವರ ಜೊತೆಗೆ ಎಲ್ಲಾ ಶಾಸಕರು ಇದ್ದೇವೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಮತ್ತು ಜೆಡಿಎಸ್‌ಗೆ ಅಧಿಕಾರ ಹಿಡಿಯಬೇಕು ಎನ್ನುವ ಹಠ ಬಂದಿದೆ. ಜನರೇ ತಿರಸ್ಕಾರ ಮಾಡಿದ್ದರೂ ಅವರಿಗೆ ಬುದ್ದಿ ಬಂದಿಲ್ಲ. ಹಿಂದೆ ಅವರು ಎರಡು ಬಾರಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ. ಅದಕ್ಕಾಗಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದರು.
ಬಿಜೆಪಿ ಪ್ರಯತ್ನಕ್ಕೆ ಯಶಸ್ಸು ಸಿಗುವುದಿಲ್ಲ. ಅದರಲ್ಲಿ ಯಶಸ್ಸು ಕಾಣುವುದಿಲ್ಲ. ಕೇಂದ್ರದಿಂದ ರಾಜ್ಯಪಾಲರಿಗೆ ನಿರ್ದೇಶನ ಬಂದಿರುವ ಕಾರಣ ಈ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಲಾಕ್ ಮೇಲರ್ ಅಬ್ರಾಹಂ:
ಸಿಎಂ ವಿರುದ್ದ ದೂರು ನೀಡಿರುವ ಅಬ್ರಾಹಂ, ನನ್ನ ಕ್ಷೇತ್ರದಲ್ಲಿ ಮಿನಿ ವಿಧಾನಸೌಧ ಕಟ್ಟುವ ಪ್ರಕರಣದಲ್ಲಿ ಕೋರ್ಟ್‌ಗೆ ಹೋಗಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ಒಂದೆ ಒಂದೆ ನಿಮಿಷ ಕೇಸ್ ನೋಡಲಿಲ್ಲ. ಎತ್ತಿ ಬೀಸಾಕಿದ್ದರು, ನಿನಗೂ ಆಳಂದಕ್ಕೂ ಏನು ಸಂಬಂಧ ಎಂದು ಕೋರ್ಟ್ ಕೇಳಿತ್ತು. ಆ ಮನುಷ್ಯನಿಗೆ ಕ್ರೆಡಿಯಬಲಿಟಿ ಇಲ್ಲ. ನನ್ನ ಕೇಸ್‌ನಲ್ಲಿ 25 ಲಕ್ಷ ರೂ ದಂಡ ಹಾಕಿಸಿಕೊಂಡಿದ್ದಾನೆ. ಆದರೂ ಬುದ್ದಿ ಬಂದಿಲ್ಲ ಎಂದರು.
ಕೆಎಎಸ್ ಅಧಿಕಾರಿ ಸುಧಾ ಅವರ ಪ್ರಕರಣದಲ್ಲಿ ಏನಾಗಿದೆ ಎಂದು ಗೊತ್ತಿದೆ. ಬ್ಲಾಕ್ ಮೇಲ್ ಮಾಡುವ ಕೆಲಸವನ್ನು ಅಬ್ರಾಹಂ ಮಾಡುತ್ತಿದ್ದಾರೆ. ಬ್ಲಾಕ್ ಮೇಲ್ ಮನುಷ್ಯ ಕೊಟ್ಟ ದೂರು ರಾಜ್ಯಪಾಲರು ಪರಿಗಣಿಸಬಾರದು ಎಂದು ಆಗ್ರಹಿಸಿದರು.
ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಕೇಸ್ ಹಾಕಿದರೆ ಹೆದರವುದಿಲ್ಲ. ಕೇಸ್ ಫೇಸ್ ಮಾಡ್ತೇವೆ. ರಾಜಕೀಯ ದುರುದ್ದೇಶ ಇಟ್ಟುಕೊಂಡು ಈ ರೀತಿ ಮಾಡಲಾಗುತ್ತಿದೆ ಎಂದು ಬಿ.ಆರ್.ಪಾಟೀಲ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ವಿ.ಎಸ್.ಉಗ್ರಪ್ಪ, ಮಾಜಿ ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ ಉಪಸ್ಥಿತರಿದ್ದರು.

*ಬೇಕಂತಲೇ ರಾಜ್ಯಪಾಲರು ಆತುರದ ನಿರ್ಧಾರ ತೆಗದುಕೊಂಡು, ಸಿಎಂ ಸಿದ್ದರಾಮಯ್ಯ ಅವರ ತೇಜೋವಧೆ ಮಾಡಲಾಗುತ್ತಿದೆ. ಬಿಜೆಪಿ ಮತ್ತು ಜೆಡಿಎಸ್‌ನವರ ಮಾತಿಗೆ ಅನುಗುಣವಾಗಿ ನಡೆಯುತ್ತಿರುವ ರಾಜ್ಯಪಾಲರ ನಡೆ ಪ್ರಜಾಪ್ರಭುತ್ವಕ್ಕೆ ಮಾರಕ.
-ವಿ.ಆರ್.ಸುದರ್ಶನ್ , ಮಾಜಿ ಸಭಾಪತಿ. ವಿಧಾನ ಪರಿಷತ್