ಬೆಂಗಳೂರು:
ಮಹರ್ಷಿ ವಾಲ್ಮೀಕಿ ಜಯಂತಿಯ ಹಿನ್ನೆಲೆಯಲ್ಲಿ ಈಗಲಾದರೂ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 40 ವರ್ಷಗಳ ರಾಜಕಾರಣದಲ್ಲಿ ನಾನು ಸತ್ಯಹರಿಶ್ಚಂದ್ರ, ಸಜ್ಜನ ರಾಜಕಾರಣಿಯಾಗಿ ಕೆಲಸ ಮಾಡಿದವ ಎಂದಿದ್ದಾರೆ. ಆದರೆ, ವಾಲ್ಮೀಕಿ ನಿಗಮದ ಹಗರಣ ಅವರಿಗೆ ಕಪ್ಪು ಚುಕ್ಕೆಯಾಗಿರುವ ಕಾರಣ ರಾಜೀನಾಮೆಯೊಂದೆ ಅದಕ್ಕೆ ಪರಿಹಾರ ದಾರಿ ಎಂದರು.
ವಾಲ್ಮೀಕಿ ನಿಗಮದ 89 ಕೋಟಿ ಅವ್ಯವಹಾರ ಆಗಿದೆ ಎಂದು ಸಿಎಂ ಒಪ್ಪಿಕೊಂಡಿದ್ದಾರೆ. ಮೊನ್ನೆ ಯಲ್ಲಮ್ಮ ತಾಯಿಯ ಗುಡಿಯಲ್ಲಿ ಅವರ ಪತ್ನಿಯ ಹೆಸರಿನಲ್ಲಿ ಪಾಪ ಪರಿಹಾರಕ್ಕೆ ಪ್ರಾರ್ಥನೆ ಮಾಡಿದ್ದಾರೆ. ಚಾಮುಂಡೇಶ್ವರಿಯ ದೇವಾಲಯದಲ್ಲಿ ಅತ್ಯಂತ ದೀನನಾಗಿ ತಾನೇ ಕೈಹಾಕಿ ಆ ಕುಂಕುಮವನ್ನು ಹಚ್ಚಿಕೊಂಡಿದ್ದನ್ನು ನೋಡಿದಾಗ ಪ್ರಾಯಶಃ ಸಿದ್ದರಾಮಯ್ಯರಿಗೆ ಜ್ಞಾನೋದಯ ಆದಂತೆ ಭಾಸವಾಗಿದೆ ಎಂದು ವಿಶ್ಲೇಷಿಸಿದರು.
ಚಾರ್ಜ್ ಶೀಟ್ ಪ್ರದರ್ಶನ ಮಾಡಿದ ಅವರು, ಇದು ಕೂಡ ಸಿದ್ದರಾಮಯ್ಯನವರಿಗೆ ಜ್ಞಾನೋದಯಕ್ಕೆ ಒಂದು ದಾಖಲೆಯಂತಿದೆ. ಒಬ್ಬ ವ್ಯಕ್ತಿ ತಪ್ಪು ಮಾಡಿದ್ದಾನೆ ಎಂಬುದನ್ನು ನ್ಯಾಯಾಂಗದ ತೀರ್ಪಿನ ಮುಖಾಂತರ ಬೈಲ್ ಅಪ್ಲಿಕೇಶನ್ ಆರ್ಡರ್‌ನಲ್ಲಿ ತೋರಿಸಿಕೊಟ್ಟಿದ್ದಾರೆ. ವಾಲ್ಮೀಕಿ ಜಯಂತಿ ದಿನ ನಿಮ್ಮ ರಾಜೀನಾಮೆಗೆ ಸೂಕ್ತ ದಿನ. ಈಗಿಂದಲೇ ಒಂದು ಹೊಸ ಅಧ್ಯಾಯವನ್ನು ಪ್ರಾರಂಭಿಸಿ ಎಂದು ಒತ್ತಾಯಿಸಿದರು.
ಇ.ಡಿ. ಚಾರ್ಜ್ ಶೀಟಿನಲ್ಲಿ ಮಾಜಿ ಸಚಿವ ನಾಗೇಂದ್ರ ಅವರಿಂದ ಕಾರು ಖರೀದಿ, ಕುಟುಂಬದ ವಿಮಾನ ಪ್ರಯಾಣದ ಟಿಕೆಟ್, ಪೆಟ್ರೋಲ್- ಡೀಸೆಲ್ ಖರೀದಿ, ಮನೆ ವಿದ್ಯುತ್ ಶುಲ್ಕ, ಮನೆ ಕೆಲಸದವರ ವೇತನ ಪಾವತಿಸಿದ್ದನ್ನು ಉಲ್ಲೇಖಿಸಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಮತ್ತು ರಾಯಚೂರು ಲೋಕಸಭಾ ಚುನಾವಣೆಗೆ ನಿಗಮದ ಹಣ ಬಳಕೆ ಆಗಿರುವುದು ಜಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ. ಬಳ್ಳಾರಿ ಚುನಾವಣೆಗೋಸ್ಕರ ಮೂವರು ಶಾಸಕರ ಮೂಲಕ 14.80 ಕೋಟಿ ರೂ. ಹಣ ಬಳಕೆ ಮಾಡಲಾಗಿದೆ ಎಂದರು.
ಬಳ್ಳಾರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಭರತ್ ರೆಡ್ಡಿ, ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಗಣೇಶ್, ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀನಿವಾಸ್ ಅವರ ಮೂಲಕ ಸುಮಾರು 15 ಕೋಟಿ ವಿತರಣೆ ಮಾಡಲಾಗಿದೆ ಎಂದರು.
ಸಿಎಂಗೆ ಈಗ ಕಂಬಳಿ ಗುದ್ದು..
ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡದಿದ್ದರೆ ಕಷ್ಟ ಎಂಬ ಸ್ಥಿತಿ ರಾಜ್ಯದಲ್ಲಿದೆ. ದಿನನಿತ್ಯ ಜನರು, ರಾಜ್ಯಪಾಲರಲ್ಲಿಗೆ ಹೊಸ ದೂರಿನೊಂದಿಗೆ ಹೋಗುತ್ತಿದ್ದಾರೆ. ಸಿದ್ಧಾರ್ಥ ವಿಹಾರ ಟ್ರಸ್ಟ್ ಬಗ್ಗೆ, ವಕ್ಫ ಬೋರ್ಡ ಹಗರಣದ ಕುರಿತು, ಅರ್ಕಾವತಿ ವಿಚಾರದಲ್ಲಿ ಅವರು ಮಾಡಿದ ಕರ್ಮಕಾಂಡವನ್ನು ಹೊರಕ್ಕೆ ತರುವ ಪ್ರಯತ್ನ ಮಾಡುವುದಾಗಿ ತಿಳಿಸುತ್ತಿದ್ದಾರೆ. ಸಿದ್ದರಾಮಯ್ಯನವರು ರಾಜೀನಾಮೆ ನೀಡಿದರೆ ಇದರಿಂದ ಹೊರಕ್ಕೆ ಬರಬಹುದು ಎಂದರು.
ಹಳ್ಳಿಯಲ್ಲಿ ಒಂದು ಗಾದೆ ಇದೆ. ಕಂಬಳಿ ಗುದ್ದು ಹಾಕುವುದು ಎಂದು. ತಪ್ಪು ಮಾಡಿದ ವ್ಯಕ್ತಿಗೆ ಒಬ್ಬ ಕಂಬಳಿ ಹಾಕಿ ಮುಚ್ಚುತ್ತಾನೆ. ಪಕ್ಕದಲ್ಲಿರುವ ಎಲ್ಲರೂ ಬಂದು ಯಾರಿಗೂ ಗೊತ್ತಾಗದಂತೆ ಗುದ್ದು ಹಾಕುತ್ತಾರೆ. ಅದೇ ರೀತಿ ಸಿಎಂಗೆ ಕಂಬಳಿ ಗುದ್ದು ಬೀಳಲು ಆರಂಭವಾಗಿದೆ ಎಂದರು.
ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, ರಾಜ್ಯ ವಕ್ತಾರರಾದ ಡಾ. ನರೇಂದ್ರ ರಂಗಪ್ಪ, ಪ್ರಕಾಶ್ ಶೇಷರಾಘವಾಚಾರ್, ಹೆಚ್. ವೆಂಕಟೇಶ್ ದೊಡ್ಡೇರಿ ಸುದ್ದಿಗೋಷ್ಠಿಯಲ್ಲಿದ್ದರು.