ನ್ಯೂಸ್

ಬಂಡವಾಳ ವೆಚ್ಚ 54,374 ಕೋಟಿ; ಫೆಬ್ರವರಿ ಒಳಗೆ ಖರ್ಚು ಮಾಡಲು ಸಿಎಂ ಸೂಚನೆ

ಬೆಂಗಳೂರು: ಆಯವ್ಯಯದಲ್ಲಿ ಬಂಡವಾಳ ಮೇಲಣ ವೆಚ್ಚಕ್ಕಾಗಿ 54,374 ಕೋಟಿ ರೂ. ಹಂಚಿಕೆಯಾಗಿದ್ದು, ಈ ಅನುದಾನವನ್ನು ಫೆಬ್ರವರಿ ಒಳಗೆ ಖರ್ಚು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಲೋಕೋಪಯೋಗಿ, ಜಲಸಂಪನ್ಮೂಲ, ಆರೋಗ್ಯ, ವೈದ್ಯಕೀಯ ಶಿಕ್ಷಣೆ, ಯೋಜನೆ(ಕಲ್ಯಾಣ ಕರ್ನಾಟಕ ಪ್ರದೇಶಾಭಿವೃಧಿ ಮಂಡಳಿ), ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಸಣ್ಣ ನೀರಾವರಿ ಸಮಾಜ ಕಲ್ಯಾಣ ಇಲಾಖೆಗಳ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

ಕಳೆದ ವರ್ಷದ ಆಯವ್ಯಯದಲ್ಲಿ ಬಂಡವಾಳ ಮೇಲಣ ವೆಚ್ಚಕ್ಕೆ 46,955 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಪ್ರಸಕ್ತ ವರ್ಷದಲ್ಲಿ 54,374 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ಇದು ಸರ್ಕಾರದ ಆಸ್ತಿ ಸೃಜನೆಗೂ ಪೂರಕವಾಗಿರುವುದರಿಂದ ಈ ಅನುದಾನ ಸದ್ಬಳಕೆಯಾಗುವುದನ್ನು ಖಾತರಿಪಡಿಸಿಕೊಳ್ಳುವಂತೆ ತಾಕೀತು ಮಾಡಿದರು.

ಚುನಾವಣೆ ಹಾಗೂ ಆಯವ್ಯಯ ಅನುಮೋದನೆ ವಿಳಂಬವಾದ ಕಾರಣ ಒಟ್ಟಾರೆ ಪ್ರಗತಿಯಲ್ಲಿ ಹಿನ್ನಡೆಯಾಗಿದೆ. ಆದರೆ ಶೀಘ್ರವೇ ನಿಗದಿತ ಗುರಿಯಂತೆ ವೆಚ್ಚ ಮಾಡಬೇಕೆಂದು ನಿರ್ದೇಶನ ನೀಡಿದರು.

ಕೆಕೆಆರ್‌ಡಿಬಿಗೆ 3000 ಕೋಟಿ ಹಂಚಿಕೆ

ಗ್ರಾಮೀಣ ರಸ್ತೆಗಳ ಯೋಜನೆಯಡಿ ಹೆಚ್ಚಿನ ಪ್ರಗತಿ ಸಾಧಿಸಲು ಸೂಚಿಸಿದ ಮುಖ್ಯಮಂತ್ರಿಗಳು, ಕೆ.ಕೆ.ಆರ್.ಡಿ.ಬಿ ಅಡಿ ಕಳೆದ ವರ್ಷದ 2,000 ಕೋಟಿ ರೂ. ಗಳಿಗೂ ಹೆಚ್ಚು ಅನುದಾನ ಲಭ್ಯವಿದ್ದು, ಪ್ರಸಕ್ತ ಸಾಲಿನಲ್ಲಿ 3,000 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಆದ್ದರಿಂದ ಶೀಘ್ರವೇ ಕ್ರಿಯಾ ಯೋಜನೆ ಅನುಮೋದನೆ ಪಡೆದು ಕಾಮಗಾರಿ ಅನುಷ್ಠಾನಗೊಳಿಸುವಂತೆ ತಿಳಿಸಿದರು.

ಪ್ರಾರಂಭವಾಗದ ಕಾಮಗಾರಿ ಕೈಬಿಡಿ

ಜಲ ಸಂಪನ್ಮೂಲ ಇಲಾಖೆಯಲ್ಲಿ 1 ಲಕ್ಷ ಕೋಟಿ ರೂ. ಗಳಿಗೂ ಹೆಚ್ಚು ಮೊತ್ತದ ಅನುಮೋದಿತ ಕಾಮಗಾರಿಗಳ ಪೈಕಿ ಸುಮಾರು 12,000 ಕೋಟಿ ಅಂದಾಜು ವೆಚ್ಚದ ಕಾಮಗಾರಿಗಳು ಪ್ರಾರಂಭವಾಗಿಲ್ಲ. ಇವುಗಳನ್ನು ಪರಿಶೀಲಿಸಿ, ಕೈಬಿಡುವ ಕುರಿತು ನೀರಾವರಿ ನಿಗಮಗಳ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಲು ಹೇಳಿದರು.

ಕೆಎಸ್‌ಎಂಎಸ್‌ಸಿಎಲ್ 1400 ಕೋಟಿ

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಲ್ಲಿ 1400 ಕೋಟಿ ಲಭ್ಯವಿದೆ. ಅಗತ್ಯ ಔಷಧ ಮತ್ತು ಉಪಕರಣಗಳ ಖರೀದಿಗೆ ಬಳಕೆ ಮಾಡಿಕೊಳ್ಳಲು ಸೂಚಿಸಲಾಯಿತು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣದ ಮಾದರಿಯನ್ನು ಇಂಡಿಯನ್ ಪಬ್ಲಿಕ್ ಹೆಲ್ತ್ ಸ್ಟಾಂಡರ್ಡ್ ಗಳ ಅನ್ವಯ ನಿಗದಿ ಪಡಿಸುವ ಕುರಿತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಆರೋಗ್ಯ ಇಲಾಖೆ ಸಭೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ನಿರ್ದೇಶನ ನೀಡಿದರು.