ಹೊನ್ನಾಳಿ: ದಾವಣಗೆರೆ ನಗರದಲ್ಲಿ ಜನವರಿ 5 ರಂದು ಕನಕದಾಸರ 537ನೇ ಜಯಂತ್ಯುತ್ಸವದ ಹಿನ್ನೆಲೆಯಲ್ಲಿ ಕನಕದಾಸರ ಪುತ್ಥಳಿಯನ್ನು ಅನಾವರಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದಾರೆ ಎಂದು ದಾವಣಗೆರೆ ಕುರುಬ ಸಮಾಜದ ಮುಖಂಡ ಆಲೇಕಲ್ ಎಸ್.ಟಿ. ಅರವಿಂದ್ ಹೇಳಿದರು.
ಪಟ್ಟಣದಲ್ಲಿ ಗುರುವಾರ ಪುತ್ಥಳಿ ಅನಾವರಣ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಹಲವು ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಜಿಲ್ಲೆಯ ಎಲ್ಲ ಶಾಸಕರು, ಅಹಿಂದ ಸಮುದಾಯಗಳ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲೆಯ ಎಲ್ಲ ತಾಲೂಕಿನ ಕುರುಬ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಹೊನ್ನಾಳಿ ತಾಲೂಕು ಕುರುಬ ಸಮಾಜದ ಅಧ್ಯಕ್ಷ ಎಂ.ಎಸ್. ಪಾಲಾಕ್ಷಪ್ಪ ಮಾತನಾಡಿ, ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನಿಂದ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹೊರಡುವಂತೆ ತಾಲೂಕಿನಲ್ಲಿ ಪ್ರವಾಸ ಮಾಡಿ ಸಾರ್ವಜನಿಕರಿಗೆ ಮನವಿ ಮಾಡಲಾಗುವುದು ಎಂದರು.
ಅಹಿಂದ ಮುಖಂಡ ಬಿ. ಸಿದ್ದಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಾರೆ ಎಂದರೆ ಲಕ್ಷಾಂತರ ಜನ ಆಗಮಿಸುತ್ತಾರೆ. ಆ ನಿಟ್ಟಿನಲ್ಲಿ ನಾವು ಸಹ ಹೆಚ್ಚಿನ ಸಂಖ್ಯೆಯಲ್ಲಿ ಹೊರಡೋಣ ಎಂದರು.
ಜಿಲ್ಲಾ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮಕ್ಕೆ 1 ಲಕ್ಷ ಜನರನ್ನು ಸೇರಿಸುವ ಗುರಿಯನ್ನು ಆಯೋಜಕರು ಇಟ್ಟುಕೊಂಡಿದ್ದು, ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ದಾವಣಗೆರೆಯ ಇಟ್ಟಿಗುಡಿ ಮಂಜುನಾಥ್ ಹೇಳಿದರು. ಇದಕ್ಕಾಗಿ ದಾವಣಗೆರೆಯಲ್ಲಿ ಜನವರಿ 4 ರಂದು ಬೆಳಗ್ಗೆ 9.30 ಕ್ಕೆ ದಾವಣಗೆರೆ ಎಸ್ಎಸ್ ಹೈಟೆಕ್ ಆಸ್ಪತ್ರೆಯ ಸಮೀಪ ಕಾಳಿದಾಸ ವೃತ್ತದಿಂದ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಬೆಳಗ್ಗೆ 11 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಮಹಾನಗರ ಪಾಲಿಕೆಯ ಸದಸ್ಯ ಜೆ.ಎನ್. ಶ್ರೀನಿವಾಸ್, ಮುಖಂಡರಾದ ಶಿವಣ್ಣ ಮಾಸ್ಟರ್, ರಾಜು ಮೌರ್ಯ, ಲಿಂಗರಾಜ್, ಪ್ರಕಾಶ್, ಬೀರೇಶ್, ಗುಡದಪ್ಪ, ವಿನಯ್ಕುಮಾರ್, ಹೊನ್ನಾಳಿಯ ಎಚ್.ಬಿ. ಶಿವಯೋಗಿ, ಎಚ್.ಎ. ಉಮಾಪತಿ, ಪುರಸಭೆ ಸದಸ್ಯರಾದ ಎಂ. ಸುರೇಶ್, ಬಾಬು ಹೋಬಳದಾರ್, ಗಾಳಿ ನಾಗರಾಜ್, ರಂಜಿತ್ ಸೇರಿ ಅನೇಕ ಮುಖಂಡರು ಹಾಜರಿದ್ದರು.