ನ್ಯೂಸ್

ರಾಜ್ಯ ಬಜೆಟ್​ 2025-26| ರಾಹುಕಾಲ ಆರಂಭಕ್ಕೂ ಮುನ್ನ ಬಜೆಟ್ ಮಂಡಿಸಲಿರುವ ಸಿಎಂ; ಗರಿಗೆದರಿದ ನಿರೀಕ್ಷೆ, ಹೀಗಿದೆ ಲೆಕ್ಕಾಚಾರ

Webdesk - Manjunatha B

ಬೆಂಗಳೂರು: 2025-26ನೇ ಸಾಲಿನ ಆಯವ್ಯಯವನ್ನು (Budget) ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಮಾರ್ಚ್ 07) ಮಂಡಿಸಲಿದ್ದು, ಹೊಸ ದಾಖಲೆ ಬರೆಯಲಿದ್ದಾರೆ. ರಾಜ್ಯದ ಇತಿಹಾಸದಲ್ಲಿ ದಾಖಲೆಯ 16ನೇ ಬಜೆಟ್​ಅನ್ನು ಸಿಎಂ ಸಿದ್ದರಾಮಯ್ಯ ಮಂಡಿಸಲಿದ್ದು, ಜನಸಾಮಾನ್ಯರ ನಿರೀಕ್ಷೆ ಗರಿಗೆದರಿದೆ.

ಈ ಬಾರಿಯ ಬಜೆಟ್​ಅನ್ನು 10:15ಕ್ಕೆ ಮುಖ್ಯಮಂತ್ರಿಗಳು ಮಂಡಿಸಲಿದ್ದು, ಸಮಯ ಕೂಡ ಗಮನ ಸೆಳೆಯುತ್ತಿದೆ. ರಾಹುಕಾಲ ಆರಂಭವಾಗುವ ಮುಂಚೆಯೇ ಸಿಎಂ ಬಜೆಟ್ ಭಾಷಣ ಆರಂಭಿಸಲಿದ್ದು, ಈ ವಿಚಾರ ಎಲ್ಲರ ಗಮನ ಸೆಳೆಯುತ್ತಿದೆ. 10:30ಕ್ಕೆ ರಾಹುಕಾಲ ಆರಂಭವಾಗಲಿದ್ದು, 10:15ಕ್ಕೆ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ.

ಕಳೆದ ಬಾರಿ 3.71 ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸಲಾಗಿತ್ತು. ಈ ಬಾರಿ ಬಜೆಟ್ ಗಾತ್ರ ಹೆಚ್ಚಾಗಲಿದೆ ಎಂದು ಹೇಳಲಾಗಿದ್ದು, 4 ಲಕ್ಷ ಕೋಟಿ ರೂಪಾಯಿ ದಾಟಬಹುದು ಎಂದು ಅಂದಾಜಿಸಲಾಗಿದೆ. ಈ ಬಾರಿಯ ಬಜೆಟ್​ನಲ್ಲಿ ಗ್ಯಾರಂಟಿ ಯೋಜನೆ, ಮೆಟ್ರೋ, ವೈದ್ಯಕೀಯ ಕಾಲೇಜು, ಕೈಗಾರಿಕೆ, ಹೋಟೆಲ್​ ಉದ್ಯಮ, ಉನ್ನತ ಶಿಕ್ಷಣ ಇಲಾಖೆ, ಹೈಟೆಕ್​ ರಸ್ತೆಗಳ ಅಭಿವೃದ್ಧಿಗೆ ಬಜೆಟ್​ನಲ್ಲಿ ಭರಪೂರ ಅನುದಾನ ಘೋಷಣೆಯಾಗುವ ಸಾಧ್ಯತೆಯಿದೆ.

ಗ್ಯಾರಂಟಿ ಭವಿಷ್ಯ ನಿರ್ಧಾರ: ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಕ್ಕೆ ತೊಂದರೆಯಾಗಿದೆ ಎಂಬ ಚರ್ಚೆ ಜನಜನಿತ. ಕಾಂಗ್ರೆಸ್ ಶಾಸಕರೂ ಸಮಯ ಸಿಕ್ಕಾಗಲೆಲ್ಲ ಈ ಅಭಿಪ್ರಾಯವನ್ನು ಮುಕ್ತವಾಗಿ ಹೊರಹಾಕಿದ್ದಾರೆ. ಆದರೆ, ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೊಂಡೇ ಬಂದಿದ್ದಾರೆ. ಈ ಕಾರಣಕ್ಕೆ 2025-26ನೇ ಸಾಲಿನ ಬಜೆಟ್​ನಲ್ಲಿ ಗ್ಯಾರಂಟಿಗಳಿಗೆ ಎಷ್ಟು ಹಣ ಮೀಸಲಿಡುತ್ತಾರೆಂಬ ಕುತೂಹಲವಿದೆ. ಲಭ್ಯ ಮಾಹಿತಿ ಪ್ರಕಾರ ಗ್ಯಾರಂಟಿ ಯೋಜನೆಗಳ ವಿಸ್ತಾರಕ್ಕೆ ಅವಕಾಶ ಕೊಡದೇ ಪ್ರಸಕ್ತ ಆರ್ಥಿಕ ಸಾಲಿನ ಪ್ರಮಾಣದಲ್ಲೇ ಮುಂದುವರಿಸಲು ತೀರ್ವನಿಸಲಾಗಿದೆ.

ಬಜೆಟ್ ಘೋಷಣೆ ಸಾಧ್ಯತೆ

  • ಗ್ಯಾರಂಟಿಗಳಿಗೆ 53 ಸಾವಿರ ಕೋಟಿ ರೂ. ಅನುದಾನ ಕ್ಯಾಪ್, ಅಲೆಮಾರಿ ಕುರಿಗಾಹಿಗಳ ರಕ್ಷಣೆಗಾಗಿ ಕಾನೂನು
  • ಬೆಂಗಳೂರು ಮೆಟ್ರೋಗೆ ಡಬಲ್ ಡೆಕ್ಕರ್ ಮೆಲ್ಸೇತುವೆ, ಗಿಗ್ ವರ್ಕರ್​ಗಳಿಗೆ ಅನುಕೂಲತೆಗೆ ಕಾನೂನು ಚಾವಡಿ
  • ವೈದ್ಯಕೀಯ ಕಾಲೇಜು ಇಲ್ಲದ ಜಿಲ್ಲೆಗೆ ಹೊಸ ಕೊಡುಗೆ, ಹಿಂದುಳಿದ ವರ್ಗದ ಮಕ್ಕಳಿಗೆ ಯುಪಿಎಸ್ಸಿ ತಯಾರಿಗೆ ಆಶ್ರಯ
  • ಮಾನವ- ವನ್ಯಜೀವಿ ಸಂಘರ್ಷ ತಡೆಗೆ ದೀರ್ಘಾವಧಿ ಕಾರ್ಯಕ್ರಮ, ಮತ್ತಷ್ಟು ಕರ್ನಾಟಕ ಪಬ್ಲಿಕ್ ಶಾಲೆ ಘೋಷಣೆ ಮೂಲಕ ಬಲ
  • ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳಿಗೆ ವಿಶೇಷ ಅನುದಾನ, ಪ್ರವಾಸೋದ್ಯಮಕ್ಕೆ ಪಿಪಿಪಿ ಮಾದರಿ ಮೂಲಸೌಕರ್ಯಕ್ಕೆ ಒತ್ತು