ನ್ಯೂಸ್

ಭ್ರಮಾಲೋಕದಲ್ಲಿ ಸಿಎಂ ಸಿದ್ದರಾಮಯ್ಯ ವಿಹಾರ: ಬಿ.ವೈ.ವಿಜಯೇಂದ್ರ ಕಟೋಕ್ತಿ | White paper release demand

ಬೆಂಗಳೂರು: ಕರ್ನಾಟಕ ಹಿಂದೆಂದೂ ಕಾಣದ ಕೆಟ್ಟ ಪರಿಸ್ಥಿತಿಗೆ ತಲುಪಿದೆ. ಪ್ರತಿಪಕ್ಷವೆಂಬ ಕಾರಣಕ್ಕೆ ಈ ರೀತಿ ಹೇಳುತ್ತಿದ್ದಾರೆ ಎಂದು ಪತ್ರಕರ್ತರಿಗೆ ಅನ್ನಿಸಬಹುದು. ಆದರೆ ಈ ಆರೋಪಕ್ಕೆ ನನ್ನ ಬಳಿ ಪುರಾವೆಯಿದೆ. ವಿವಿಧ ಇಲಾಖೆಗಳಿಂದ ಒಟ್ಟು ಆರು ಸಾವಿರ ಕೋಟಿ ರೂ ವಿದ್ಯುತ್ ಬಿಲ್ ಬಾಕಿಯಿದೆ. ಸಂಬಂಧಿಸಿದ ಸಚಿವರೊಂದಿಗೆ ಬಿಲ್ ಪಾವತಿ ಬಗ್ಗೆ ಚರ್ಚಿಸಿರುವೆ ಎಂದು ಸ್ವತಃ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ಮಾಡಿದರು.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1.90 ಲಕ್ಷ ಕೋಟಿ ಸಾಲ ಎತ್ತುವಳಿ ಮಾಡಿದೆ. ಆದರೆ ರಾಜ್ಯದ ಜನರು ಸುಭಿಕ್ಷ, ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದೆ ಎಂಬ ಭ್ರಮಾಲೋಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ ಎಂದು ಕಟೋಕ್ತಿಯಾಡಿದರು.

ಮುದ್ರಾಂಕ, ವಾಹನಗಳ ನೋಂದಣಿ ಶುಲ್ಕ, ಡೀಸೆಲ್, ಪೆಟ್ರೋಲ್, ವಿದ್ಯುತ್, ಹಾಲು, ಮೆಟ್ರೋ ದರ ಹೆಚ್ಚಳ ಮಾಡಲಾಗಿದೆ. ಆದರೂ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಐದಾರು ತಿಂಗಳಿಂದ ಹಣ ತಲುಪಿಲ್ಲ. ಶಾಸಕರ ಕ್ಷೇತ್ರದ ಅಭಿವೃದ್ದಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಕೇಂದ್ರ ಸರ್ಕಾರ ಕೆಜಿಗೆ 22.50 ರೂ.ನಂತೆ ಕೊಡಲು ಸಿದ್ಧವಿದ್ದರೂ ಹಣವಿಲ್ಲದ ಕಾರಣಕ್ಕೆ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಟೀಕಿಸಿದರು.

ಶ್ವೇತಪತ್ರ ಜನರ ಮುಂದಿಡಿ

ಸಿಎಂ ಸಿದ್ದರಾಮಯ್ಯ ಆಲ್ ಈಸ್ ವೆಲ್ ಎಂಬ ನಾಟಕ ಬಿಟ್ಟು ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರವನ್ನು ಜನರ ಮುಂದಿಡಬೇಕು. ಶುಲ್ಕ, ತೆರಿಗೆಗಳ ಏರಿಕೆ, ಸಾಲ ಎತ್ತುವಳಿ ಮಾಡಿದ್ದರೂ ಅನೇಕ ಸಮಸ್ಯೆಗಳಿವೆ ಕಾಡುತ್ತಿವೆ. ಹಾಗಿದ್ದರೆ ಸಂಗ್ರಹಿಸಿದ ಆರ್ಥಿಕ ಸಂಪನ್ಮೂಲ, ಎತ್ಥಿದ ಸಾಲ ದುರ್ಬಳಕೆಯಾಗುತ್ತಿದೆಯೆ ? ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಶ್ವೇತಪತ್ರ ಹೊರಡಿಸಿ ಹಣಕಾಸಿನ ಪರಿಸ್ಥಿತಿ‌ ಬಗ್ಗೆ ಸತ್ಯಾಂಶ ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕಳೆದ ಎರಡು ವರ್ಷಗಳಿಂದ ಕೇಂದ್ರದೆಡೆಗೆ ಬೊಟ್ಟು ಮಾಡುತ್ತಿದೆ. ಮೆಟ್ರೋ ದರ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣವೆಂದು ಸಿಎಂ, ಸಚಿವರು ಮತ್ತೆ ಸುಳ್ಳು ಹೇಳುತ್ತಿದ್ದಾರೆ. ಬಿಎಂಆರ್ ಸಿಎಲ್ ಸ್ವಾಯತ್ತ ಸಂಸ್ಥೆ, ಆಡಳಿತ ಮಂಡಳಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಅಧಿಕಾರಿಗಳಿರುತ್ತಾರೆ. ಬೆಲೆ ಹೆಚ್ಚಳಕ್ಕೆ ಸಮಿತಿ ಶಿಫಾರಸು ಮಾಡಿತ್ತು. ಆದರೆ ಆಡಳಿತ ಮಂಡಳಿ ಮೇಲೆ ರಾಜ್ಯ ಸರ್ಕಾರದ ಒತ್ತಡ ಹೇರಿ ಬೆಲೆ ಹೆಚ್ಚಳ ಮಾಡಿಸಿದೆ ಎಂದು ಪ್ರತ್ಯಾರೋಪಿಸಿದರು.

ಕೇಂದ್ರ ಸರ್ಕಾರವೇ ಹೊಣೆಯಾಗಿದ್ದರೆ ಮೆಟ್ರೋ ಜಾಲವಿರುವ ಚೆನ್ನೈ, ಕೋಲ್ಕತ್ತಾ ಹಾಗೂ ದೆಹಲಿಯಲ್ಲಿ ಮೆಟ್ರೋ ದರ ಹೆಚ್ಚಿಸಿಲ್ಲವೇಕೆ ?. ತನ್ನ ಹಣಕಾಸಿನ ದುಃಸ್ಥಿತಿ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಆಪಾದಿಸುತ್ತಿದೆ ಎಂದು ತಿರುಗೇಟು ನೀಡಿದರು.

ರಾಜ್ಯದ ಜನರು ಭಿಕ್ಷುಕರೆ ?

 ಐದು ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ವಿರೋಧ ಮಾಡುತ್ತಿಲ್ಲ. ಆದರೆ ಜನರು ಕೇಳದಿದ್ದರೂ ವಿಧಾನಸಭೆ ಚುನಾವಣೆ ಕಾಲಕ್ಕೆ ಐದು ಗ್ಯಾರಂಟಿಗಳನ್ನು ಘೋಷಿಸಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದೆ. ಪ್ರತಿ ತಿಂಗಳು ಪಾವತಿ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿ, ನುಡಿದಂತೆ ನಡೆದಿದ್ದೇವೆ ಎಂದು ರಾಜ್ಯ ಸರ್ಕಾರ ದೊಡ್ಡದಾಗಿ ಹೇಳಿಕೊಳ್ಳುತ್ತಿದೆ.

ಆದರೆ ಐದಾರು ತಿಂಗಳಿಂದ ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗಳ ಹಣ ಐದಾರು ತಿಂಗಳಿಂದ ಫಲಾನುಭವಿ ಖಾತೆಗೆ ಜಮೆಯಾಗಿಲ್ಲ. ಪ್ರತಿ ತಿಂಗಳು ಜಮಾ ಮಾಡಲು ಅದೇನು ಸಂಬಳವೆ ? ಎಂದು ಸಚಿವ ಕೆ.ಜೆ.ಜಾರ್ಜ್ ಕೇಳಿದ್ದಾರೆ. ರಾಜ್ಯದ ಜನರು ಭಿಕ್ಷುಕರು ಎಂದು ಸರ್ಕಾರ ಭಾವಿಸಿದೆಯೆ ? ಪ್ರತಿ ತಿಂಗಳು ಪಾವತಿ ಮಾಡುತ್ತೇವೆ ಎಂದು ಆಶ್ವಾಸನೆ ಕೊಟ್ಟವರು ಯಾರು ? ಎಂದು ಕಿಡಿಕಾರಿದರು.

ಲೋಕಸಭೆ, ವಿಧಾನಸಭೆ ಉಪ ಚುನಾವಣೆ ಬಂದಾಗ ಮತದಾನಕ್ಕೆ ಎರಡು ಮೂರು ದಿನ ಮುಂಚೆ ಒಂದೆರಡು ತಿಂಗಳ ಹಣ ಜಮಾ ಮಾಡಲಾಗುತ್ತದೆ. ಮುಂದೆ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಘೋಷಣೆಯಾದ ನಂತರ ಮತ್ತೆ ಒಂದೆರಡು ದಿನಗಳಿರುವಾಗ ಬಾಕಿ ಹಣ ಜಮಾ ಮಾಡಬಹುದು.

ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗಿಲ್ಲ. ಸುರಂಗ ಮಾರ್ಗ, ಫ್ಲೈ ಓವರ್ ಗಳ ಬಗ್ಗೆ ಸರ್ಕಾರ ಮಾತನಾಡುತ್ತಿದೆ. ಅಭಿವೃದ್ಧಿ, ಜನರ ಬೇಡಿಕೆಗೆ ಸ್ಪಂದಿಸಲು ವಿಫಲವಾಗಿದೆ. ಎಸ್ ಸಿಪಿ, ಟಿಎಸ್ ಪಿಯ 25 ಸಾವಿರ ಕೋಟಿ ರೂ.ಗಳನ್ನು ದುರ್ಬಳಕೆ ಮಾಡಿಕೊಂಡು, ಗುತ್ತಿಗೆ ಮೀಸಲು ಮೊತ್ತ ಎರಡು ಕೋಟಿ ರೂ ನೀಡುವುದಾಗಿ ಸಿಎಂ ಹೇಳಿದ್ದು, ದಲಿತರ ದಾರಿ ತಪ್ಪಿಸುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಬಿ.ವೈ.ವಿಜಯೇಂದ್ರ ದೂಷಿಸಿದರು.