ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ ಸಾಹಿತಿಗಳ ಮನವಿ ಹಿನ್ನೆಲೆ ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾಗಿದ್ದು ಕ್ರಮ ಕೈಗೊಳ್ಳಲಿದೆ ಎನ್ನಲಾಗಿದೆ.
ಬಿಜೆಪಿ ಅಧಿಕಾರದಲ್ಲಿದ್ದಾಗ ಪಠ್ಯಕ್ರಮ ಪರಿಷ್ಕರಣೆ ಮಾಡಿತ್ತು. ಈ ಸಂದರ್ಭ, ವಿವಾದ ಭುಗಿಲೆದ್ದಿತ್ತು. ಪ್ರೊ| ಬರಗೂರು ರಾಮಚಂದ್ರಪ್ಪ ಮತ್ತು ಶಿಕ್ಷಣ ತಜ್ಞ ನಿರಂಜನಾರಾಧ್ಯ ಅವರ ಜತೆ ಈ ಬಗ್ಗೆ ಚರ್ಚೆ ಸಿಎಂ ಸಿದ್ದರಾಮಯ್ಯ ನಡೆಸಿದ್ದು ಬಿಜೆಪಿ ಅವಧಿಯಲ್ಲಿ ನಿರ್ಧಾರ ಆಗಿದ್ದ ಪಠ್ಯಪುಸ್ತಕದ ಕೆಲ ಪಾಠಗಳನ್ನ ತೆಗೆದುಹಾಕುವ ಬಗ್ಗೆ ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.
ಈ ಕುರಿತಾಗಿ ಮುಖ್ಯಮಂತ್ರಿ ಶಿಕ್ಷಣ ಇಲಾಖೆಗೆ ವಿವಾದಾತ್ಮಕ ಪಠ್ಯವನ್ನು ಪಟ್ಟಿ ಮಾಡುವಂತೆ ಸೂಚನೆ ನೀಡಿದ್ದಾರೆ. ಬಿಜೆಪಿ ಸರ್ಕಾರದ ಪಠ್ಯಪುಸ್ತಕವನ್ನ ಏಕಾಏಕಿ ರದ್ದು ಮಾಡದೆ, ಹಂತ ಹಂತವಾಗಿ ಪಠ್ಯ ಪುಸ್ತಕ ಪರಿಷ್ಕರಣೆಗೆ ಮಾಡಲು ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಈಗಿನ ಪುಸ್ತಕದಲ್ಲಿ ವಿವಾದಕ್ಕೆ ಕಾರಣವಾಗಿದೆ ಎಂದು ನಂಬಲಾಗಿರುವ ಪಾಠಗಳನ್ನ ತೆಗೆದುಹಾಕಲಾಗುತ್ತದೆ ಎನ್ನಲಾಗಿದೆ.ಚಕ್ರವರ್ತಿ ಸೂಲಿಬೆಲಿ ಪಾಠಗಳನ್ನು ಕೈ ಬಿಟ್ಟು ಪರ್ಯಾಯವಾಗಿ ಇತರೆ ಪಠ್ಯ ಅಳವಡಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದ್ದು ದೇವನೂರು ಮಹಾದೇವ ಅವರ ಎದೆಗೆ ಬಿದ್ದ ಅಕ್ಷರ, ಸಾರಾ ಅಬೂಬಕ್ಕರ್ ಅವರ ಯುದ್ಧ, ನಾರಾಯಾಣಗುರು, ಕುವೆಂಪು, ಬುದ್ದ, ಬಸವ, ಅಂಬೇಡ್ಕರ್, ಭಗತ್ ಸಿಂಗ್, ಹಾಗೂ ನಾಡಿಗೆ ಒಳಿತು ಮಾಡಿದ ಸೌರ್ಹಾದತೆ ಎತ್ತಿ ಹಿಡಿದ ಪಾಠಗಳನ್ನು ಸೇರಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ.
ಕೆಲ ಪಾಠಗಳನ್ನ ಕೈಬಿಟ್ಟು ಹೊಸದು ಸೇರ್ಪಡೆ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ನಿರ್ಣಯ ಕೈಗೊಳ್ಳಲಾಗುವುದು ಎನ್ನಲಾಗಿದೆ. ಬಳಿಕ ಪಠ್ಯ ಪರಿಷ್ಕರಣೆ ಸಮಿತಿ ಮಾಡಿ ಮುಂದಿನ ಸಾಲಿನಿಂದ ಹೊಸ ಪಠ್ಯ ಪುಸ್ತಕ ರಚಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದಾ ಎನ್ನುವುದನ್ನು ಕಾದು ನೋಡಬೇಕಿದೆ. ಈ ಕುರಿತಾಗಿ ದಿಗ್ವಿಜಯ ನ್ಯೂಸ್ ಮಾಹಿತಿ ನೀಡಿದೆ.
ವಿವಾದಿತ ಪಠ್ಯ ಕೈಬಿಡಲು ರಾಜ್ಯ ಸರ್ಕಾರ ಮುಂದಾಗಿದ್ದು ನಿನ್ನೆ ನಡೆದ ಪಠ್ಯ ಪರಿಷ್ಕರಣೆ ಸಭೆಯಲ್ಲಿ ಹಲವು ಸಾಹಿತಿಗಳು ಭಾಗಿಯಾಗಿದ್ದರು. “ಬಿಜೆಪಿ ಸರ್ಕಾರ ರಚನೆ ಮಾಡಿ ಪಠ್ಯ ಪರಿಷ್ಕರಣೆ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹೀಗಾಗಿ ಮುಖ್ಯಮಂತ್ರಿಗೆ ಸಾಹಿತಿಗಳು ದುಷ್ಪರಿಣಾಮ ಇರುವ ಪಠ್ಯಗಳನ್ನು ಕೈಬಿಡಬೇಕು” ಎಂದು ಮನವಿ ಮಾಡಿರುವ ಬಗ್ಗೆ ಶಿಕ್ಷಣ ತಜ್ಞ ನಿರಂಜನ್ ಆರಾಧ್ಯ ದಿಗ್ವಿಜಯ ನ್ಯೂಸ್ಗೆ ಮಾಹಿತಿ ನೀಡಿದ್ದಾರೆ.
ಈ ಸಂದರ್ಭ ಅವರು ”ನಿನ್ನೆ ಸಭೆಯಲ್ಲಿ ಎಲ್ಲವನ್ನೂ ಸಿಎಂಗೆ ತಿಳಿಸಿದ್ದೇವೆ. ಮಕ್ಕಳಿಗೆ ದುಷ್ಪರಿಣಾಮ ಬೀರುವ ಪಠ್ಯವನ್ನು ಕೈಬಿಡಬೇಕೆಂದು ಹೇಳಿದ್ದೇವೆ. ಆದಷ್ಟು ಬೇಗ ಸರ್ಕಾರ ಈ ನಿರ್ಧಾರ ತೆಗೆದುಕೊಳ್ಳುತ್ತದೆ ಅಂತ ಅನ್ಕೊಂಡಿದ್ದೀವಿ. ಸದ್ಯದಲ್ಲಿ ಪಠ್ಯ ಪರಿಷ್ಕರಣೆ ಆಗಬಹುದು. ಆದೇಶ ಮಾಡಲು ಸರ್ಕಾರ ಮತ್ತು ಶಿಕ್ಷಣ ಸಚಿವರಿಗೆ ಬಿಟ್ಟಿದ್ದು. ನಮ್ಮ ನಿಲುವನ್ನು ಮುಖ್ಯಮಂತ್ರಿಗೆ ಮತ್ತು ಶಿಕ್ಷಣ ಸಚಿವರಿಗೆ ತಿಳಿಸಿ ಬಂದಿದ್ದೇವೆ” ಎಂದಿದ್ದಾರೆ.