ನ್ಯೂಸ್

ರಾಜ್ಯ ಬಜೆಟ್​ 2025-26| ವಕ್ಛ್​ ಆಸ್ತಿಗಳ ದುರಸ್ತಿ, ನವೀಕರಣಕ್ಕಾಗಿ ವಿಶೇಷ ಅನುದಾನ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: 2025-26ನೇ ಸಾಲಿನ ಬಜೆಟ್​ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಮಾರ್ಚ್ 07) ಮಂಡಿಸುತ್ತಿದ್ದು, ಭರಪೂರ ಘೋಷಣೆಗಳನ್ನು ಮಾಡಿದ್ದಾರೆ. ಬಜೆಟ್​ನಲ್ಲಿ ಪ್ರಮುಖವಾಗಿ ವಕ್ಫ್ ಆಸ್ತಿಗಳ ದುರಸ್ತಿ ಮತ್ತು ನವೀಕರಣಕ್ಕಾಗಿ ಮತ್ತು ಮುಸ್ಲಿಂ ಸ್ಮಶಾನಗಳ ರಕ್ಷಣೆಗಾಗಿ ಮೂಲಸೌಕರ್ಯಕ್ಕಾಗಿ 150 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇನ್ನೂ ಬಜೆಟ್​ನಲ್ಲಿ ಪ್ರಮುಖ ಘೋಷಣೆಗಳನ್ನು ಮಾಡಲಾಗಿದ್ದು, ವೃತ್ತಿ ತೆರಿಗೆಯನ್ನು 200 ರೂ. ರಿಂದ 300 ರೂ.ಗೆ ಏರಿಕೆ ಮಾಡಲಾಗಿದೆ. ಇದಲ್ಲದೆ ರಾಜ್ಯದ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಮೂಲಸೌಕರ್ಯ ಅಭಿವೃದ್ಧಿ ಹೊಸ ಕಾರ್ಯಕ್ರಮ ಜಾರಿ ಮಾಡಲಾಗಿದ್ದು, ಈ ಯೋಜನೆಯಡಿ ರಾಜ್ಯದ ಎಲ್ಲಾ ವಿಧಾನಸಭೆ ಕ್ಷೇತ್ರದ ರಸ್ತೆ, ಸಣ್ಣ ನೀರಾವರಿ, ಮೂಲ ಸೌಕರ್ಯಗಳಿಗೆ 8 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಘೋಷಿಸಲಾಗಿದೆ.

ಎಲ್ಲ ಚಿತ್ರಮಂದಿರಗಳಲ್ಲೂ ಸಿನಿಮಾ ಟಿಕೆಟ್ ದರ 200 ರೂ.ಗೆ ನಿಗದಿ ಪಡಿಸಲಾಗುವುದು. ಈ ಮೂಲಕ ಸರ್ಕಾರ ಮಲ್ಟಿಫ್ಲೆಕ್ಸ್​ಗಳಲ್ಲಿ ಏಕರೂಪದ ದರನಿಗದಿ ಸೇರಿದಂತೆ ಹಲವು ಘೋಷಣೆಗಳನ್ನು ಮಾಡಲಾಗಿದೆ. ಸಿನಿಮಾ ಕ್ಷೇತ್ರವನ್ನ ಸಿನಿಮಾ ಉದ್ಯಮ ಎಂದು ಪರಿಗಣಿಸಿ ಕೈಗಾರಿಕಾ ನೀತಿಯಡಿ ತರಲು ನಿರ್ಧಾರ ಮಾಡಲಾಗಿದೆ. ಕನ್ನಡ ಸಿನಿಮಾಗಳಿಗೆ OTT ವೇದಿಕೆ ಸೃಷ್ಟಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.