ಸಿಎಂ ಸಿದ್ದರಾಮಯ್ಯ 
ನ್ಯೂಸ್

ಒಂದೂವರೆ ಗಂಟೆ ಸಂವಾದ; ಹಸನ್ಮುಖಿಯಾಗಿದ್ದ ಸಿಎಂ

Bengaluru - Political - Shivananda Tagadur

ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮ ಸಂವಾದದಲ್ಲಿ ಹಸನ್ಮುಖಿಯಾಗಿದ್ದರು. ಒಂದು ಗಂಟೆ ಕಾಲ ಸರ್ಕಾರದ ಸಾಧನೆಗಳನ್ನು ಟಿಪ್ಪಣಿ ಮಾಡಿ ಮಾತನಾಡಿದ ಅವರು, ವಿರೋಧ ಪಕ್ಷಗಳ ಆರೋಪಗಳಿಗೂ ತಕ್ಕ ಪ್ರತ್ಯುತ್ತರ ನೀಡಿದರು. ಪತ್ರಕರ್ತರ ಪ್ರಶ್ನೆಗಳಿಗೂ ಅರ್ಧ ಗಂಟೆಗೂ ಹೆಚ್ಚು ಕಾಲ ಉತ್ತರಿಸಿದರು. ಸುಮಾರು ಒಂದೂವರೆ ಗಂಟೆಗಳ ಕಾಲ ಸಂವಾದದಲ್ಲಿ ಪಾಲ್ಗೊಂಡಿದ್ದರು.

*ಅರಸೀಕೆರೆಗೆ ಹೋಗಿದ್ದಾಗ ಅಲ್ಲಿ ಒಬ್ಬ ಮಹಿಳೆ ವೇದಿಕೆ ಬಳಿ ಹಾರ ಇಟ್ಟುಕೊಂಡು ನಿಂತಿದ್ದಳು. ಕೆಳಗಿಳಿಯುವಾಗ ಆಕೆ ನನಗೆ ಹಾರ ಹಾಕುತ್ತಾ ಹೇಳಿದಳು. ಇದು ನೀವು ಕೊಟ್ಟ ಶಕ್ತಿ ಯೋಜನೆ ಲ. ನಾನು ನಮ್ಮ ನೆಂಟರಿಷ್ಟರ ಮನೆ, ತವರು ಮನೆ, ದೇವಸ್ಥಾನ ಸೇರಿದಂತೆ ಎಲ್ಲಾ ಕಡೆಗೆ ಓಡಾಡಿದ ಬಸ್ ಟಿಕೆಟ್‌ಗಳನ್ನು ಇಟ್ಟುಕೊಂಡಿದ್ದು ಅದರಲ್ಲಿಯೇ ಹಾರ ಮಾಡಿಕೊಂಡು ಬಂದೆ ಎಂದಳು. ಇದಕ್ಕಿಂತ ಸಾರ್ಥಕ ಕ್ಷಣ ಇನ್ನು ಬೇಕೆ? ಎಂದು ಸಿಎಂ ಕೇಳಿದರು.

*ಕೊಪ್ಪಳದಲ್ಲಿ ಒಬ್ಬ ಮಹಿಳೆ ನನ್ನ ಜೀವನದಲ್ಲಿ ಒಡವೆ ನೋಡಿರಲಿಲ್ಲ. ಸರ್ಕಾರ ಪ್ರತಿ ತಿಂಗಳು ಕೊಟ್ಟ 2 ಸಾವಿರ ರೂ ಉಳಿಸಿ ಒಂದು ಸರ ಮಾಡಿಸಿಕೊಂಡು ಹಾಕಿಕೊಂಡಿರುವ ಎಂದಳು. ಇದಕ್ಕಿಂತ ಸಾರ್ಥಕತೆ ಇನ್ನೆಲ್ಲಿ ಸಿಗಬೇಕು? ಎಂದರು ಸಿಎಂ.

*ದಿನ ಬೆಳಗಾದರೆ, ಯಡಿಯೂರಪ್ಪ, ಅಶೋಕ, ವಿಜಯೇಂದ್ರ, ಬಸವರಾಜ ಬೊಮ್ಮಾಯಿ ಸರ್ಕಾರ ಪಾಪರ್ ಆಗಿದೆ ಎಂದು ಟೀಕೆ ಮಾಡ್ತಾರೆ. ವಾಸ್ತವ ಸಂಗತಿಗಳನ್ನು ತಿಳಿಯದೆ ಮಾತನಾಡುವುದು ಖಯಾಲಿಯಾಗಿದೆ. ರಚನಾತ್ಮಕ ಟೀಕೆ ಮಾಡಿದರೆ ಸ್ವೀಕರಿಸಲು ಸಿದ್ದ.

*ಶಕ್ತಿ ಯೋಜನೆಯ ಬಗ್ಗೆ ಧರ್ಮಸ್ಥಳ ಡಾ.ವೀರೇಂದ್ರ ಹೆಗ್ಗಡೆ ಅವರೇ ಸರ್ಕಾರಕ್ಕೆ ಮೆಚ್ಚುಗೆ ಪತ್ರ ಬರೆದಿದ್ದರು. ಆದರೆ, ಬಿಜೆಪಿಯವರಿಗೆ ಇಂಥ ಯೋಜನೆಯನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ.

*ಸಿಎಂ ಸಂವಾದದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಬಿ.ಪಿ.ಮಲ್ಲಪ್ಪ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಜೀರ್ ಅಹಮದ್ ಹಾಜರಿದ್ದರು.