ನ್ಯೂಸ್

ಪರಿಹಾರ ನಿಧಿಗೆ ದೇಣಿಗೆ ನೀಡದ ನಿಗಮ ಮಂಡಳಿಗಳಿಗೆ ಸಿಎಂ ತಾಕೀತು

ಬೆಂಗಳೂರು:
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡದ ನಿಗಮ ಮತ್ತು ಮಂಡಳಿಗಳ ಪಟ್ಟಿಯನ್ನು ತಮ್ಮ ಗಮನಕ್ಕೆ ತರುವಂತೆ ಸಿಎಂ ಸಿದ್ದರಾಮಯ್ಯ ಅವರು ತಾಕೀತು ಮಾಡಿದ್ದಾರೆ.
ಲಾಭದಾಯಕವಾಗಿದ್ದು ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡದ ನಿಗಮ ಮಂಡಳಿಗಳಿಗೆ ಪತ್ರವನ್ನು ಬರೆಯುವಂತೆ ಸೂಚಿಸಿರುವ ಸಿಎಂ, ದೇಣಿಗೆ ನೀಡಲು ವಿಳಂಬ ಮಾಡಿದರೆ ಮುಂದಿನ ಸಭೆಯಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.
ಕೆಲವು ನಿಗಮ ಮಂಡಳಿಗಳು ಪ್ರತಿ ವರ್ಷ ಸಹಜವಾಗಿಯೇ ತಮ್ಮ ವಹಿವಾಟಿನ ಲಾಭಂಶವನ್ನು ಸಿಎಂ ಪರಿಹಾರ ನಿಧಿಗೆ ಕಳುಹಿಸಿಕೊಡುತ್ತವೆ. ಆದರೆ, ಹಲವು ನಿಗಮಗಳು ದೇಣಿಗೆ ಕಳುಹಿಸಲು ನಿರ್ಲಕ್ಷ್ಯ ತೋರಿಸುತ್ತಿವೆ ಎನ್ನುವ ವಿಷಯವನ್ನು ಅಧಿಕಾರಿಗಳು ಸಿಎಂ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಕೂಡಲೆ ಕ್ರಮಕ್ಕೆ ಸೂಚಿಸಿದರು ಎಂದು ಸಿಎಂ ಕಚೇರಿಯ ಮೂಲಗಳು ತಿಳಿಸಿವೆ.
ಆಸ್ಪತ್ರೆಗೆ ಸೇರಿದ ಬಡ ಬಗ್ಗರಿಗೆ, ನೊಂದವರಿಗೆ ಸಹಾಯವಾಗಲಿ ಎನ್ನುವ ಕಾರಣಕ್ಕಾಗಿ ಸಿಎಂ ಪರಿಹಾರ ನಿಧಿ ಇದೆ. ಇದಕ್ಕೂ ಹಣ ಕೊಡುವುದಿಲ್ಲ ಎಂದರೆ ಏನ್ರಿ? ನಿಮಗೇನು ಮಾನವೀಯತೆ ಇಲ್ಲವೇ? ನಿಮ್ಮ ಮನೆಯ ಹಣವನ್ನು ಕೊಡ್ತೀರೇನ್ರಿ? ನನ್ನ ಪತ್ರ ಬರೆದರೂ ಯಾಕೆ ಸ್ಪಂಧಿಸಿಲ್ಲ? ಎಂದು ನಿಗಮವೊಂದರ ಎಂಡಿಯನ್ನು ತರಾಟೆಗೆ ತೆಗೆದುಕೊಂಡರು. ಮಾರನೆ ದಿನವೇ ಆ ನಿಗಮದಿಂದ ಕೋಟಿ ಹಣ ಸಿಎಂ ಪರಿಹಾರ ನಿಧಿಗೆ ಬಂತು ಎಂದು ಮೂಲಗಳು ಖಚಿತಪಡಿಸಿವೆ.
ಸಿಎಂ ಪತ್ರ ಬರೆದಿರುವುದನ್ನು ನಮ್ಮ ಗಮನಕ್ಕೆ ತಂದಿಲ್ಲ, ಆಡಳಿತ ಮಂಡಳಿ ಸಭೆಗೂ ವಿಷಯವಾಗಿ ಮಂಡಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಸಚಿವರೊಬ್ಬರು, ತಕ್ಷಣವೇ ನಮ್ಮ ನಿಗಮದಿಂದ ಸಿಎಂ ನಿಧಿಗೆ ಚೆಕ್ ಮೂಲಕ ಹಣವನ್ನು ಕಳುಹಿಸಿಕೊಡಲಾಯಿತು ಎಂದು ತಿಳಿಸಿದ್ದಾರೆ.