ನ್ಯೂಸ್

ಸಿಎಂ ಹುದ್ದೆ ದ್ವಂದ್ವ, ನಿತೀಶ್​ಗೆ ಸಂಪುಟ ಸವಾಲು

ನವದೆಹಲಿ : ಬಿಹಾರದಲ್ಲಿ ಎನ್​ಡಿಎ ಮತ್ತೆ ಅಧಿಕಾರಕ್ಕೆ ಬಂದಿದ್ದರೂ ನಿತೀಶ್ ಕುಮಾರ್ ಖುಷಿಯಾಗಿಲ್ಲ. ಅದು ಸಹಜ ಕೂಡ. ಪಕ್ಷದ 8 ಸಚಿವರು ಚುನಾವಣೆ ಸೋತಿದ್ದಾರೆ. ಕಳೆದ 15 ವರ್ಷಗಳಲ್ಲಿ ಜೆಡಿಯು ಇಂಥ ನಿಕೃಷ್ಟ ನಿರ್ವಹಣೆ ತೋರಿರಲಿಲ್ಲ. ಮೇಲಾಗಿ, ಎಲ್​ಜೆಪಿಯ ‘ಮತ ವಿಭಜನೆ ತಂತ್ರ’ದಿಂದಾಗಿ ಸುಮಾರು 25-30 ಸೀಟುಗಳನ್ನು ಜೆಡಿಯು ಕಳೆದುಕೊಂಡಿದೆ. ಇಲ್ಲದಿದ್ದಲ್ಲಿ, ನಮ್ಮ ಪಕ್ಷ 70ರ ಆಸುಪಾಸಿನಷ್ಟು ಕ್ಷೇತ್ರಗಳನ್ನು ಸುಲಭದಲ್ಲಿ ಗೆದ್ದುಕೊಳ್ಳುತ್ತಿತ್ತು ಎಂದು ನಿತೀಶ್ ಆಪ್ತರೊಂದಿಗೆ ಬೇಸರ ಹಂಚಿಕೊಂಡಿದ್ದಾರೆ.

12 ಸಾವಿರ ಮತಗಳ ವ್ಯತ್ಯಾಸ! ಬಿಹಾರ ಮತ ಕದನದಲ್ಲಿ ಎನ್​ಡಿಎ ಮೈತ್ರಿಕೂಟಕ್ಕೆ ಮಹಾಘಟಬಂಧನಕ್ಕಿಂತ ಕೇವಲ 12 ಸಾವಿರ ಮತಗಳಷ್ಟೇ ಹೆಚ್ಚುವರಿಯಾಗಿ ಬಂದಿವೆ. ರಾಜ್ಯದಲ್ಲಿ ಸುಮಾರು 4.20 ಕೋಟಿ ಮಂದಿ ಮತದಾನ ಮಾಡಿದ್ದು, ಇದರಲ್ಲಿ 1,57,01,226 ಮಂದಿ ಎನ್​ಡಿಎ ಆಯ್ಕೆ ಮಾಡಿದ್ದರೆ, 1,56,88,458 ಮಂದಿ ಮಹಾಮೈತ್ರಿಗೆ ಮತ ಹಾಕಿದ್ದಾರೆ. ಎನ್​ಡಿಎ ಮತ ಹಂಚಿಕೆ ಪ್ರಮಾಣ ಶೇ. 37.26 ಆಗಿದ್ದರೆ ಮಹಾಮೈತ್ರಿ ಮತ ಹಂಚಿಕೆ ಪ್ರಮಾಣ ಶೇ. 37.23.

ಫಲಿತಾಂಶದ ದಿನದಿಂದಲೇ ಬೇಸರಗೊಂಡವರಂತೆ ಕಾಣುತ್ತಿದ್ದ ನಿತೀಶ್, ‘ಸಿಎಂ ಹುದ್ದೆ ನನಗೆ ಬೇಡ’ ಎಂದು ಆಪ್ತರೊಂದಿಗೆ ತಿಳಿಸಿದ್ದರೆನ್ನಲಾಗಿದೆ. ಎಲ್​ಜೆಪಿ ಎನ್​ಡಿಎ ಮೈತ್ರಿಪಕ್ಷವಾಗಿದ್ದರೂ, ‘ಚಿರಾಗ್ ಪಾಸ್ವಾನ್ ಷಡ್ಯಂತ್ರ’ ತಡೆಯಲಿಲ್ಲ ಎಂದು ಜೆಡಿಯು ಮುಖಂಡರೂ ಅಸಮಾಧಾನಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಬಿಜೆಪಿ ನಾಯಕರು ನಿತೀಶ್ ಜತೆಗೆ ಮಾತನಾಡಿದ್ದು, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಂತೆ ತಿಳಿಸಿದ್ದು, ಸರ್ಕಾರ ನಿಭಾಯಿಸುವಲ್ಲಿ ಹಿಂದಿನಂತೆ ಸಂಪೂರ್ಣ ಸ್ವಾತಂತ್ರ್ಯ ನಿಮಗಿರಲಿದೆ ಎಂದು ಭರವಸೆ ನೀಡಿದ್ದಾರೆ. ಆದರೂ, ಚುನಾವಣೆಯಲ್ಲಿ ‘ಹೀನಾಯ’ ನಿರ್ವಹಣೆ ನಂತರವೂ ಸಿಎಂ ಆಗಬೇಕೆ ಎಂಬ ದ್ವಂದ್ವದಲ್ಲಿ ನಿತೀಶರಿದ್ದಾರೆ ಎಂದು ಹೇಳಲಾಗುತ್ತಿದೆ. ನಿತೀಶ್​ಗೆ ಮುಂದಿನ ದಿನಗಳು ಸವಾಲಿನದ್ದಾಗಿರಲಿದೆ. ಮೇಲಾಗಿ, ಬಿಜೆಪಿಯ ‘ಸ್ಥಳೀಯ ಮತ್ತು ದಿಲ್ಲಿ ನಾಯಕ’ರನ್ನು ತೃಪ್ತಿಪಡಿಸಿಕೊಂಡೇ ಹೆಜ್ಜೆ ಇಡಬೇಕಿದೆ. ಜೆಡಿಯುಗಿಂತ 31 ಸೀಟುಗಳನ್ನು ಹೆಚ್ಚು ಗೆದ್ದಿರುವ ಬಿಜೆಪಿ ಸಂಪುಟದಲ್ಲಿ ‘ದೊಡ್ಡ ಹುದ್ದೆ’ಗಳ ಮೇಲೆ ಕಣ್ಣಿಟ್ಟಿದೆ.

ಹಿಂದಿನ ಎನ್​ಡಿಎ ಸರ್ಕಾರದಲ್ಲಿ ಒಟ್ಟು 29 ಸಚಿವರಿದ್ದರು ಮತ್ತು ಅವರಲ್ಲಿ 10 ಮಂದಿ ಸೋತಿದ್ದಾರೆ. 8 ಜೆಡಿಯು ಮತ್ತು 2 ಬಿಜೆಪಿ ಸಚಿವರಿಗೆ ಗೆಲ್ಲಲು ಸಾಧ್ಯವಾಗಿಲ್ಲ. ಸಂಪುಟದಲ್ಲಿ ಈ ಬಾರಿ ಬಿಜೆಪಿಗೆ ಆದ್ಯತೆ ಸಿಗಲಿದ್ದು, ಶಿಕ್ಷಣ, ಗೃಹ ಖಾತೆ ಬಿಜೆಪಿ ಪಾಲಾಗುವುದು ಬಹುತೇಕ ಖಚಿತವೆನ್ನಲಾಗುತ್ತಿದೆ. ಕಳೆದ ಬಾರಿ ಜೆಡಿಯುನಿಂದ 16ಕ್ಕಿಂತಲೂ ಹೆಚ್ಚು ಮಂದಿ ಸಚಿವರಾಗಿದ್ದರು. ಈ ನಡುವೆ, ಉಪ ಮುಖ್ಯಮಂತ್ರಿಯಾಗಿದ್ದ ಸುಶೀಲ್ ಕುಮಾರ್ ಮೋದಿ ಬಿಜೆಪಿ ನಾಯಕರಿಗಿಂತ ಹೆಚ್ಚು ನಿತೀಶ್ ಹೇಳಿದಂತೆ ಕೇಳುತ್ತಾರೆಂಬ ಸಿಟ್ಟು ಸ್ಥಳೀಯ ಬಿಜೆಪಿ ನಾಯಕರಲ್ಲಿದೆ. ಹೀಗಾಗಿ, ಈ ಬಾರಿ ಅವರಿಗೆ ಡಿಸಿಎಂ ಸ್ಥಾನ ಸಿಗುತ್ತದೋ ಇಲ್ಲವೋ ಎಂಬ ಚರ್ಚೆ ಗರಿಗೆದರಿದೆ.

ಮಾಂಜಿ, ಸಹಾನಿಯನ್ನು ಸಂರ್ಪಸಿದ ಆರ್​ಜೆಡಿ: ಕೇವಲ 3 ಸೀಟುಗಳ ಅಂತರದಲ್ಲಿ ಎನ್​ಡಿಎ ಚುನಾವಣೆ ಗೆದ್ದಿರುವುದರಿಂದ ತಲಾ ನಾಲ್ಕು ಸೀಟುಗಳನ್ನು ಗೆದ್ದಿರುವ ಜೀತನ್ ರಾಮ್ ಮಾಂಜಿ ನೇತೃತ್ವದ ಹಿಂದುಸ್ತಾನ್ ಅವಾಮಿ ಮೋರ್ಚಾ ಮತ್ತು ಮುಖೇಶ್ ಸಹಾನಿ ನೇತೃತ್ವದ ವಿಕಾಸ್​ಶೀಲ್ ಇನ್ಸಾನ್ ಪಾರ್ಟಿ ಶಾಸಕರನ್ನು ಆರ್​ಜೆಡಿ ಮುಖಂಡರು ಸಂರ್ಪಸಿದ್ದಾರೆ. ಚುನಾವಣೆಯಲ್ಲಿ ಸೋತರೂ ಮುಖೇಶ್ ಸಹಾನಿಗೆ ಉಪಮುಖ್ಯಮಂತ್ರಿ ಸ್ಥಾನದ ಭರವಸೆಯನ್ನೂ ನೀಡಿದ್ದಾರೆ. ಆದರೆ, ಎರಡೂ ಪಕ್ಷಗಳ ಮುಖಂಡರು, ಎನ್​ಡಿಎ ತೊರೆಯುವ ಪ್ರಶ್ನೆ ಇಲ್ಲ, ಅಲ್ಲಿ ಸೂಕ್ತ ಸ್ಥಾನಮಾನ ಸಿಕ್ಕುವ ಭರವಸೆಯಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ತೇಜಸ್ವಿ ಸಾಧನೆಗೆ ಮೆಚ್ಚುಗೆ: 75 ಕ್ಷೇತ್ರಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದ ಆರ್​ಜೆಡಿ ಯುವ ನಾಯಕ ತೇಜಸ್ವಿ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜನರನ್ನು ತಲುಪಿದ ರೀತಿ ಹಾಗೂ ಪ್ರಧಾನಿ ಮೋದಿ-ನಿತೀಶ್ ಕುಮಾರ್​ರಂತಹ ದಿಗ್ಗಜ ನಾಯಕರನ್ನು ಎದುರು ಹಾಕಿಕೊಂಡು ಪಕ್ಷ ಮುನ್ನಡೆಸಿದ ವೈಖರಿ ಬಗ್ಗೆ ಬಿಜೆಪಿ ಮತ್ತು ಜೆಡಿಯುದಲ್ಲಿರುವ ಮಿತ್ರರೂ ಫೋನ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.