ಶಾಲೆ ಆರಂಭ ಸಲುವಾಗಿ ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆ. 
ನ್ಯೂಸ್

ಮಕ್ಕಳ ಹಾಜರಿಯೇ ಸವಾಲು: ಶಾಲೆ ಆರಂಭಕ್ಕೆ ಸಿಎಂ ಸಮ್ಮತಿ; ಜ.1ರಿಂದ 10,12ನೇ ತರಗತಿ, 6-9ನೇ ಕ್ಲಾಸ್​ವರೆಗೆ ವಿದ್ಯಾಗಮ

ಬೆಂಗಳೂರು: ಜನವರಿ 1ಕ್ಕೆ 10 ಮತ್ತು 12ನೇ ತರಗತಿಗಳನ್ನು ಆರಂಭಿಸಬೇಕೆಂಬ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸಿಗೆ ನಿರೀಕ್ಷೆಯಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮತಿಸಿದ್ದಾರೆ. ಶಾಲೆ ಶುರುವಾಗುವುದೇನೋ ಸರಿ. ಆದರೆ 9 ತಿಂಗಳ ಬಳಿಕ ಮಕ್ಕಳನ್ನು ಕರೆತರುವ ಸವಾಲು ಸರ್ಕಾರದ ಹೆಗಲೇರಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ 2020-2021ನೇ ಸಾಲಿನಲ್ಲಿ ಶಾಲೆಗಳನ್ನು ಆರಂಭಿಸುವ ಸಂಬಂಧ ತೀರ್ಮಾನ ಕೈಗೊಳ್ಳಲಾಗಿದೆ.

10 ಮತ್ತು 12ನೇ ತರಗತಿಗಳ ಆರಂಭದ ಅನುಭವದ ಆಧಾರದಲ್ಲಿ ಜ. 15ರಿಂದ 11ನೇ ತರಗತಿ ಆರಂಭಿಸಲು ನಿರ್ಧರಿಸಲಾಗಿದೆ. 6ರಿಂದ 9ನೇ ತರಗತಿಗಳಿಗೆ ಜ.1ರಿಂದ ವಿದ್ಯಾಗಮ ಕಾರ್ಯಕ್ರಮ ಪುನರಾರಂಭವಾಗಲಿದೆ. ಅದರ ಅನುಭವದ ಆಧಾರದಲ್ಲಿ ಜ.14ರಿಂದ 1 -5ನೇ ತರಗತಿಗಳಿಗೆ ವಿದ್ಯಾಗಮ ವಿಸ್ತರಿಸಲು ಸರ್ಕಾರ ಉದ್ದೇಶಿಸಿದೆ. ಕರೊನಾ ಪರಿಸ್ಥಿತಿ ನೋಡಿಕೊಂಡು ಪ್ರಥಮ ಪಿಯು ಆರಂಭಿಸಲು ತೀರ್ಮಾನಿಸಲಾಗಿದೆ. ಇದೇ ವೇಳೆ ಹಾಸ್ಟೆಲ್ ಆರಂಭಕ್ಕೂ ಅನುಮತಿ ಸಿಕ್ಕಿದೆ.

ಸವಾಲು: ಶಾಲೆ, ಹಾಸ್ಟೆಲ್​ಗಳಿಗೆ ಮಕ್ಕಳ ದಾಖಲಾತಿ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕುಸಿತ ಕಂಡಿದೆ. ಮಕ್ಕಳ ದಾಖಲಾತಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಸರ್ವೆ ನಡೆಸುತ್ತಿದೆ. ಶಾಲೆ ಆರಂಭಿಸುವ ಮೂಲಕ ಬಾಲ್ಯವಿವಾಹ, ಬಾಲಕಾರ್ವಿುಕ ಪದ್ಧತಿ, ಅರ್ಧಕ್ಕೆ ಶಾಲೆ ಬಿಡುವುದನ್ನು ತಡೆಗಟ್ಟಬೇಕಾದ ಹೊಣೆಗಾರಿಕೆ ಸರ್ಕಾರದ ಮುಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸುಮಾರು 1.50 ಲಕ್ಷ ಮಕ್ಕಳು ತರಗತಿಗಳಿಂದ ದೂರ ಉಳಿದಿದ್ದಾರೆ. ಈ ಎಲ್ಲ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ಜನವರಿ 1 ರಿಂದ 10 ಮತ್ತು 12ನೇ ತರಗತಿ ಆರಂಭಿಸಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಜತೆಗೆ 6 ರಿಂದ 9ನೇ ತರಗತಿ ಮಕ್ಕಳಿಗೆ ವಿದ್ಯಾಗಮ ಆರಂಭಿಸಲು ಸಹ ನಿರ್ಧರಿಸಿದೆ.

ಇವು ಕಡ್ಡಾಯ

  • ವಿದ್ಯಾರ್ಥಿಗಳು ಶಾಲೆಗೆ ಬರುವ ಮೊದಲು ಪಾಲಕರ ಅನುಮತಿ ಪತ್ರ ತರಬೇಕು.
  • ಶೀತ, ನೆಗಡಿ, ಕೆಮ್ಮು, ಕೋವಿಡ್ ಲಕ್ಷಣಗಳಿರುವವರು ಶಾಲೆಗೆ ಬರುವಂತಿಲ್ಲ.
  • ತಮ್ಮ ಮಕ್ಕಳಿಗೆ ರುಚಿ, ವಾಸನೆ ಕೊರತೆ, ಉಸಿರಾಟ ತೊಂದರೆ, ಗಂಟಲು ನೋವು ಸೇರಿದಂತೆ ಮೇಲ್ಕಂಡ ಯಾವುದೇ ಲಕ್ಷಣಗಳಿಲ್ಲ ಎಂದು ಪೋಷಕರು ಅನುಮತಿಪತ್ರದಲ್ಲಿ ತಿಳಿಸುವುದು ಕಡ್ಡಾಯ.
  • ತರಗತಿಗಳಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದರೆ ಅಂತಹ ವಿದ್ಯಾರ್ಥಿಯನ್ನು ಪರೀಕ್ಷೆ ಮತ್ತು ಸಮಾಲೋಚನೆಗೆ ಶಿಕ್ಷಕರು ಸಮೀಪದ ಆಸ್ಪತ್ರೆಗೆ ಕಳಿಸಬೇಕು.
  • ಡಿಸೆಂಬರ್ ತಿಂಗಳಲ್ಲೇ ಶಾಲಾ ಆಡಳಿತಗಳು/ ಶಾಲಾ ಮೇಲುಸ್ತುವಾರಿ ಸಮಿತಿಗಳು ಪಾಲಕರು, ಮಕ್ಕಳು ಇನ್ನಿತರ ಶೈಕ್ಷಣಿಕ ಪಾಲುದಾರರ ಸಭೆ ನಡೆಸಿ ಶಾಲೆಗಳ ಪುನರಾರಂಭ ಕುರಿತು ವಿಶ್ವಾಸ ಮೂಡಿಸುವ ಕ್ರಮಗಳನ್ನು ಕೈಗೊಳ್ಳುವುದು.

ಹಾಸ್ಟೆಲ್​ಗಳೂ ಶುರು: ಸಮಾಜಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಹಾಸ್ಟೆಲ್​ನಲ್ಲಿರುವ ವಿದ್ಯಾರ್ಥಿಗಳು, ವಸತಿ ಶಾಲೆಗಳ ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ವಸತಿ ಶಾಲೆಗೆ ಹಾಜರಾಗುವ ಮೊದಲು ಕೋವಿಡ್​ವುುಕ್ತ ಪ್ರಮಾಣ ಪತ್ರ ತರುವುದು ಕಡ್ಡಾಯ. ಮತ್ತೊಂದೆಡೆ, ಹಾಸ್ಟೆಲ್​ಗಳಿಗೆ ಬರಲು ವಿದ್ಯಾರ್ಥಿಗಳು ಸಿದ್ಧರಿಲ್ಲ. ಪರಿಶಿಷ್ಟ ಜಾತಿ, ವರ್ಗದ ಹಾಸ್ಟೆಲ್​ಗಳಲ್ಲಿ 78 ಸಾವಿರ ಮಕ್ಕಳ ಪೈಕಿ 11 ಸಾವಿರ ಮತ್ತು ಹಿಂದುಳಿದ ವರ್ಗಗಳ ಹಾಸ್ಟೆಲ್​ಗಳಲ್ಲಿ 65 ಸಾವಿರ ಮಕ್ಕಳ ಪೈಕಿ 15 ಸಾವಿರ ಮಕ್ಕಳಷ್ಟೇ ನೋಂದಣಿಯಾಗಿದ್ದಾರೆ.

ಬಿಸಿಯೂಟವಿಲ್ಲ: ಶಾಲೆಗಳಲ್ಲಿ ಮಧ್ಯಾಹ್ನ ಉಪಾ ಹಾರದ ಬದಲಿಗೆ ಆಹಾರ ಧಾನ್ಯಗಳ ವಿತರಣೆ ಮುಂದುವರಿಸಲಾಗುತ್ತದೆ. ಶಾಲಾ ಪರಿಸರದಲ್ಲಿ ಆಹಾರ ಸೇವನೆಗೆ ಅವಕಾಶವಿರಬಾರದು ಎಂಬ ತಜ್ಞರ ಸಮಿತಿ ಸಲಹೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಸ್ಯಾನಿಟೈಸೇಷನ್: ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಇಲಾಖೆಗಳು ಶಾಲೆ ಆರಂಭಕ್ಕೆ ಮುನ್ನ ಎಲ್ಲ ಶಾಲೆಗಳನ್ನು ಸ್ಯಾನಿಟೈಸೇಷನ್ ಮಾಡಲಿವೆ.

ಇಲಾಖೆಗಳ ಜವಾಬ್ದಾರಿ

  • ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಇಲಾಖೆಗಳಿಂದ ಶಾಲಾ ನೈರ್ಮಲ್ಯ, ಕುಡಿಯುವ ನೀರು ಮತ್ತು ಶೌಚಗೃಹ ನಿರ್ವಹಣೆ
  • ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಕ್ರೖೆಸ್​ಗಳಿಂದ ಹಾಸ್ಟೆಲ್ ಮತ್ತು ವಸತಿ ಶಾಲೆಗಳಿಗೆ ಮಕ್ಕಳ ನೋಂದಣಿ
  • ಆರೋಗ್ಯ ಇಲಾಖೆಯಿಂದ ಶಿಕ್ಷಕರು ಮತ್ತು ಮಕ್ಕಳ ಕೋವಿಡ್ ಪರೀಕ್ಷೆ ಮತ್ತು ಆರೋಗ್ಯ ನಿರ್ವಹಣೆ. ಸೋಂಕು ಕಂಡುಬಂದವರಿಗೆ ವಿಶೇಷ ವ್ಯವಸ್ಥೆ.
  • ಸಾರಿಗೆ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಹಾಗೂ ಬಸ್ ಪಾಸ್ ಸೌಲಭ್ಯ.
  • ದಿನಕ್ಕೆ ಮೂರು ಗಂಟೆ ಮಾತ್ರ ವಿದ್ಯಾಗಮ ತರಗತಿ ನಡೆಯಲಿವೆ.

ಪ್ರತ್ಯೇಕ ಎಸ್​ಒಪಿ ಅಗತ್ಯ

ಮಕ್ಕಳು ಮೈದಾನ, ಪ್ರಯೋಗಾಲಯ ಬಳಕೆ, ಗ್ರಂಥಾಲಯ, ವಿರಾಮದ ಸಮಯದ ಸದ್ಬಳಕೆ, ಶಾಲಾ ಸ್ವಚ್ಛತೆ ಹಾಗೂ ನೈರ್ಮಲೀಕರಣದ ವೇಳಾಪಟ್ಟಿ, ಶಾಲಾ ವಾಹನದ ಬಳಕೆ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಗೈರುಹಾಜರಿಯ ಮೇಲ್ವಿಚಾರಣೆ, ತುರ್ತು ಸಂದರ್ಭದ ನಿರ್ವಾಹಣೆ, ಪಾಲಕರು, ಸೇವಕರು, ಸಂದರ್ಶಕರ ಭೇಟಿ ಈ ಎಲ್ಲ ಚಟುವಟಿಕೆಗಳನ್ನು ನಿರ್ವಹಿಸಲು ಪ್ರತಿ ಶಾಲೆಯಲ್ಲೂ ಶಾಲಾ ಹಂತದಲ್ಲಿ ಪ್ರತ್ಯೇಕ ಎಸ್​ಒಪಿ ಸಿದ್ಧಪಡಿಸಿಕೊಳ್ಳಬೇಕೆಂದು ನಿರ್ದೇಶನ ನೀಡಲಾಗಿದೆ.

ಕಡ್ಡಾಯವಲ್ಲ: ಮಕ್ಕಳನ್ನು ವಿದ್ಯಾಗಮಕ್ಕೆ ಕಳುಹಿಸಲೇಬೇಕೆಂಬ ಒತ್ತಾಯವಿಲ್ಲ. ಪಾಲಕರು ಇಷ್ಟಪಟ್ಟರೆ ಮಾತ್ರ ಕಳುಹಿಸಬಹುದು ಅಥವಾ ಆನ್​ಲೈನ್/ಆಫ್​ಲೈನ್​ನಲ್ಲೇ ವಿದ್ಯಾಭ್ಯಾಸವನ್ನು ಮುಂದುವರಿಸಬಹುದು.

ಪಠ್ಯ ಕಡಿತವಿಲ್ಲ: ಪಿಯುಸಿಗೆ ಎಸ್​ಸಿಎಆರ್​ಟಿ ಸಿದ್ಧಪಡಿಸಿರುವ ಪಠ್ಯ ಬೋಧಿಸಲಾಗುತ್ತದೆ. ಉಳಿದ ತರಗತಿಗಳಿಗೆ ಕಡಿತ ಮಾಡುವುದಿಲ್ಲ. ಸುಮಾರು 5 ತಿಂಗಳು ತರಗತಿಗಳು ನಡೆಸುವುದರಿಂದ ಪಠ್ಯವನ್ನು ಮುಗಿಸುವುದಾಗಿ ಶಿಕ್ಷಣ ಇಲಾಖೆ ಹೇಳಿರುವುದಾಗಿ ತಿಳಿದು ಬಂದಿದೆ.

ಆರಂಭಕ್ಕೆ ಕಾರಣಗಳು

  • 10 ಮತ್ತು 12 ನೇ ತರಗತಿಗೆ ಬೋರ್ಡ್ ಪರೀಕ್ಷೆ ಇರುವುದು
  • ಖಾಸಗಿ ಶಾಲೆಗಳು ಬೋಧಕರಿಗೆ ಸಂಬಳ ಕೊಡುವುದು ಕಷ್ಟವಾಗಿರುವುದು
  • ಬಾಲಕಾರ್ವಿುಕ ಪದ್ಧತಿ, ಬಾಲ್ಯವಿವಾಹ, ಶಾಲೆ ಬಿಡುವ ಪ್ರಕರಣ
  • ಖಾಸಗಿ ಪಿಯು ಕಾಲೇಜುಗಳು, ವಿಧಾನಪರಿಷತ್ ಸದಸ್ಯರು, ಎಸ್​ಡಿ ಎಂಸಿಗಳು, ಶಾಲಾ ಸಂಘಟನೆ ಒತ್ತಡ
ಶಾಲೆ ಆರಂಭಕ್ಕೆ ಮುನ್ನ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾ ಗುವುದು. ಪ್ರಸ್ತುತ 10 ಮತ್ತು 12ನೇ ತರಗತಿ, 6 ರಿಂದ 9ನೇ ತರಗತಿವರೆಗೆ ವಿದ್ಯಾಗಮ ಪ್ರಾರಂಭಿಸಲಾಗುತ್ತದೆ. ಪರಿಸ್ಥಿತಿ ಅವಲೋಕಿಸಿ ಇತರ ತರಗತಿ ಪ್ರಾರಂಭಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು. | ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಶಾಲೆ ಆರಂಭಿಸುವ ಸಂಬಂಧ ಆರೋಗ್ಯ ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಕರೊನಾ ತಾಂತ್ರಿಕ ಸಲಹಾ ಸಮಿತಿ 2ನೇ ಅಲೆಯ ಎಚ್ಚರಿಕೆ ನೀಡಿದೆ. ಎರಡನೇ ಅಲೆ ಬಾರದಂತೆ ತಡೆಯಲು ಮಾರ್ಗಸೂಚಿ ಕ್ರಮಗಳನ್ನು ಅನುಸರಿಸಿ, ಪ್ರಯತ್ನ ಮಾಡುತ್ತಿದ್ದೇವೆ. | ಡಾ.ಕೆ. ಸುಧಾಕರ್ ಆರೋಗ್ಯ ಸಚಿವ ವಿದ್ಯಾರ್ಥಿಗಳಿಗೆ ಕಲಿಕೆ ಹೊರೆಯಾಗ ದಂತೆ, ಸುರಕ್ಷಿತ ವಾತಾವರಣದಲ್ಲಿ ಕಲಿಯುವ ಪರಿಸರವನ್ನು ಸೃಷ್ಟಿಸಿ ಕೊಡಲಿದ್ದೇವೆ. ಮಕ್ಕಳ ಹಿತದೃಷ್ಟಿಯಿಂದ ಶಾಲಾರಂಭದ ವಿಚಾರದಲ್ಲಿ ಸರ್ಕಾರದ ಎಲ್ಲ ಇಲಾಖೆಗಳು ಸಹಕಾರ ನೀಡಲಿವೆ. | ಎಸ್. ಸುರೇಶ್​ಕುಮಾರ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ವಿದ್ಯಾರ್ಥಿಗಳಿದ್ದಲ್ಲೇ ಶಾಲೆ

ಈ ವರ್ಷದ ಮಟ್ಟಿಗೆ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದ ಹತ್ತಿರದ ಶಾಲೆಗೆ ಹೋಗುವುದಕ್ಕೆ ಅವಕಾಶ ನೀಡಲು ಸರ್ಕಾರ ತೀರ್ವನಿಸಿದೆ. ಶನಿವಾರ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಿಕ್ಷಣ ಇಲಾಖೆಯ ಈ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿರುವುದಾಗಿ ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ. ಈ ಬಗ್ಗೆ ಶಾಲೆ ಮುಖ್ಯ ಶಿಕ್ಷಕರ ಗಮನಕ್ಕೆ ತರಬೇಕು. ಇದರಿಂದ ವಿದ್ಯಾರ್ಥಿಗಳು ಬಸ್​ಗಳಲ್ಲಿ ಸಂಚರಿಸಿ ಕರೊನಾ ಅಪಾಯಕ್ಕೀಡಾಗುವುದನ್ನು ತಪ್ಪಿಸಬಹುದಾಗಿದೆ. ಪರೀಕ್ಷೆ ಎಲ್ಲಿ ಬರೆಯಬೇಕು ಎಂಬ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ.

ಹಾಜರಾತಿ ಕಡ್ಡಾಯವಲ್ಲ: ಶಾಲೆ ಆರಂಭಿಸಿದರೂ ಹಾಜರಾತಿ ಕಡ್ಡಾಯವಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ಹೇಳಿವೆ.

ಪ್ರತ್ಯೇಕ ಕೊಠಡಿ: ಸೋಂಕಿತರಿಗೆ ಪ್ರತಿ ಶಾಲೆ ಹಾಗೂ ಹಾಸ್ಟೆಲ್​ನಲ್ಲಿ ಪ್ರತ್ಯೇಕವಾದ ಐಸೋಲೇಷನ್ ಕೊಠಡಿಗಳನ್ನು ಸಿದ್ಧಪಡಿಸಿಡಲು ನಿರ್ಧರಿಸಲಾಗಿದೆ. ಪ್ರತಿ ಕೊಠಡಿಯಲ್ಲಿ ಗರಿಷ್ಠ 15 ವಿದ್ಯಾರ್ಥಿಗಳು ಇರುವಂತೆ ನೋಡಿಕೊಳ್ಳಲಾಗುತ್ತದೆ.

ಶಾಲೆ ಆರಂಭ ಸ್ವಾಗತಾರ್ಹ

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿ ಆರಂಭಿಸುವ ಸರ್ಕಾರದ ನಿರ್ಧಾರವನ್ನು ಖಾಸಗಿ ಶಾಲಾ ಆಡಳಿತ ಮಂಡಳಿ ಮತ್ತು ಸರ್ಕಾರದ ಉಪನ್ಯಾಸಕರ ಸಂಘ ಸ್ವಾಗತಿಸಿವೆ. ಜತೆಗೆ, ಸಾಧ್ಯವಾದಷ್ಟು ಬೇಗ ಪಠ್ಯಕ್ರಮ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯ ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡುಗಡೆ ಮಾಡಿ ಶಿಕ್ಷಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿವೆ.

ಯಾರ್ಯಾರ ಜವಾಬ್ದಾರಿ ಏನು?

(ಎಸ್​ಒಪಿ ಬಿಡುಗಡೆ ಮಾಡಿದ ಶಿಕ್ಷಣ ಇಲಾಖೆ )

ಶಾಲೆಗಳು

  • ಸಾಮಾಜಿಕ ಅಂತರಕ್ಕೆ ಒತ್ತು, ವಿದ್ಯಾರ್ಥಿಗಳ ಆಗಮನ, ನಿರ್ಗಮನಕ್ಕೆ ಪ್ರತ್ಯೇಕ ಮಾರ್ಗ
  • ಮಕ್ಕಳಿಗೆ ಕರೊನಾ ಜಾಗೃತಿ ಮೂಡಿಸುವ ಪೋಸ್ಟರ್ ಅಳವಡಿಕೆ, ಬಿಸಿನೀರು, ಸ್ಯಾನಿಟೈಸರ್ ವ್ಯವಸ್ಥೆ
  • ಪುಸ್ತಕ, ಡಸ್ಟರ್, ಚಾಕ್ ಪೀಸ್ ಅನ್ನು ಹಲವು ವಿದ್ಯಾರ್ಥಿಗಳು ಒಂದೇ ಸಮನೆ ಮುಟ್ಟದಂತೆ ನೋಡಿಕೊಳ್ಳಬೇಕು, ವಿದ್ಯಾರ್ಥಿಗಳು ಮಾಸ್ಕ್ ಧರಿಸಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು
  • ಹೊರಗಿನವರು ಬಂದರೆ ಶಾಲಾ ಕಚೇರಿಗೆ ಮಾತ್ರ ಪ್ರವೇಶ ಕಲ್ಪಿಸಬೇಕು, ಶಾಲಾ ಆವರಣದಲ್ಲಿ ಮಕ್ಕಳು ಉಗುಳದಂತೆ ನೋಡಿಕೊಳ್ಳಬೇಕು
  • ಮಾಸ್ಕ್ ವಿಲೇವಾರಿ ಮಾಡುವಾಗ ಎಚ್ಚರವಹಿಸಬೇಕು, ಶಾಲೆ ಸುತ್ತಮುತ್ತ ತಿಂಡಿ ಮಾರುವವರಿಗೆ ಅವಕಾಶ ನೀಡಬಾರದು

ಪಾಲಕರು

  • ಮಕ್ಕಳ ಆರೋಗ್ಯದ ಪರಿಸ್ಥಿತಿ ಗಮನಿಸಬೇಕು, ಮಕ್ಕಳಿಗೆ ಮಾಸ್ಕ್ ಹಾಕಿ ಕಳುಹಿಸಬೇಕು, ಮಾಸ್ಕ್​ನ ಸ್ವಚ್ಛತೆ ಕಾಪಾಡಿಕೊಳ್ಳಲು ತಿಳಿಹೇಳಬೇಕು.
  • ಬ್ಯಾಗ್ ಜತೆಗೆ ತಟ್ಟೆ, ಟವೆಲ್, ಬಿಸಿನೀರು, ಸ್ಯಾನಿಟೈಸರ್ ಕಳುಹಿಸಬೇಕು.