ಬೆಂಗಳೂರು: ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಗೆಲ್ಲಬೇಕು ಹಾಗೂ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರನ್ನು ಮಣಿಸಲೇಬೇಕೆಂದು ಹಠತೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪುನಃ ಆ ಭಾಗದಲ್ಲಿ ಇನ್ನೊಮ್ಮೆ ಪ್ರಚಾರ ನಡೆಸಲು ಬಯಸಿದ್ದಾರೆ.
ಯುಗಾದಿ ಹಬ್ಬದ ಕಾರಣಕ್ಕೆ ಪ್ರಜಾಧ್ವನಿ-2 ಪ್ರಚಾರ ಯಾತ್ರೆಗೆ ಬ್ರೇಕ್ ನೀಡಿದ ಅವರು, ಏಪ್ರಿಲ್ 12ರಿಂದ ಪುನರಾರಂಭಿಸುತ್ತಿದ್ದಾರೆ. ಅಂದು ಬೆಳಗ್ಗೆ ಚಾಮರಾಜನ ನಗರ ಜಿಲ್ಲೆ ಕೊಳ್ಳೆಗಾಲ, ಮಧ್ಯಾಹ್ನ ನಂಜನಗೂಡು, ಸಂಜೆ ಎಚ್.ಡಿ.ಕೋಟೆಯಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವರು.
ಅಂದು ರಾತ್ರಿ ಮೈಸೂರಿನಲ್ಲಿ ತಂಗಲಿದ್ದು, ಮೈಸೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಮುಖರ ಸಭೆ ನಡೆಸುವರು.
13ರಂದು ಬೆಳಗ್ಗೆ ಮೈಸೂರು ನಗರ ವ್ಯಾಪ್ತಿಯ ಕೃಷ್ಣರಾಜ ಕ್ಷೇತ್ರದಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ ಹುಣಸೂರು, ಸಂಜೆ ಪಿರಿಯಾಪಟ್ಟಣದಲ್ಲಿ ಸಭೆ ನಡೆಸಲಿದ್ದಾರೆ. ಬಳಿಕ ರಾತ್ರಿ ಬೆಂಗಳೂರಿಗೆ ವಾಪಸಾಗಲಿದ್ದಾರೆ.