M K Stalin: ಚೆನ್ನೈನಲ್ಲಿ ಗಾಜಾ ನರಮೇದ ಖಂಡಿಸಿ ಸಿಪಿಐಎಂ ಪಕ್ಷ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಭಾರತ ಜನಾಂಗೀಯ ಹತ್ಯೆ ನಿಲ್ಲಿಸುವಂತೆ ಇಸ್ರೇಲ್ ಮೇಲೆ ಒತ್ತಡ ಹೇರಬೇಕು ಎಂದು ಬುಧವಾರ(ಅ. 08) ಹೇಳಿದ್ದಾರೆ.
ಗಾಜಾದ ಮೇಲೆ ಇಸ್ರೇಲ್ ನಡೆಸುತ್ತಿರುವ ವಿವೇಚನಾರಹಿತ ದಾಳಿಗಳು ನಮ್ಮೆಲ್ಲರ ಹೃದಯಗಳನ್ನು ನಡುಗಿಸುತ್ತಿವೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇಸ್ರೇಲ್ ಮತ್ತು ಅದರ ಬೆಂಬಲಕ್ಕೆ ನಿಂತ ದೇಶಗಳ ಮೇಲೆ ಒತ್ತಡ ಹೇರಲು ಪ್ರಯತ್ನಿಸಬೇಕು, ಇದರಿಂದಾಗಿ ನರಮೇಧವನ್ನು ನಿಲ್ಲಿಸಬಹುದು ಎಂದು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತಮಿಳುನಾಡು ಸಿಎಂ ಗಾಜಾದಲ್ಲಿನ ಹತ್ಯೆಗಳನ್ನು ಸಾರ್ವಜನಿಕವಾಗಿ ಖಂಡಿಸಿದ್ದು, ಇಸ್ರೇಲ್ ವಿರೋಧಿ ನಿಲುವನ್ನು ತೆಗೆದುಕೊಂಡಿದ್ದಾರೆ.
ಸೆ. 8ರಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಅವರು, ಗಾಜಾದಲ್ಲಿ ನಡೆಯುತ್ತಿರುವ ಘಟನೆಗಳಿಂದ ಪದಗಳಲ್ಲಿ ಹೇಳಲಾಗದಷ್ಟು ಆಘಾತಕ್ಕೊಳಗಾಗಿದ್ದೇನೆ. ಈ ರೀತಿ ಮುಗ್ಧ ಜೀವಗಳು ಪುಡಿಪುಡಿಯಾದಾಗ, ಮೌನವಾಗಿರುವುದು ಒಂದು ಆಯ್ಕೆಯಲ್ಲ ಎಂದಿದ್ದರು.
ಸಿಪಿಐ(ಎಂ) ಕೂಡ ಇಸ್ರೇಲ್ ಜೊತೆಗಿನ ಎಲ್ಲಾ ವ್ಯಾಪಾರ ಒಪ್ಪಂದಗಳನ್ನು ರದ್ದುಗೊಳಿಸುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿತ್ತು. ಏರೋಸ್ಪೇಸ್ ಮತ್ತು ರಕ್ಷಣಾ ವಲಯಗಳ ಸಮಾವೇಶವಾದ ಏರೋಡೆಫ್ಕಾನ್ 2025 ರಲ್ಲಿ ಇಸ್ರೇಲಿ ಸಂಸ್ಥೆಗಳು ಭಾಗವಹಿಸುವುದನ್ನು ನಿಷೇಧಿಸಬೇಕೆಂದು ಕರೆ ನೀಡಿತ್ತು. (ಏಜೆನ್ಸೀಸ್)