ನ್ಯೂಸ್

ಮಾರ್ಯಾದೆಗೇಡು ಹತ್ಯೆಗಳ ವಿರುದ್ಧ ವಿಶೇಷ ಕಾನೂನು ರೂಪಿಸಲು ಆಯೋಗ ರಚಿಸಿದ ಸಿಎಂ ಎಂ.ಕೆ.ಸ್ಟಾಲಿನ್​| M K Stalin

Chennai: ಜಾತಿ ಮತ್ತು ಧರ್ಮಾಧಾರಿತ ಮರ್ಯಾದೆಗೇಡು ಹತ್ಯೆಗಳನ್ನು ತಡೆಯುವ ನಿಟ್ಟಿನಲ್ಲಿ, ಅಂತಹ ಅಪರಾಧಗಳನ್ನು ತಡೆಗಟ್ಟಲು ವಿಶೇಷ ಕಾನೂನು ರೂಪಿಸಲು ನಿವೃತ್ತ ಹೈಕೋರ್ಟ್​ ನ್ಯಾಯಮೂರ್ತಿ ಕೆ.ಎಂ.ಭಾಷಾ ನೇತೃತ್ವದಲ್ಲಿ ಆಯೋಗವನ್ನು ರಚಿಸಿದ್ದಾಗಿ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್(M K Stalin) ಇಂದು(ಅ. 17) ವಿಧಾನಸಭೆಯಲ್ಲಿ ಹೇಳಿದ್ದಾರೆ.

ಈ ಕುರಿತು ವಿಧಾನಸಭೆಯಲ್ಲಿ ಮಾತನಾಡಿರುವ ಅವರು, ಆಯೋಗವು ಜಾತಿ ಮತ್ತು ಗೌರವಕ್ಕೆ ಸಂಬಂಧಿಸಿದ ಹತ್ಯೆಗಳ ಘಟನೆಗಳನ್ನು ಸಮಗ್ರವಾಗಿ ಅಧ್ಯಯನ ಮಾಡುತ್ತದೆ. ಸಂತ್ರಸ್ತ ಕುಟುಂಬಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಕಾನೂನು ತಜ್ಞರನ್ನು ಸಂಪರ್ಕಿಸುತ್ತದೆ. ಇಂತಹ ಹತ್ಯೆಯ ಪದ್ಧತಿಯನ್ನು ತೊಡೆದುಹಾಕಲು ಹೊಸ ಕಾನೂನು ರೂಪಿಸಲು ರಾಜ್ಯ ಕಾನೂನು ಆಯೋಗಕ್ಕೆ ಶಿಫಾರಸು ಮಾಡುತ್ತದೆ ಎಂದಿದ್ದಾರೆ.

ತಮಿಳುನಾಡಿನ ಸಾಮಾಜಿಕ ನ್ಯಾಯ ಚಳುವಳಿಗಳ ದೀರ್ಘ ಇತಿಹಾಸವನ್ನು ನೆನಪಿಸಿದ ಸ್ಟಾಲಿನ್, ನಮ್ಮ ಯುವಕ-ಯುವತಿಯರನ್ನು ಜಾತಿ ಅಥವಾ ಕುಟುಂಬದ ಗೌರವದ ಹೆಸರಿನಲ್ಲಿ ಕೊಲ್ಲುವುದನ್ನು ನಾವು ಅನುಮತಿಸುವುದಿಲ್ಲ. ಜೊತೆಗೆ ಈ ಸರ್ಕಾರ ಮೂಕ ಪ್ರೇಕ್ಷಕರಾಗಿ ನೋಡುವುದಿಲ್ಲ. ಇಂತಹ ಹತ್ಯೆಗಳನ್ನು ನಿಲ್ಲಿಸಲು ವಿಶೇಷ ಕಾನೂನನ್ನು ತರಲು ತಮಿಳುನಾಡು ಮುಂದಾಳತ್ವ ವಹಿಸುತ್ತದೆ ಎಂದು ಹೇಳಿದ್ದಾರೆ.

ಈಗಾಗಲೇ ಇರುವ ಭಾರತೀಯ ನ್ಯಾಯ ದಂಡ ಸಂಹಿತೆಯು ಕೊಲೆ ಮತ್ತು ಪ್ರಚೋದನೆಯ ಅಪರಾಧಗಳನ್ನು ಒಳಗೊಳ್ಳುತ್ತದೆಯಾದರೂ, ಮರ್ಯಾದಾ ಹತ್ಯೆಗಳ ಹಿಂದಿನ ನಿರ್ದಿಷ್ಟ ಸಾಮಾಜಿಕ ಆಯಾಮಗಳ ಬಗ್ಗೆ ತ್ವರಿತವಾಗಿ ಕ್ರಮಕೈಗೊಳ್ಳುವಲ್ಲಿ, ಕಠಿಣ ಶಿಕ್ಷೆಯನ್ನು ಖಚಿತಪಡಿಸಲು ವಿಶೇಷ ಕಾನೂನು ಚೌಕಟ್ಟನ್ನು ಬಯಸುತ್ತದೆ ಎಂದು ತಿಳಿಸಿದ್ದಾರೆ.

ನಮ್ಮ ಸರ್ಕಾರವು ಈ ಹತ್ಯೆಗಳನ್ನು ನಿರ್ಮೂಲನೆ ಮಾಡಲು ಮತ್ತು ಜಾತಿ ಮತ್ತು ಧರ್ಮದ ರೇಖೆಗಳನ್ನು ಮೀರಿ ನಿರ್ಭಯವಾಗಿ ಮದುವೆಯಾಗುವ ವ್ಯಕ್ತಿಗಳ ಹಕ್ಕನ್ನು ರಕ್ಷಿಸಲು ವಿಶೇಷ ಶಾಸನವನ್ನು ತರಲು ಆಯೋಗದ ವರದಿಯು ಆಧಾರವಾಗಲಿದೆ. ಇಂತಹ ಹತ್ಯೆಗಳು ಸಮಾನತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕಿನ ಮೇಲಿನ ದಾಳಿ ಎಂದು ಪ್ರತಿಪಾದಿಸಿದ ಅವರು, ಪೆರಿಯಾರ್ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರತಿಪಾದಿಸಿದ ಸಾಮಾಜಿಕ ನ್ಯಾಯದ ಆದರ್ಶಗಳಿಗೆ ತಮಿಳುನಾಡಿನ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

ತಮಿಳುನಾಡಿನಲ್ಲಿ ನಡೆದ ಸರಣಿ ಮರ್ಯಾದಾ ಹತ್ಯೆಗಳ ಬಳಿಕ ಸರ್ಕಾರ ಅವುಗಳ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದೆ. ಇತ್ತೀಚೆಗೆ ದಲಿತ ಟೆಕ್ಕಿ ಕವಿನ್ ಅವರ ಕೊಲೆ, ಆತನ ಪ್ರಬಲ ಜಾತಿಗೆ ಸೇರಿದ ಗೆಳತಿಯ ಸಹೋದರನಿಂದ ನಡೆದಿತ್ತು. ಈ ಕ್ರೂರ ಹತ್ಯೆಯು ಸಾರ್ವಜನಿಕ ಚರ್ಚೆಯನ್ನು ಮತ್ತೆ ಹುಟ್ಟುಹಾಕಿತ್ತು. (ಏಜೆನ್ಸೀಸ್)