ನ್ಯೂಸ್

ಶುಚಿ ಕಿಟ್ ಗುಣಮಟ್ಟಕ್ಕೆ ಸಿಎಂ ತೀವ್ರ ಅಸಮಾಧಾನ, ಹೊಸ ಟೆಂಡರ್‌ಗೆ ಅನುಮತಿ

ಶ್ರೀಕಾಂತ್ ಶೇಷಾದ್ರಿ

ಬೆಂಗಳೂರು: ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಪ್ರಗತಿ ಪರಿಶೀಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಕ್ಕಳಿಗೆ ವಿತರಿಸುವ ಶುಚಿ ಸಂಭ್ರಮ ಕಿಟ್ ಗುಣಮಟ್ಟದ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಶುಚಿ ಸಂಭ್ರಮ ಕಿಟ್ ತರಿಸಿ ಅದರಲ್ಲಿದ್ದ ಟೂತ್ ಬ್ರಷ್, ಪೇಸ್ಟ್, ಸೋಪು ಮತ್ತು ಕೊಬ್ಬರಿ ಎಣ್ಣೆಯ ಗುಣ ಮಟ್ಟದ ಬಗ್ಗೆ ಗರಂ ಆದ ಸಿಎಂ, ಕಿಟ್‌ನಲ್ಲಿನ ವಸ್ತುಗಳ ತೂಕದ ಪ್ರಮಾಣ ಮತ್ತು ಗುಣಮಟ್ಟ ಹೆಚ್ಚಿಸಲು ಸೂಚನೆ ನೀಡಿದರು.

ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆಗಳ ವಸತಿ ನಿಲಯಗಳ 5,48,000 ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಟೂತ್ ಪೇಸ್ಟ್, ಬ್ರಶ್, ಕೊಬ್ಬರಿ ಎಣ್ಣೆ, ಮೈ ಸೋಪು, ಬಟ್ಟೆ ಸೋಪು ಒಳಗೊಂಡ 93 ರೂ.ಗಳ ಕಿಟ್ ಗಂಡುಮಕ್ಕಳಿಗೆ ಹಾಗೂ ಹೆಣ್ಣು ಮಕ್ಕಳಿಗೆ 135 ರೂ.ಗಳ ವೆಚ್ಚದಲ್ಲಿ ಶುಚಿ ಸಂಭ್ರಮ ಕಿಟ್ ನೀಡಲು ಟೆಂಡರ್ ಕರೆಯಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ಕಿಟ್‌ಗಳ ವಿತರಣೆಗೆ ವರ್ಷಕ್ಕೆ 90 ಕೋಟಿ ರೂ.ಗಳ ವೆಚ್ಚವಾಗಲಿದೆ.

75 ಗ್ರಾಂಗಳ ಬದಲಿಗೆ 125 ಗ್ರಾಂ ಗಳ ಸೋಪು ಒದಗಿಸುವಂತೆ ಹಾಗೂ ಇದರಲ್ಲಿ ಕೇವಲ ಶೇ.5 ರಷ್ಟು ಮಾತ್ರ ಲಾಭ ಇಟ್ಟುಕೊಳ್ಳಬೇಕೆಂದು ಮೈಸೂರು ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಸಿಎಂ ಸ್ಪಷ್ಟ ಮಾತುಗಳಲ್ಲಿ ಎಚ್ಚರಿಸಿದರು.

ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆ ಪಿಜಿ, ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಖರೀದಿಸಲು ಸಹ ಇದೇ ವೇಳೆ ತೀರ್ಮಾನಿಸಲಾಯಿತು.

ಪ್ರಸ್ತುತ ಪ್ರೀ ಮೆಟ್ರಿಕ್ ವಿದ್ಯಾರ್ಥಿಗಳಿಗೆ ತಲಾ 1650ರೂ., ಪೋಸ್ಟ್ ಮೆಟ್ರಿಕ್ ಮಕ್ಕಳಿಗೆ 1750 ರೂ.ಗಳನ್ನು ಆಹಾರಧಾನ್ಯಗಳಿಗಾಗಿ ನಿಗದಿಪಡಿಸಿದೆ. ರಾಗಿ, ಧಾನ್ಯ, ಎಣ್ಣೆಯನ್ನು ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ತಾಲೂಕುವಾರು ಪ್ಯಾಕೇಜ್ಗಳ ಟೆಂಡರ್ ಕರೆದು ಪಡೆಯಲಾಗುತ್ತಿದೆ. ಈ ವ್ಯವಸ್ಥೆ ಯನ್ನು ಸರಿಪಡಿಸಿ ಗುಣಮಟ್ಟದ ಆಹಾರಪದಾರ್ಥಗಳನ್ನು ಒದಗಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಟೆಂಡರ್ ಕರೆಯುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಲು ಪ್ರಸ್ತಾವನೆ ಸಲ್ಲಿಸುವಂತೆ ಹಾಗೂ ಆಹಾರಧ್ಯಾನ ಪಡೆಯುವ ಕುರಿತ ಸಾಫ್ಟ್ೃವೇರ್ ಅಭಿವೃದ್ಧಿ ಪಡಿಸಬೇಕು ಎಂದು ನಿರ್ದೇಶನ ನೀಡಿದರು.

ಹೋಬಳಿಗೊಂದರಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಶಾಲೆ ಇರಬೇಕು ಎಂದು ಆದೇಶಿಸಿದ್ದು, 178 ಹೋಬಳಿಗಳಲ್ಲಿ ಕ್ರೈಸ್ ಶಾಲೆಗಳಿಲ್ಲ. ಕೆಲವು ಹೋಬಳಿಗಳಲ್ಲಿ 3-4 ಶಾಲೆಗಳಿವೆ. ಕಸಬಾ ಹೋಬಳಿ ತೆಗೆದರೆ 134 ಶಾಲೆಗಳನ್ನು ತೆರೆಯಬೇಕಿದೆ. ಸ್ವಂತ ಕಟ್ಟಡ ಇಲ್ಲದ ಶಾಲೆಗಳಿದ್ದರೆ, ಅದೇ ಕ್ಷೇತ್ರದ ಮತ್ತೊಂದು ಹೋಬಳಿಗೆ ಶಾಲೆಯನ್ನು ಸ್ಥಳಾಂತರ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಮೊರಾರ್ಜಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರ ಗುಣಮಟ್ಟವೂ ಮುಖ್ಯ. ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ ನೀಡಿ ಗುಣಮಟ್ಟದ ಶಿಕ್ಷಣ ನೀಡುವ ಮಟ್ಟಕ್ಕೆ ತರಬೇಕು ಮತ್ತು ಐಸೆಕ್ ಮತ್ತು ಐಐಎಸ್‌ಸಿ ಸಂಸ್ಥೆಗಳ ಮೂಲಕ ಕ್ರೈಸ್ ಶಾಲೆಗಳ ಶಿಕ್ಷಕರ ಮೌಲ್ಯಮಾಪನ ಮಾಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಶಾಲೆಗೆ ಪ್ರವೇಶ ನೀಡುವ ಸಂದರ್ಭದಲ್ಲಿ ಶೇ 80ರಷ್ಟು ಅರ್ಹತೆಯಾಧಾರದ ಮೇಲೆ ಹಾಗೂ ಶೇ 20 ರಷ್ಟು ಸ್ಥಳೀಯರಿಗೆ ಮೀಸಲಿಡಬೇಕು. ಈ ನಿಟ್ಟಿನಲ್ಲಿ ಸಾಧಕ ಬಾಧಕಗಳನ್ನು ಪರಿಶೀಲಿಸುವಂತೆ ಸೂಚಿಸಿದರು.

ಇವತ್ತು ಯಾವ ಮಕ್ಕಳೂ ದಡ್ಡರಲ್ಲ, ಅವಕಾಶ ಮತ್ತು ಉತ್ತಮ ಕಲಿಕೆಯ ವಾತಾವರಣ ಸಿಕ್ಕರೆ ಎಲ್ಲರೂ ರ‌್ಯಾಂಕ್ ಪಡೆಯುತ್ತಾರೆ. ಕಲಿಕೆಯ ವಾತಾವರಣ ಪರಿಣಾಮ ಬೀರುತ್ತದೆ. ಮೊರಾರ್ಜಿ ಶಾಲೆಗಳನ್ನು ಪ್ರಾರಂಭಿಸಿದ್ದೇ ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು, ದಡ್ಡರನ್ನು ಜಾಣರನ್ನಾಗಿ ಮಾಡಬೇಕೆಂಬ ಉದ್ದೇಶದಿಂದ. ಇದನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡುವಂತೆ ಸೂಚಿಸಿದರು.