ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ 'ಜನಸ್ಪಂದನ' ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂದಿದೆ. ನಾಡಿನ ದೊರೆ ಮುಂದೆ ಅಹವಾಲು ಹೇಳಿಕೊಂಡರೆ ತ್ವರಿತವಾಗಿ ಪರಿಹಾರ ಸಿಗುತ್ತದೆ ಆಶಾಭಾವನೆಯೊಂದಿಗೆ ಧಾವಿಸಿದ ಜನರ ಸರತಿ ಸಾಲು ಕಿ.ಮೀ.ಗಟ್ಟಲೆ ಉದ್ದವಾಗಿತ್ತು.
ಬಹುತೇಕರದು ಕಂದಾಯ, ವಸತಿ, ಒತ್ತುವರಿ, ಪಿಂಚಣಿ, ನಿರುದ್ಯೋಗ ಮತ್ತಿತರ ಸಮಸ್ಯೆಗಳ ಸರಮಾಲೆ. ದೌರ್ಜನ್ಯ, ಜಮೀನು ಒತ್ತುವರಿ, ಪೋಡಿ ಖಾತೆ ಮಾಡಿಕೊಡುವಲ್ಲಿ ವಿಳಂಬ, ಮಂಜೂರಾದ ಜಮೀನಿಗೆ ಹಕ್ಕುಪತ್ರ ನೀಡದೆ ಕಚೇರಿಗೆ ಅಲೆದಾಡಿಸಿ ಸತಾಯಿಸುತ್ತಿರುವ ದೂರುಗಳು ಸುರಿಮಳೆಯಾದವು.
ಕೃಷ್ಣಾದ ಬಳಿ ಸರತಿ ಸಾಲಿಗೆ ವ್ಯವಸ್ಥೆ ಮಾಡಿದ್ದರೂ ಮುಖ್ಯ ದ್ವಾರದ ಬಳಿ ಯಾವ ಸಮಸ್ಯೆ ಯಾರ ಬಳಿ ಹೇಳಿಕೊಳ್ಳಬೇಕು ಎಂದು ಸೂಕ್ತ ಮಾಹಿತಿ, ಮಾರ್ಗದರ್ಶನ ನೀಡುವವರಿಲ್ಲದೆ ಬಂದವರ ಪರದಾಟ, ಸಿಟ್ಟು-ಸೆಡವು, ನೂಕು-ನುಗ್ಗಲು ಸಾಮಾನ್ಯವಾಗಿತ್ತು.
ಸಿಎಂ ಪರಿಹಾರ ನಿಧಿ, ಅನುಕಂಪ ಆಧಾರಿತ ಹುದ್ದೆ, ವರ್ಗಾವಣೆ, ಪಡಿತರ ಚೀಟಿ, ಕೈಗೊಂದು ಕೆಕಸ ವಸತಿಗೆ ಸಂಬಂಧಿಸಿದಂತೆ ಅಹವಾಲು ನೇರ ಸಿಎಂ ಸಿದ್ದರಾಮಯ್ಯ ಬಳಿ ಹೇಳಿಕೊಳ್ಳಲು ಬಂದವರ ಪೈಕಿ ಅನೇಕರಿಗೆ ನಿರಾಸೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಅರ್ಜಿ ಸ್ವೀಕರಿಸಿ, ಕೆಲವೊಂದಕ್ಕೆ ಹಿಂಬರಹ ನೀಡಿ, ಸಂಬಂಧಪಟ್ಟ ಅಧಿಕಾರಿಗಳು ಬಗೆಹರಿಸಲಿದ್ದಾರೆ ಎಂದು ಹೇಳಿ ಕಳುಹಿಸುತ್ತಿದ್ದ ಕಾರಣ
ಇಷ್ಟು ಹೇಳಿದ ಮೇಲೂ ಜಾಗ ಬಿಟ್ಟು ಕದಲದವರಿಗೆ ಪೊಲೀಸರು ಬೇರೆತವರಿಗೆ ಅವಕಾಶ ಕೊಡಿ ಎಂದು ಮನವೊಲಿಸಿ ಸಾಗ ಹಾಕುತ್ತಿದ್ದುದು ಕಂಡು ಬಂತು. ಹಲವರಿಂದ ಸಿಎಂ ನೇರ ಅಹವಾಲು ಸ್ವೀಕರಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದ ನಂತರವೂ ಅನೇಕರು ನಿರ್ದಿಷ್ಟ ಕ್ರಮದ ಕಾದು ನಿಂತಾಗ 'ಆಯ್ತು ನಡೀರಿ' ಈಗ ಆಯ್ತಲ್ಲ ಎಂದು ಪದೇ ಪದೆ ತಿಳಿ ಹೇಳಿ ಕಳುಹಿಸುತ್ತಿದ್ದರು.
ಕಿಡ್ನಿ ಕಾಯಿಲೆಯಿಂದ ಬಳಲುತ್ತಿರುವ ಬಸವರಾಜ ಎನ್ನುವವರಿಗೆ ಒಂದು ಲಕ್ಷ ರೂ., ಅನಾರೋಗ್ಯ ಪೀಡಿತ ಮೂರ್ತಿ ಎನ್ನುವವರಿಗೆ 30 ಸಾವಿರ ರೂ. ನೆರವನ್ನು ಸಿಎಂ ಪರಿಹಾರ ನಿಧಿಯಿಂದ ಸಿದ್ದರಾಮಯ್ಯ ಅವರು ಸ್ಥಳದಲ್ಲೇ ಮಂಜೂರು ಮಾಡಿದರು. ಮಂಜೂರು ಪತ್ರ ನೀಡಲು ಕರೆದಾಗ ಅಹವಾಲು ಸಲ್ಲಿಸಿದ್ದ ಬಸವರಾಜ ಜಾಗ ಖಾಲಿ ಮಾಡಿದ್ದರು. ನಂತರ ಸಂಬಂಧಿಸಿದ ಜಿಲ್ಲಾ ಆಡಳಿತದಿಂದ ತಲುಪಿಸುವ ವ್ಯವಸ್ಥೆ ಮಾಡಲು ಸಿಎಂ ಸೂಚಿಸಿದರು.