ನ್ಯೂಸ್

ದ್ವೇಷದ ರಾಜಕಾರಣ, ತೇಜೋವಧೆ ಮಾಡುವ ಟ್ರೋಲ್​ಗಳ ವಿರುದ್ಧ ಕಠಿಣ ಕ್ರಮ; ಸಿಎಂ ಖಡಕ್ ಸೂಚನೆ!

ಬೆಂಗಳೂರು: ರಾಜ್ಯದ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಹಲವು ಬದಲಾವಣೆಗಳನ್ನು ತರುವಲ್ಲಿ ನಿರತರಾಗಿದ್ದಾರೆ. ಈ ನಿಟ್ಟಿನಲ್ಲಿ ಬದಲಾವಣೆಯತ್ತ ಹೆಚ್ಚು ಗಮನ ಹರಿಸುತ್ತಿರುವ ಸಿಎಂ ಸಿದ್ದರಾಮಯ್ಯ, ಇತ್ತೀಚೆಗೆ ನಡೆದ ನಾಡಿನ ಸಾಹಿತಿ ಮತ್ತು ಬರಹಗಾರರ ಸಭೆಯಲ್ಲಿ ರಾಜ್ಯದ ಜನತೆಗೆ ಕೆಲವು ಭರವಸೆಗಳನ್ನು ನೀಡಿದ್ದಾರೆ. ನೀಡಿದ ಭರವಸೆಗಳು ಈ ಕೆಳಕಂಡಂತಿವೆ:

ಪಠ್ಯ ಮತ್ತು ಪಾಠಗಳ ಮೂಲಕ ಮಕ್ಕಳ ಮನಸ್ಸನ್ನು ಕಲುಷಿತಗೊಳಿಸಲು ನಡೆಸಿರುವ ಕೃತ್ಯ ಅಕ್ಷಮ್ಯ. ಶೈಕ್ಷಣಿಕ ವರ್ಷ ಆರಂಭ ಆಗಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗದಂತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಕನ್ನಡ ಹೋರಾಟಗಾರರು, ರೈತ-ಕಾರ್ಮಿಕ-ದಲಿತ ಚಳವಳಿಗಳ ಹೋರಾಟಗಾರರು ಮತ್ತು ಸಾಹಿತಿ, ಬರಹಗಾರರ ಮೇಲೆ ಹಾಕಿರುವ ಸುಳ್ಳು ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಹೇಳಿದ್ದಾರೆ.

ಹೊಸ ಶಿಕ್ಷಣ ನೀತಿ ಹೆಸರಲ್ಲಿ ಶಿಕ್ಷಣ ಕ್ಷೇತ್ರವನ್ನು ಹಾಳುಗೆಡವಲು ಅವಕಾಶ ಕೊಡುವುದಿಲ್ಲ. ಈ ಬಗ್ಗೆ ಮತ್ತೊಂದು ಪ್ರತ್ಯೇಕವಾದ ಸಭೆ ಕರೆದು ಸಮಗ್ರವಾಗಿ ಚರ್ಚಿಸಿ ನಿಷ್ಠುರ ಮತ್ತು ಖಚಿತವಾದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು. ಅನೈತಿಕ ಪೊಲೀಸ್ ಗಿರಿ, ದ್ವೇಷದ ರಾಜಕಾರಣ, ತೇಜೋವಧೆ ಮಾಡುವ ಟ್ರೋಲ್​ಗಳು ಮತ್ತು ಸಾಹಿತಿಗಳಿಗೆ ಬೆದರಿಕೆ ಹಾಕುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಈಗಾಗಲೇ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಖಡಕ್ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.