ಕೋಲಾರ: ನವೆಂಬರ್ ತಿಂಗಳಲ್ಲಿ ಕ್ರಾಂತಿ ಆಗುತ್ತೊ, ಭ್ರ್ರಾಂತಿ ಆಗುತ್ತೋ ಗೊತ್ತಿಲ್ಲ. ಕ್ರಾಂತಿ ವಿಚಾರ ಮಾಧ್ಯಮಗಳ ಮತ್ತು ಕೆಲವರ ಸೃಷ್ಟಿ. ಪಕ್ಷದಲ್ಲಿ ಸಿಎಂ, ಹೈಕಮಾಂಡೇ ಪರಮೋಚ್ಚ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ನಗರದ ಬೆಂಗಳೂರು ಉತ್ತರ ವಿವಿ ಸರ್ಕಾರಿ ಮಹಿಳಾ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ 136 ಮಂದಿ ಕೈ ಶಾಸಕರು ಆಯ್ಕೆಯಾಗಿದ್ದು, 2 ಪಕ್ಷೇತರ ಶಾಸಕರು ಬೆಂಬಲ ಸೂಚಿಸಿದ್ದಾರೆ. ಶಾಸಕರು, ವಿಧಾನ ಪರಿಷತ್ ಸದಸ್ಯರು ಮಂತ್ರಿಯಾಗಬೇಕು ಎಂಬ ಬಯಕೆ ಇರುತ್ತದೆ. ಹೈಕಮಾಂಡ್ ಸೂಚಿಸಿದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ. ಪಕ್ಷ ನಮ್ಮನ್ನು ಗುರುತಿಸಿ ಅವಕಾಶ ಮಾಡಿಕೊಟ್ಟಿದ್ದು, ಆಡಳಿತಾತ್ಮಕ, ಪಕ್ಷದ ದೃಷ್ಟಿಯಿಂದ ಹೈಕಮಾಂಡ್ ತೆಗೆದುಕೊಳ್ಳುವ ಬದಲಾವಣೆಗೆ ಸ್ಪಂದಿಸಲಾಗುವುದು ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ 2028ರಲ್ಲಿ ಸ್ಪರ್ಧೆ ಮಾಡುವ ಕುರಿತು ಪ್ರತಿಕ್ರಿಯಿಸಿದ ಸುಧಾಕರ್, ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯದ ತೀರ್ಮಾನ ತೆಗೆದುಕೊಳ್ಳಲು ನಮಗೆ ಅಧಿಕಾರವಿಲ್ಲ. ಇದೆಲ್ಲ ಅವರ ವೈಯಕ್ತಿಕವಾಗಿದ್ದು, ಪಕ್ಷದ ತೀರ್ಮಾನವೂ ಒಂದು ಭಾಗವಾಗಿರುತ್ತದೆ ಎಂದು ತಿಳಿಸಿದರು.
* ಕೇಂದ್ರದಲ್ಲೂ ಅನುದಾನದ ತಾರತಮ್ಯ
ಅನುದಾನದ ವಿಚಾರಕ್ಕಾಗಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ನ್ಯಾಯಾಲಯದ ಮೊರೆ ಕುರಿತು ಪ್ರತಿಕ್ರಿಸಿದ ಸಚಿವರು, ವೆಂಕಟಶಿವಾರೆಡ್ಡಿ ಹಿರಿಯ ಶಾಸಕರು, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಅನುದಾನಕ್ಕಾಗಿ ಏನೆಲ್ಲ ಪರಿಸ್ಥಿತಿ ಅನುಭವಿಸಿದ್ದೇವೆ ಎಂಬುದನ್ನು ನೆನಪಿಸಿಕೊಳ್ಳಬೇಕು. ಅನುದಾನದ ತಾರತಮ್ಯ ಕೇಂದ್ರ ಸರ್ಕಾರದಲ್ಲೂ ಇದೆ. ಬಿಜೆಪಿ ಅಧಿಕಾರ ಇರುವ ರಾಜ್ಯಗಳಲ್ಲಿ ಕಾಂಗ್ರೆಸ್ ಶಾಸಕರಿಗೆ ಅನುದಾನ ದೊರೆಯುತ್ತಿಲ್ಲ. ಇದು ನಿನ್ನೆಮೊನ್ನೆಯ ವಿಚಾರವಲ್ಲ ಎಂದು ಸಚಿವರು ಹೇಳಿದರು.
* ಆದೇಶ ಪಾಲನೆಗೆ ಸೂಚನೆ
ಆರ್ಎಸ್ಎಸ್ ಸೇರಿ ಸಂ&ಸಂಸ್ಥೆಗಳ ಚಟುವಟಿಕೆಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ಮಾಡಬಾರದು ಎಂದು ಆದೇಶ ಮಾಡಲಾಗಿದೆ. 2013ರಲ್ಲಿ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಅನುಮತಿಯಿಲ್ಲದೆ ಕಾರ್ಯಕ್ರಮ ರೂಪಿಸಬಾರದು ಎಂದು ಆದೇಶಿಸಿದ್ದಾರೆ. ಇದನ್ನು ಪಾಲನೆ ಮಾಡಲು ಸೂಚಿಸಿದ್ದೇವೆ ಹೊರತು, ಬೇರೆ ಉದ್ದೇಶ ಇಲ್ಲ. ಈ ಕುರಿತು ಕೆಲವರು ಧಾರವಾಡ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಸರ್ಕಾರವು ಮೇಲ್ಮನವಿ ಸಲ್ಲಿಸಿ ಮನವೊಲಿಸುವ ಪ್ರಯತ್ನ ಮಾಡಲಿದೆ ಎಂದು ಸುಧಾಕರ್ ತಿಳಿಸಿದರು.
* ಇತಿಮಿತಿಯೊಳಗೆ ಮಾತನಾಡಿದರೆ ಗೌರವ
ಪ್ರತಾಪ್ ಸಿಂಹ, ಪ್ರದಿಪ್ ಈಶ್ವರ್ ಹೇಳಿಕೆ ಕುರಿತು ಮಾತನಾಡಿದ ಸುಧಾಕರ್, ಸಾರ್ವಜನಿಕ ಬದುಕಿನಲ್ಲಿ ಇರುವವರು ಭಾಷೆ ಬಳಕೆ ಮಾಡುವ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಯಾರಿಗೂ ನಾವು ಬುದ್ಧಿವಾದ ಹೇಳುವವರಲ್ಲ. ಅವರೆ ಪ್ರಬುದ್ಧರಿದ್ದು ಅರ್ಥ ಮಾಡಿಕೊಳ್ಳಬೇಕು, ಇತಿಮಿತಿಯೊಳಗೆ ಮಾತನಾಡಿದರೆ ಗೌರವ ದೊರೆಯುತ್ತದೆ ಎಂದು ಕಿವಿಮಾತು ಹೇಳಿದರು.
* ಆಂಧ್ರದಲ್ಲಿ ಭೂಮಿ ಬೆಲೆ ಕಡಿಮೆ
ಗೂಗಲ್ ಸಂಸ್ಥೆಯವರು ವಿಶಾಖಪಟ್ಟಂಗೆ ಹೋಗಿರುವುದು ವೈಯಕ್ತಿಯವಾಗಿ ಎಂಬುದನ್ನು ಸಂಸ್ಥೆಯ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ. ಅಲ್ಲಿ ಭೂಮಿ ಬೆಲೆ ಕಡಿಮೆಯಿದ್ದು, ವಿದ್ಯುತ್, ನೀರು ಉಚಿತವಾಗಿ ನೀಡುವುದಾಗಿ ಹೇಳಿದ್ದಾರೆ. ಈ ರೀತಿ ಭರವಸೆ ನೀಡುವುದೆಲ್ಲ ಹೊಸ ರಾಜ್ಯಗಳ ಸಿಎಂಗಳು. ನಮ್ಮ ರಾಜ್ಯಕ್ಕೂ ಅಲ್ಲಿಗೂ ಭೂಮಿ ಬೆಲೆಯಲ್ಲಿ ವ್ಯತ್ಯಾಸವಿದೆ. ಅದ್ದರಿಂದ ಹೋಗಿರಬಹುದು. ಬೆಂಗಳೂರಿನಲ್ಲಿ ಅತಿ ಹೆಚ್ಚು ಮಾನವ ಸಂಪನ್ಮೂಲವಿದೆ. ಭೂಮಿ ಬೆಲೆ ಗಗನಕ್ಕೇರಿರಬಹುದು, ಅಗತ್ಯ ಇರುವವರು ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದಾಗುತ್ತಾರೆ ಎಂದು ಸುಧಾಕರ್ ತಿಳಿಸಿದರು.