ನ್ಯೂಸ್

ಮಂಡಿ ನೋವಿನ ನಡುವೆಯೂ ಬಜೆಟ್ ಪೂರ್ವಭಾವಿ ಸಭೆ ನಡೆಸಿದ ಸಿಎಂ| Pre-Budget Meeting

ಬೆಂಗಳೂರು: ಮಂಡಿ ನೋವಿನ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಶುಕ್ರವಾರವೂ ಬಜೆಟ್ ಪೂರ್ವಭಾವಿ ಸಭೆ ನಡೆಸಿದರು(CM held a pre-budget meeting amid knee pain).

ವಾಣಿಜ್ಯ ತೆರಿಗೆ, ಅಬಕಾರಿ, ಮುದ್ರಾಂಕ ಮತ್ತು ನೋಂದಣಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಜತೆ ಬಜೆಟ್ ತಯಾರಿಕೆಗೆ ಸಂಬಂಧಿಸಿದಂತೆ ಸುದೀರ್ಘ ಸಮಾಲೋಚನೆ ನಡೆಸಿದರು.

ಮುಂದಿನ ಆರ್ಥಿಕ ವರ್ಷದಲ್ಲಿ ಇಲಾಖೆಗಳಲ್ಲಿ ಜಾರಿಗೊಳಿಸಬೇಕಾಗಿರುವ ಯೋಜನೆಗಳು, ಜನೋಪಯೋಗಿ ಕಾರ್ಯಕ್ರಮಗಳು ಹಾಗೂ ಆದಾಯ ಕ್ರೋಢೀಕರಣಕ್ಕೆ ಇರುವ ಅವಕಾಶಗಳ ಬಗ್ಗೆ ಚರ್ಚಿಸಿದರು.

ಅಬಕಾರಿ ಇಲಾಖೆಯಲ್ಲಿ ಆದಾಯ ಸಂಗ್ರಹಕ್ಕೆ ಇರುವ ಅವಕಾಶಗಳು, ಪ್ರಸ್ತುತ ವರ್ಷದ ತೆರಿಗೆ ವಸೂಲಿ ಪ್ರಮಾಣ ಮತ್ತು ಪ್ರಗತಿ ಬಗ್ಗೆ ಸಚಿವ ಆರ್.ಬಿ.ತಿಮ್ಮಾಪುರ ಸಿಎಂಗೆ ಮಾಹಿತಿ ನೀಡಿದರು. ಗಣಿ ಇಲಾಖೆಯಲ್ಲಿ ಹಸಿರು ನ್ಯಾಯಪೀಠದ ಆದೇಶ ಪಾಲನೆ, ಗಣಿ ಗುತ್ತಿಗೆ, ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿ ಮತ್ತಿತರ ವಿಷಯಗಳ ಕುರಿತು ಚರ್ಚಿಸಿದರು. ಗಣಿ ಸಚಿವ ಭೂ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ವಿವರಣೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ವಾಣಿಜ್ಯ ತೆರಿಗೆ ಇಲಾಖೆ ಚರ್ಚೆ ವೇಳೆ ಈ ವರ್ಷದ ಗುರಿ ಮತ್ತು ಸಾಧನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ತೆರಿಗೆ ಬಾಕಿ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಸೂಚಿಸಿದರು ಎನ್ನಲಾಗಿದೆ.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿನ ತಾಂತ್ರಿಕ ಸಮಸ್ಯೆ, ಇಲಾಖೆ ಪ್ರಗತಿ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಿಎಂಗೆ ಮಾಹಿತಿ ನೀಡಿದರು ಎಂದು ಹೇಳಲಾಗಿದೆ.