ನ್ಯೂಸ್

ಹಾಲಿನ ದರ ಹೆಚ್ಚಳ ವಿಚಾರ; ಕೊನೆಗಾಯ್ತು ಈ ನಿರ್ಧಾರ…

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್​) ಹಾಲಿನ ದರ ಹೆಚ್ಚಳ ಮಾಡುವ ಕುರಿತು ಕಳೆದ ಕೆಲವು ದಿನಗಳಿಂದ ಚರ್ಚೆಯಲ್ಲಿದ್ದು, ಇಂದು ಆ ಕುರಿತು ನಿರ್ಧಾರವೊಂದು ಹೊರಬಿದ್ದಿದೆ.

ನಂದಿನಿ ಹಾಲು ಹಾಗೂ ಮೊಸರಿನ ದರ ಪರಿಷ್ಕರಣೆ ಸಂಬಂಧ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಹಾಲು ಹಾಗೂ ಮೊಸರಿನ ದರವನ್ನು ಪ್ರತಿ ಲೀಟರ್‌ಗೆ ಮೂರು ರೂಪಾಯಿಯಂತೆ ಹೆಚ್ಚಿಸಲು ಹಾಲು ಒಕ್ಕೂಟಗಳು ಒತ್ತಾಯಿಸಿದ್ದವು.

ಆರೇಳು ತಿಂಗಳಿನಿಂದಲೂ ಮಹಾಮಂಡಳ ಸರ್ಕಾರವನ್ನು ಈ ಬಗ್ಗೆ ಒತ್ತಾಯಿಸುತಿದ್ದು, ಅನುಮತಿ ದೊರೆಯದಿದ್ದರೂ ಹೆಚ್ಚಳದ ಪ್ರಕಟಣೆ ಹೊರಡಿಸಿತ್ತು. ಆದರೆ, ಮುಖ್ಯಮಂತ್ರಿ ಬೊಮ್ಮಾಯಿ ಈ ನಿರ್ಧಾರಕ್ಕೆ ತಾತ್ಕಾಲಿಕ ತಡೆ ನೀಡಿ ನ.20ರಂದು ತೀರ್ಮಾನ ಮಾಡೋಣ ಎಂದು ಹೇಳಿದ್ದರು.

ಅದರಂತೆ ಇಂದು ಸಭೆ ನಡೆಸಿದ ಸಿಎಂ ಬೊಮ್ಮಾಯಿ, ಒಂದು ಸೂತ್ರ ರೂಪಿಸಿ ಬೋರ್ಡ್ ಮೀಟಿಂಗ್ ಕರೆದು ನೀವೇ ತೀರ್ಮಾನಿಸಿ ಅಂದಿದ್ದೇನೆ. ಆದರೆ ಹಿಂದಿನ ದರ ಬೇಡ ಎಂದು ಕೆಎಂಎಫ್​​ಗೆ ಸೂಚನೆ ನೀಡಿದ್ದೇನೆ. ಕೆಎಂಎಫ್​ನವರು 2 ದಿನ ಸಮಯ ತೆಗೆದುಕೊಂಡಿದ್ದಾರೆ ಎಂದು ತಿಳಿಸಿರುವ ಸಿಎಂ, ಸದ್ಯಕ್ಕೆ ಹಾಲಿನ ದರ ಹೆಚ್ಚಳ ಇಲ್ಲ ಎಂದೂ ಹೇಳಿದ್ದಾರೆ. ಗ್ರಾಹಕರಿಗೆ, ರೈತರಿಗೆ ಸಮಸ್ಯೆ ಆಗದಂತೆ ತೀರ್ಮಾನಿಸಲು ಕೆಎಂಎಫ್​​ಗೆ ಜವಾಬ್ದಾರಿ ವಹಿಸಿದ್ದಾಗಿ ಅವರು ತಿಳಿಸಿದ್ದಾರೆ.